






ಪುತ್ತೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ಜೋಗಿ ಆಯ್ಕೆಯಾಗಿದ್ದಾರೆ.


ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5 ಸಾವಿರ ರೂ ನಗದು ಮತ್ತು ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜುಲೈ 25ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ.



ಜೋಗಿ ಪರಿಚಯ:
ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಅವರು ಓದಿದ್ದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಮತ್ತು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ. 18ನೇ ವಯಸ್ಸಿಗೆ ಬರಹ ಆರಂಭಿಸಿದ್ದ ಜೋಗಿ ಬಿ.ಕಾಂ. ಪದವೀಧರರು. ಬೆಂಗಳೂರಿಗೆ 1989ರಲ್ಲಿ ಕಾಲಿಟ್ಟ ಗಿರೀಶ್ ರಾವ್ ಅವರು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಓದುಗರಿಗೆ ಪರಿಚಿತರಾದವರು. ಕನ್ನಡಪ್ರಭ ಪತ್ರಿಕೆಗೆ ಬಾಲಿವುಡ್ ಗಾಸಿಪ್’ ಎಂಬ ಅಂಕಣ ಬರೆಯುತ್ತಿದ್ದ ಜೋಗಿ ಅವರಹಾಯ್ ಬೆಂಗಳೂರು’ ಪತ್ರಿಕೆಯ ರವಿ ಕಾಣದ್ದು ಅಂಕಣ ಹೆಸರುವಾಸಿಯಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಜೋಗಿ ಅವರು ಅಚ್ಚರಿ’ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಚಲನಚಿತ್ರ, ಪುಸ್ತಕಗಳ ವಿಮರ್ಶೆಗಳಿಂದ ಗಮನ ಸೆಳೆದ ಜೋಗಿ ಜೊತೆಗೆ ಕಥೆಗಾರನಾಗಿಯೂ ಹೊರ ಹೊಮ್ಮಿದವರು. ಕ್ರಮೇಣ ಕಾದಂಬರಿಗಳ ರಚನೆಯಲ್ಲೂ ತೊಡಗಿಸಿಕೊಂಡರು. ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೆ ಜೋಗಿ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ, ಶೀರ್ಷಿಕೆ ಗೀತೆಗಳನ್ನು ಕೂಡಾ ಬರೆದಿದ್ದಾರೆ. ಇವರದ್ದೇ ಕಥೆಕಾಡ ಬೆಳದಿಂಗಳು’ ಚಲನಚಿತ್ರವಾಗಿದ್ದು ಈ ಕಥೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ. ಪತ್ರಿಕೋದ್ಯಮದ ಸಾಧನೆಗಾಗಿ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ.
ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾ ಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಸಲಾಂ ಬೆಂಗಳೂರು ಸೇರಿದಂತೆ ಹಲವು ಕಾದಂಬರಿಗಳನ್ನು ಇವರು ಬರೆದಿದ್ದಾರೆ. ಸೀಳು ನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕಥೆಗಳು, ನಾಳೆ ಮುಂತಾದವು ಇವರ ಕಥಾ ಸಂಕಲನಗಳಾಗಿವೆ. ಬಾಲಿವುಡ್ ಗಾಸಿಪ್, ರವಿ ಕಾಣದ್ದು, ಜಾನಕಿ ಕಾಲಂ- 1, ಜಾನಕಿ ಕಾಲಂ- 2, ಜೋಗಿ ಮನೆ, ಜೋಗಿ ಕಾಲಂ, ಸೀಕ್ರೇಟ್ ಡೈರಿ, ಮಹಾನಗರ ಮುಂತಾದವುಗಳು ಇವರ ಅಂಕಣ ಸಾಹಿತ್ಯಗಳಾಗಿವೆ.
ಕಥೆಗಾರ, ಕಾದಂಬರಿಗಾರ, ಅಂಕಣ, ವಿಮರ್ಶೆ, ಸಾಹಿತ್ಯಗಾರನಾಗಿ ಗುರುತಿಸಿಕೊಂಡಿರುವ ಜೋಗಿ ಮಾತುಗಾರಿಕೆಯ ಕಲೆಯನ್ನೂ ಮೈಗೂಡಿಸಿಕೊಂಡವರು. ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿದ್ದು ಇತ್ತೀಚೆಗೆ ಕನ್ನಡ ಪ್ರಭದ ಸಂಪಾದಕರಾಗಿ ಪದೋನ್ನತಿ ಪಡೆದಿರುವ ಜೋಗಿ ಇದುವರೆಗೆ 108 ಪುಸ್ತಕಗಳನ್ನು ಬರೆದಿದ್ದಾರೆ. ಶ್ರೀಧರ ರಾವ್ ಮತ್ತು ಶಾರದಾ ರಾವ್ ದಂಪತಿಯ ಪುತ್ರರಾದ ಜೋಗಿ ಅವರು ಪತ್ನಿ ಜ್ಯೋತಿ ಮತ್ತು ಪುತ್ರಿ ಖುಷಿ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಹಿತೈಷಿಯಾಗಿರುವ ಜೋಗಿ ಅವರು ಸುದ್ದಿ ಬಿಡುಗಡೆಯ 2024ರ ವಿಶೇಷಾಂಕಕ್ಕೆ ಅತ್ಯುತ್ತಮ ಕಥೆ ಬರೆದು ಪ್ರೋತ್ಸಾಹಿಸಿದ್ದರು.










