ಕುಶಲ ಹಾಸ್ಯಪ್ರಿಯರ ಸಂಘದಲ್ಲಿ “ಹಾಸ್ಯಸಂಜೆ” ಕಾರ್ಯಕ್ರಮ

0

ಪುತ್ತೂರು: ಅನುರಾಗ ವಠಾರದಲ್ಲಿ ಇತ್ತೀಚೆಗೆ ಕುಶಲ ಹಾಸ್ಯಪ್ರಿಯರ ಸಂಘದ “ಹಾಸ್ಯಸಂಜೆ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಯೋಧ ಹಾಗೂ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ರೊ. ಜ್ಯೋ ಡಿ’ಸೋಜಾ ಅವರು ಮಾತನಾಡಿ, “ಸ್ವರ್ಗ ಮತ್ತು ನರಕ ನಮ್ಮಲ್ಲೇ ಇವೆ. ಜೀವನದಲ್ಲಿ ನಮಗಿರುವ ಸುಖ ಶಾಂತಿಗಳೇ ಸ್ವರ್ಗ. ಕಷ್ಟ ಬಂದಾಗ ನರಕ. ಮರಣದ ಬಳಿಕ ಇರುವುದೆಂದುಕೊಳ್ಳುವ ಸ್ವರ್ಗ ಅಥವಾ ನರಕಗಳನ್ನು ಯಾರು ಇದುವರೆಗೆ ನೋಡಿಲ್ಲ. ಅದರ ಬಗ್ಗೆ ಹೇಳಿದವರೂ ಇಲ್ಲ. ಇದು ನಂಬಿಕೆ ಮಾತ್ರ” ಎಂದರು.

ಯೋಧರ ತರಬೇತಿ ಅತ್ಯಂತ ಕಠಿಣವಾಗಿರುತ್ತದೆ. ಇದರಿಂದ ಸೈನಿಕರಿಗೆ ಧೈರ್ಯ, ಸಮಯಪ್ರಜ್ಞೆ ಸೇವಾ ಸಮಯದಲ್ಲಿ ಮಾತ್ರವಲ್ಲದೆ ಜೀವನದುದ್ದಕ್ಕೂ ಹಾಸುಹೊಕ್ಕಾಗಿರುತ್ತದೆ ಎಂದು ಹೇಳಿ ಕಾರ್ಗಿಲ್ ಯುದ್ಧದ ಬಗ್ಗೆ ವಿವರ ನೀಡಿದರು. ಸದಾ ನಗುನಗುತ್ತಾ, ಹಾಸ್ಯ ಪ್ರಜ್ಞೆಯನ್ನು ರೂಢಿಸಿಕೊಂಡರೆ ಜೀವನ ಸುಖಮಯವಾಗಿರುತ್ತದೆ ಎನ್ನುವ ಸಂದೇಶದೊಂದಿಗೆ ಕೆಲವು ಹಾಸ್ಯ ತುಣುಕುಗಳನ್ನು ಹೇಳಿ ಸಂಘಕ್ಕೆ ಶುಭಹಾರೈಸಿದರು. ಅತಿಥಿಗಳಿಗೆ ಹೊತ್ತಗೆ ನೀಡಿ ಗೌರವಿಸಲಾಯಿತು.

ಇತ್ತೀಚೆಗೆ ನಿಧನರಾದ ದೇಶದ ಮೇರು ಗಾಯಕಿ ಎಸ್. ಜಾನಕಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುದಾಮ ಕೆದಿಲಾಯ ನುಡಿನಮನ, ಸುಬ್ರಹ್ಮಣ್ಯ ಶರ್ಮ ಹಾಗೂ ಪ್ರೊ. ದತ್ತಾತ್ರೇಯ ರಾವ್ ಗಾನನಮನ ಅರ್ಪಿಸಿದರು. ಸತ್ಯೇಶ್ ಕೆದಿಲಾಯ, ಹರಿನಾರಾಯಣ ಮಾಡಾವು, ಕೆ. ಕರುಣಾಕರ ಕುಪ್ಪೆಟ್ಟಿ, ತುಳಸೀದಾಸ ಪಿಲಿಂಜ ಮುಂತಾದವರು ಸಾಂದರ್ಭಿಕ ಮಾತುಗಳೊಂದಿಗೆ ಹಾಸ್ಯ ಚಟಾಕಿಗಳನ್ನು ಹಾರಿಸಿ ಕೇಳುಗರ ಮನಗೆದ್ದರು.

ಸಂಘದ ನೂತನ ಅಧ್ಯಕ್ಷ ಜಯರಾಮ ಪುಣ್ಚಿತ್ತಾಯ ಅಧ್ಯಕ್ಷೀಯ ನುಡಿಗಳೊಂದಿಗೆ ವಂದಿಸಿದರು. ಶಂಕರಿ ಶರ್ಮ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಪಾರ್ವತಿ ಭಟ್ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here