ನೆಲ್ಯಾಡಿ: ಯು-ಟರ್ನ್, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ, ಪ್ರತಿಭಟನೆ ಎಚ್ಚರಿಕೆ

0

ನೆಲ್ಯಾಡಿ: ಇಲ್ಲಿನ ಬೆಥನಿ ವಿದ್ಯಾಸಂಸ್ಥೆ ಹಾಗೂ ಸಂತಜಾರ್ಜ್ ವಿದ್ಯಾಸಂಸ್ಥೆ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಈ ಬಗ್ಗೆ ಇಲಾಖೆಗೆ ಮನವಿ ಸಲ್ಲಿಸಿದ್ದು ಮುಂದಿನ 10 ದಿನದೊಳಗೆ ಸ್ಪಂದನೆ ಸಿಗದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಡಾ.ವರ್ಗೀಸ್ ಕೈಪನಡ್ಕ ಎಚ್ಚರಿಸಿದ್ದಾರೆ.

ಜು.30ರಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭದ ಸಮಯದಲ್ಲೇ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ ಹಾಗೂ ಸಂತಜಾರ್ಜ್ ವಿದ್ಯಾಸಂಸ್ಥೆ ಮಧ್ಯೆ ಯು-ಟರ್ನ್, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ್ದೇವೆ. ಈಗ ಕಾಮಗಾರಿ ಕೊನೆ ಹಂತದಲ್ಲಿದ್ದರೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಇದಕ್ಕೆ ತಾಂತ್ರಿಕ ಕಾರಣದ ನೆಪ ಹೇಳುತ್ತಿದ್ದಾರೆ. ಇಲ್ಲಿ ಗಾಂಧಿ ಮೈದಾನ, ಐದಾರು ಶಿಕ್ಷಣ ಸಂಸ್ಥೆಗಳು, ನಾಲ್ಕೈದು ಚರ್ಚ್, ಮಸೀದಿ, ನರ್ಸಿಂಗ್ ಕಾಲೇಜು. ಅಂಗಡಿಗಳೂ ಇವೆ. ಅಲ್ಲದೇ ಆಲಂಕಾರು-ಮಾದೇರಿ ರಾಜ್ಯ ಹೆದ್ದಾರಿಯೂ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಇದೆ. ದಿನ ನಿತ್ಯ 2800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಡಾಟ ನಡೆಸುತ್ತಾರೆ. ಈ ಮಕ್ಕಳ ಪೋಷಕರು, ವಿದ್ಯಾರ್ಥಿಗಳೂ ಬರುತ್ತಾರೆ. 36ಕ್ಕೂ ಹೆಚ್ಚು ಶಾಲಾ ಬಸ್ಸುಗಳು ಸಂಚಾರ ಮಾಡುತ್ತವೆ. ಯು-ಟರ್ನ್ ಇಲ್ಲದೇ ಇರುವುದರಿಂದ ಈ ಬಸ್ಸುಗಳು 3 ಕಿ.ಮೀ.ದೂರದ ತನಕ ಸಂಚಾರ ಮಾಡಿ ತಿರುಗಿ ಬರಬೇಕಾಗಿದೆ. ಈ ಸಮಸ್ಯೆ ಬಗ್ಗೆ ಗ್ರಾ.ಪಂ., ಶಿಕ್ಷಣ ಸಂಸ್ಥೆ, ವರ್ತಕರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ, ಗುತ್ತಿಗೆ ಕಂಪನಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಈ ತನಕ ಯಾವುದೇ ಧನಾತ್ಮಕ ಸ್ಪಂದನೆ ಸಿಕ್ಕಿಲ್ಲ. ಮುಂದಿನ 10 ದಿನದೊಳಗೆ ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಮಹಮ್ಮದ್ ಇಕ್ಬಾಲ್ ಮಾತನಾಡಿ, ಕಾಮಗಾರಿ ಆರಂಭವಾದ 2021ರಿಂದಲೇ ಸ್ಥಳೀಯ ಆಡಳಿತ, ವಿದ್ಯಾಸಂಸ್ಥೆಗಳು ಹಾಗೂ ಸಾರ್ವಜನಿಕರ ಪರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಸಚಿವರು, ಸಂಸದರು ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆರಂಭದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರೂ, ಇದೀಗ ವೈಜ್ಞಾನಿಕ ಕಾರಣಗಳನ್ನು ಮುಂದಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ನಮ್ಮ ಬೇಡಿಕೆಗಾಗಿ ತೀವ್ರ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಮುಂದೆ ಆಗುವ ಅನಾಹುತಕ್ಕೆ ನಾವು ಹೊಣೆಗಾರರಲ್ಲ ಎಂದು ಎಚ್ಚರಿಸಿದರು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ನೋಮಿಸ್ ಕುರಿಯಕೋಸ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಸದಸ್ಯರಾದ ಆನಂದ ಪಿಲವೂರು, ಅಬ್ದುಲ್ ಜಬ್ಬಾರ್, ನೆಲ್ಯಾಡಿ ಆಟೋ ಚಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ಎಸ್‌ಡಿಪಿಐ ಮುಖಂಡ ಅಬೂಬಕ್ಕರ್ ಸಿದ್ದೀಕ್, ರೆ.ಫಾ.ಹನಿ ಜೇಕಬ್, ಸಜಿ ಕೆ.ತೋಮಸ್, ಜಾನ್ ಪಿ.ಎಸ್., ಗಣೇಶ್ ಪೂಜಾರಿ, ನಾಝೀಂ ನೆಲ್ಯಾಡಿ, ಕೆ.ಪಿ.ಅಬ್ರಹಾಂ, ಮತ್ತಿತರರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಸರ್ವೀಸ್ ರಸ್ತೆ ಕಿರಿದಾಗಿರುವುದಕ್ಕೆ ಎನ್.ಹೆಚ್.ನವರೇ ಹೊಣೆ;
ನೆಲ್ಯಾಡಿ ಪೇಟೆಯಲ್ಲಿ ಸರ್ವೀಸ್ ರಸ್ತೆ ಕಿರಿದಾಗಿದೆ ಎಂಬ ಆರೋಪವಿದೆ. ಇದಕ್ಕೆ ಎನ್.ಹೆಚ್.ನವರೇ ಹೊಣೆ. ಪರಿಹಾರ ಕೊಟ್ಟ ಮೇಲೆ ಅವರು ಜಾಗ ಸ್ವಾಧೀನಪಡಿಸಿಕೊಂಡು ಸಮರ್ಪಕವಾಗಿ ಸರ್ವೀಸ್ ರಸ್ತೆ ನಿರ್ಮಾಣ ಮಾಡದೇ ಇರುವುದು ಅವರ ತಪ್ಪು. ಅಲ್ಲದೇ ಒಂದೇ ಕಡೆ ಮೂರು ಅಂಡರ್‌ಪಾಸ್ ಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ಬಸ್ಸುಗಳು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ಉದನೆಯಲ್ಲಿ 200 ಮೀ.ಅಂತರದಲ್ಲಿ ಯು-ಟರ್ನ್ ಕೊಟ್ಟಿದ್ದಾರೆ. ಗೋಳಿತ್ತೊಟ್ಟಿನಲ್ಲಿ ಇಳಿಜಾರು ರಸ್ತೆಯಲ್ಲೇ ಯು-ಟರ್ನ್ ಕೊಟ್ಟಿದ್ದಾರೆ. ಆರ್ಲದ ನಂತರ ಹೊಸಮಜಲುನಲ್ಲಿ ಯು-ಟರ್ನ್ ಕೊಡಲಾಗಿದೆ. ಈ ಎರಡು ಯು-ಟರ್ನ್‌ಗಳ ಮಧ್ಯೆ 5 ಕಿ.ಮೀ.ಅಂತರವಿದೆ. ಒಟ್ಟಿನಲ್ಲಿ ನೆಲ್ಯಾಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿದ್ದವರು ಆರೋಪಿಸಿದರು.

LEAVE A REPLY

Please enter your comment!
Please enter your name here