ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್ ನಿವೃತ್ತಿ, ಬೀಳ್ಕೊಡುಗೆ

0

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುದೀರ್ಘ 38ವರ್ಷ ಗುಮಾಸ್ತರಾಗಿ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಜು.31ರಂದು ನಿವೃತ್ತರಾದ ರತ್ನಾಕರ ಬಂಟ್ರಿಯಾಲ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಸಂಘದ ಕೇಂದ್ರ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಸಭಾಂಗಣದಲ್ಲಿ ನಡೆಯಿತು.

ಮುಂದೆಯೂ ಸೇವೆ ಸಿಗಬೇಕು-ಬಾಲಕೃಷ್ಣ ಬಿ;
ರತ್ನಾಕರ ಬಂಟ್ರಿಯಾಲ್ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, 38 ವರ್ಷಗಳ ಸುದೀರ್ಘ ಅವಧಿಯಲ್ಲಿ ರತ್ನಾಕರ ಬಂಟ್ರಿಯಾಲ್ ಅವರು ಸಂಘಕ್ಕೆ ಅಪಾರ ಸೇವೆ ಮಾಡಿದ್ದಾರೆ. ಮುಂದೆಯೂ ಸಂಘಕ್ಕೆ ಅವರ ಸೇವೆಯ ಅಗತ್ಯವಿದೆ. ನಷ್ಟದಲ್ಲಿದ್ದ ಸಂಘವನ್ನು ಮುನ್ನಡೆಸಿದ ಆಡಳಿತ ಮಂಡಳಿಯ ಜೊತೆಗೆ ಸೇವೆ ಮಾಡಿದ ಅನುಭವ ರತ್ನಾಕರ ಬಂಟ್ರಿಯಾಲ್ ಅವರಿಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆ ತನಕವೂ ಕೆಲಸ ಮಾಡುವ ಸಿಬ್ಬಂದಿಗಳು ಸಂಘದಲ್ಲಿದ್ದಾರೆ. ಆದ್ದರಿಂದಲೇ ಸಂಘ ಬೆಳವಣಿಗೆಯಾಗಿದೆ. ನಿವೃತ್ತಿಯಾಗುತ್ತಿರುವ ರತ್ನಾಕರ ಬಂಟ್ರಿಯಾಲ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸುಖ,ಶಾಂತಿ,ನೆಮ್ಮದಿ ಸಿಗಲಿ ಎಂದು ಹಾರೈಸಿದರು.

ಮಾರ್ಗದರ್ಶನ ನಿರಂತರವಾಗಿ ಇರಬೇಕು-ರವಿಚಂದ್ರ:
ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಅವರದ್ದು ನಗುಮುಖದ ಸೇವೆ. ಈ ಹಿಂದೆ ನಷ್ಟದಲ್ಲಿದ್ದ ಸಂಘವನ್ನು ಉಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ರತ್ನಾಕರ ಬಂಟ್ರಿಯಾಲ್ ಸಹಿತ ಆಗಿನ ಸಿಬ್ಬಂದಿಗಳು, ಆಡಳಿತ ಮಂಡಳಿಯವರು ಮುನ್ನಡೆಸಿ ಬೆಳೆಸಿದ್ದಾರೆ. ರತ್ನಾಕರ ಅವರಿಗೆ ಸಹಕಾರ ಸಂಘದಿಂದ ನಿವೃತ್ತಿಯಾದರೂ ಮುಂದೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಅವರ ಮಾರ್ಗದರ್ಶನ ಸಂಘಕ್ಕೆ ನಿರಂತರವಾಗಿ ಇರಬೇಕು ಎಂದು ಹೇಳಿದರು.

ಯಾವುದೇ ಕುಂದುಕೊರತೆ ಇಲ್ಲದ ಸೇವೆ-ಸರ್ವೋತ್ತಮ;
ಸಂಘದ ನಿರ್ದೇಶಕ ಸರ್ವೋತ್ತಮ ಗೌಡ ಅವರು ಮಾತನಾಡಿ, ಸಹಕಾರ ಸಂಘದಲ್ಲಿ ಹಣಕಾಸಿನ ವ್ಯವಹಾರದ ಜೊತೆಗೆ ಗ್ರಾಮಸ್ಥರಿಗೆ ಇತರೇ ಸೇವೆಯನ್ನೂ ಸಮರ್ಪಕವಾಗಿ ನೀಡಬೇಕಾಗಿದೆ. ರತ್ನಾಕರ ಬಂಟ್ರಿಯಾಲ್ ಅವರು ಸಂಘದ ವ್ಯಾಪ್ತಿಯ 7 ಗ್ರಾಮಗಳಲ್ಲೂ ನಿಷ್ಠೆಯಿಂದ, ಯಾವುದೇ ಕುಂದುಕೊರತೆ ಆಗದಂತೆ ಸೇವೆ ಸಲ್ಲಿಸಿದ್ದಾರೆ. ಮುಂದೆಯೂ ಸಂಘವನ್ನು ಉತ್ತರೋತ್ತರವಾಗಿ ಬೆಳೆಸುವಲ್ಲಿ ಅವರ ಸೇವೆ ಸಿಗಬೇಕು. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಸದಾ ನೆನಪಿನಲ್ಲಿಡುವ ಸೇವೆ-ಉಷಾ ಅಂಚನ್;
ಇನ್ನೋರ್ವ ನಿರ್ದೇಶಕಿ ಉಷಾ ಅಂಚನ್ ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಅವರು ನಿಷ್ಠೆ, ಪ್ರಾಮಾಣಿಕತೆಯಿಂದ ವೃತ್ತಿ ಜೀವನ ಪೂರೈಸಿದ್ದಾರೆ. ಸಂಸ್ಥೆಯಿಂದ ಸಿಗುವ ಸವಲತ್ತುಗಳನ್ನು ಸಕಾಲದಲ್ಲಿ ಸದಸ್ಯರಿಗೆ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸೇವೆ ಸದಾ ನೆನಪಿನಲ್ಲಿಡುವಂತೆ ಇದೆ. ಅವರ ಸಲಹೆ ಸೂಚನೆ ಸಂಘಕ್ಕೆ ಸದಾ ಇರಲಿ ಎಂದರು.

ಕರ್ತವ್ಯ ನಿಷ್ಠೆ ಇತರರಿಗೆ ಮಾದರಿ-ಸೆಬಾಸ್ಟಿಯನ್;
ಸಂಘದ ನಿವೃತ್ತ ಮ್ಯಾನೇಜರ್ ಸೆಬಾಸ್ಟಿಯನ್ ಪಿ.ಜೆ.ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಹಾಗೂ ನಾನು ಒಂದೇ ಅವಧಿಯಲ್ಲಿ ಸಂಘಕ್ಕೆ ಸೇರ್ಪಡೆಗೊಂಡಿದ್ದೇವೆ. ಸೇವೆಗೆ ಸೇರಿದ ೧೦ ವರ್ಷದ ನಂತರ ಖಾಯಂ ನೌಕರರಾಗಿ ನೇಮಕಗೊಂಡಿದ್ದೇವು. ರತ್ನಾಕರ ಅವರು ಎಂದಿಗೂ ಸಮಯ ನೋಡಿಕೊಂಡು ಕೆಲಸ ಮಾಡಿದವರಲ್ಲ. ಅವರ ಕರ್ತವ್ಯ ನಿಷ್ಠೆ ಇತರೇ ಸಿಬ್ಬಂದಿಗೆ ಮಾದರಿಯಾಗಿದೆ ಎಂದರು.

ಜೀವನದ ಸಾರ್ಥಕತೆಯಾಗಿದೆ-ರವೀಂದ್ರ ಟಿ;
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಅವರು ನನ್ನ ಶಿಷ್ಯ ಎನ್ನುವುದಕ್ಕೆ ಹೆಮ್ಮೆ ಇದೆ. ಕಲಿಸಿದ ವಿದ್ಯೆ ಸಾರ್ಥಕವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಪೆನ್ನು ಹಿಡಿದುಕೊಂಡು ಸಂಸ್ಥೆಗೆ ಸೇರ್ಪಡೆಗೊಂಡ ಅವರು ಈಗ ಹಾರ, ಗೌರವಾರ್ಪಣೆಯೊಂದಿಗೆ ಬೀಳ್ಕೊಡುತ್ತಿರುವುದು ಅವರ ಜೀವನದ ಸಾರ್ಥಕತೆಯಾಗಿದೆ. ಅವರ ಮುಂದಿನ ಜೀವನದಲ್ಲಿ ಶ್ರೇಯಸ್ಸು ಲಭಿಸಲಿ ಎಂದರು.

ಸದಾ ಮಾರ್ಗದರ್ಶನ ನೀಡುತ್ತಿದ್ದರು-ರಮೇಶ್ ನಾಯ್ಕ್;
ಸಿಬ್ಬಂದಿಗಳ ಪರವಾಗಿ ಮಾತನಾಡಿದ ಶಾಖಾ ವ್ಯವಸ್ಥಾಪಕ ರಮೇಶ್ ನಾಯ್ಕ್ ಅವರು, ರತ್ನಾಕರ ಅವರ ಜೊತೆಗೆ 2004ರಿಂದ ಕೆಲಸ ಮಾಡುತ್ತಿದ್ದೇನೆ. ಸದಾ ಮಾರ್ಗದರ್ಶನ ನೀಡುತ್ತಿದ್ದರು. ನಿವೃತ್ತಿಯ ಬಳಿಕ ಅವರ ಹೊಸ ಜೀವನ ಆರಂಭಗೊಳ್ಳಲಿದೆ. ಅವರ ನಿವೃತ್ತ ಜೀವನವು ನೆಮ್ಮದಿ, ಶಾಂತಿಯಿಂದ ಕೂಡಿರಲಿ ಎಂದರು.

ಕುಟುಂಬಸ್ಥರಿಂದ ಶುಭಹಾರೈಕೆ;
ಕುಟುಂಬಸ್ಥರಾದ ವಿನ್ಯಾಸ್ ಬಂಟ್ರಿಯಾಲ್ ಮಾತನಾಡಿ, ದೊಡ್ಡಪ್ಪ ರತ್ನಾಕರ ಬಂಟ್ರಿಯಾಲ್ ಅವರು ಅದ್ಬುತ ಜ್ಞಾನವಂತರು. ಕುಟುಂಬಕ್ಕೂ ಮಾರ್ಗದರ್ಶನ ನೀಡಿದ್ದಾರೆ. ಅವರು ಸುದೀರ್ಘ 38 ವರ್ಷ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವುದು ಕುಟುಂಬಕ್ಕೆ ಹೆಮ್ಮೆಯಾಗಿದೆ ಎಂದರು. ತುಕಾರಾಮ ರೈ ಹೊಸಮನೆ ಮಾತನಾಡಿ, ರತ್ನಾಕರ ಬಂಟ್ರಿಯಾಲ್ ದಕ್ಷ ಆಡಳಿತಗಾರ. ಯಾವುದೇ ಜವಾಬ್ದಾರಿ ನೀಡಿದರೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಅವರು ವಿದ್ಯಾಭ್ಯಾಸ ಪಡೆದು ಸಹಕಾರಿ ಸಂಘದಲ್ಲಿ ಕೆಲಸ ನಿರ್ವಹಿಸುವುದರ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು. ಸೊಸೆ ಸುರಕ್ಷಿತ ವಿಜೇಶ್ ಮಾತನಾಡಿ, ಮಾವ ರತ್ನಾಕರ ಬಂಟ್ರಿಯಾಲ್ ಅವರು ವೃತ್ತಿಯಲ್ಲಿ ನಿಷ್ಠೆ, ಸಮಯ ಪಾಲನೆಗೆ ಒತ್ತು ನೀಡಿದ್ದಾರೆ. ಅವರ ನಿಷ್ಠೆ, ಮಾನವೀಯ ಮೌಲ್ಯಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಸಮಯ ನೋಡಿಕೊಂಡು ಕೆಲಸ ಮಾಡಿಲ್ಲ-ದಯಾಕರ ರೈ;
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ದಯಾಕರ ರೈ ಅವರು, ಸಂಘದಲ್ಲಿ ಸುದೀರ್ಘ 38 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ರತ್ನಾಕರ ಬಂಟ್ರಿಯಾಲ್ ಅವರು, ಪರಿಶ್ರಮ, ನಿಷ್ಠೆ, ಕರ್ತವ್ಯ ಪ್ರಜ್ಞೆಯ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸರಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಸಹಜವಾದದ್ದು. ರತ್ನಾಕರ ಅವರಲ್ಲಿ ಇನ್ನೂ ಕೆಲಸ ಮಾಡುವ ಚೈತನ್ಯವಿದ್ದರೂ ಕಾನೂನಿನಲ್ಲಿ ಅವಕಾಶವಿಲ್ಲದೆ ಇರುವುದರಿಂದ ಅವರು ನಿವೃತ್ತಿಯಾಗುತ್ತಿದ್ದಾರೆ. ಸೇವಾವಧಿಯಲ್ಲಿ ಅವರು ಗ್ರಾಹಕರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಸಮಯ ನೋಡಿಕೊಂಡು ಎಂದಿಗೂ ಕೆಲಸ ಮಾಡಿಲ್ಲ. ಶಿಸ್ತು ಪಾಲನೆ ಮಾಡಿದ್ದರು. ಸಹೋದ್ಯೋಗಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಈ ಹಿಂದೆ ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಆಗಿನ ಆಡಳಿತ ಮಂಡಳಿಯವರ ಜೊತೆಗೆ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಅವರ ಸಲಹೆ,ಸೂಚನೆ ಸಂಘಕ್ಕೆ, ಸಿಬ್ಬಂದಿಗಳಿಗೆ ಅಗತ್ಯವಿದೆ ಎಂದರು.

ಅನ್ಯೋನ್ಯತೆಯಿಂದ ಕೆಲಸ ನಿರ್ವಹಿಸಿದ ತೃಪ್ತಿ ಇದೆ-ರತ್ನಾಕರ;
ಸನ್ಮಾನ ಸ್ವೀಕರಿಸಿದ ರತ್ನಾಕರ ಬಂಟ್ರಿಯಾಲ್ ಮಾತನಾಡಿ, ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಅದು ಫಲ ಕೊಡದೇ ಇದ್ದಾಗ 1981ರಲ್ಲಿ ಸಂಘಕ್ಕೆ ಸೇರ್ಪಡೆಗೊಂಡಿದ್ದೆ. ಆ ಸಮಯದಲ್ಲಿ ಚಂದ್ರಹಾಸ ರೈ ಅವರು ಕಾರ್ಯದರ್ಶಿಯಾಗಿ ಎಂ.ಆರ್.ಎಡಪಡಿತ್ತಾಯ ಅವರು ಎಕೌಂಟೆಂಟ್ ಆಗಿದ್ದಾರೆ. ಆಗ ಸಾಲ ಕೊಟ್ಟರೂ ಮರುಪಾವತಿಯಾಗುತ್ತಿರಲಿಲ್ಲ. 38 ವರ್ಷಗಳ ಸೇವಾ ಅವಧಿಯಲ್ಲಿ ನಾಲ್ವರು ಕಾರ್ಯದರ್ಶಿಗಳು, 7 ಮಂದಿ ಅಧ್ಯಕ್ಷರ ಜೊತೆ ಕೆಲಸ ಮಾಡಿದ್ದೇನೆ. ಬ್ಯಾಂಕ್ ಮುಚ್ಚಿಹೋಗುವ ಹಂತಕ್ಕೆ ಬಂದಾಗ ಅಗ್ರಾಳ ನಾರಾಯಣ ರೈ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ದಿ| ಉಮೇಶ್ ಶೆಟ್ಟಿ ಅವರು 30 ವರ್ಷ ಅಧ್ಯಕ್ಷರಾಗಿ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈಗಿನ ಆಡಳಿತ ಮಂಡಳಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಒಂದೇ ಕುಟುಂಬದವರಂತೆ ಇದ್ದೇವು. ಈಗ ಸಂಘದ ಕೇಂದ್ರ ಕಚೇರಿ, ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಿನ 18 ಮಂದಿ ಸಿಬ್ಬಂದಿಗಳೂ ಪ್ರತಿಭಾವಂತರಿದ್ದಾರೆ. ಸಂಘದ ವ್ಯಾಪ್ತಿಯ 7 ಗ್ರಾಮಗಳಲ್ಲೂ ಸೇವೆ ಮಾಡಿದ್ದೇನೆ. ಸಂಘದ ಸದಸ್ಯರೊಂದಿಗೆ ಅನ್ಯೋನ್ಯತೆಯಿಂದ ಮನಸ್ಸಿಗೆ ನೋವಾಗದಂತೆ ಕೆಲಸ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ, ಭಾಸ್ಕರ ರೈ ತೋಟ, ಬಾಬು ನಾಯ್ಕ್ ಅಲಂಗಪೆ, ಹರೀಶ್ ಎ., ಸುಧಾಕರ ಬಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸಂದೀಪ್ ವಂದಿಸಿದರು. ವ್ಯವಸ್ಥಾಪಕ ಮಹೇಶ್ ಎಂ.ಟಿ.ನಿರೂಪಿಸಿದರು. ಸಂಘದ ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಮಾಜಿ ನಿರ್ದೇಶಕರಾದ ಪ್ರಸಾದ್ ಅಬ್ರಹಾಂ ಆರ್ಲ, ಸುದರ್ಶನ ಶಿರಾಡಿ, ನಿವೃತ್ತ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ಎಡಪಡಿತ್ತಾಯ, ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ ಮರಂದೆ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ, ನಿವೃತ್ತ ಶಿಕ್ಷಕ ವೆಂಕಟ್ರಮಣ ಆರ್., ಪ್ರಮುಖರಾದ ನೋಣಯ್ಯ ಗೌಡ ಅನಿಲ, ಸುಂದರ ಗೌಡ ಅತ್ರಿಜಾಲು, ರಮೇಶ್ ಶೆಟ್ಟಿ ಬೀದಿ, ಗಿರೀಶ್ ಶೆಟ್ಟಿ ಬೀದಿ, ಮಹಾಬಲ ಶೆಟ್ಟಿ ದೋಂತಿಲ, ಬಾಲಕೃಷ್ಣ ತೋಟ, ಸದಾನಂದ ಕುಂಡಡ್ಕ, ಸಂಘದ ಸಿಬ್ಬಂದಿಗಳು, ರತ್ನಾಕರ ಬಂಟ್ರಿಯಾಲ್ ಅವರ ಮನೆಯುವರು, ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸನ್ಮಾನ/ಗೌರವಾರ್ಪಣೆ;
ನಿವೃತ್ತರಾದ ರತ್ನಾಕರ ಬಂಟ್ರಿಯಾಲ್ ಹಾಗೂ ಅವರ ಪತ್ನಿ ವನಜಾಕ್ಷಿ ಅವರನ್ನು ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಕುಟುಂಬಸ್ಥರು ಗೌರವಾರ್ಪಣೆ ಮಾಡಿದರು. ಸಂಘದ ಸಿಬ್ಬಂದಿ ಮುಕುಂದ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here