







ಪುತ್ತೂರು: ಕರ್ನಾಟಕ ಸರಕಾರದ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾಗಿರುವ ಅನಂತ್ ಮೈಸೂರು ಅವರು ಆ.1ರಂದು ಪುತ್ತೂರಿಗೆ ಭೇಟಿ ನೀಡಿದರು.


ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ ಅವರು ಪ್ರಾರಂಭದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಅಲ್ಲಿ ದೇವರಿಗೆ ಎಳ್ಳೆಣ್ಣೆ ಸೇವೆ, ತುಪ್ಪ ದೀಪ ಸೇವೆ ಸಲ್ಲಿಸಿದರು. ನಂತರ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದರ್ಶನ ಪಡೆದರು. ಕ್ಷೇತ್ರದ ಮುಖ್ಯಸ್ಥರಾದ ಕೃಷ್ಣಪ್ರಸಾದ್ ಬೆಟ್ಟ, ಲಕ್ಷ್ಮೀ ಅರ್ಪನ್ ಅವರು ಅನಂತ್ ಮೈಸೂರು ಕುಟುಂಬಸ್ಥರನ್ನು ದೇವರ ಪ್ರಸಾದ ನೀಡಿ ಗೌರವಿಸಿದರು.




ಗೌರವಾರ್ಪಣೆ:
ನಂತರ ಶ್ರೀಮಹಾಲಕ್ಷ್ಮೀ ಸಭಾ ಭವನದಲ್ಲಿ ನಡೆದ ಕಾಯಕ್ರಮದಲ್ಲಿ ಗಾಣಿಗ ಯಾನೆ ಸಪಲಿಗೆ ಸೇವಾ ಸಂಘ ಹಾಗೂ ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಿದರು. ಅನಂತ್ ಮೈಸೂರು ಅವರ ಪತ್ನಿ ಲಕ್ಷ್ಮೀ ಹಾಗೂ ಪುತ್ರ ಹರ್ಷ ಉಪಸ್ಥಿತರಿದ್ದರು.
ಸರಕಾರ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ-ಅನಂತ್ ಮೈಸೂರು:
ಗೌರವ, ಸನ್ಮಾನ ಸ್ವೀಕರಿಸಿದ ಗಾಣಿಗ ನಿಗಮ ಮಂಡಳಿಯ ಅಧ್ಯಕ್ಷ ಅನಂತ್ ಮೈಸೂರು ಮಾತನಾಡಿ, ಈ ಹಿಂದೆ ಗಾಣಿಗ ಸಮುದಾಯದವರು ಸರಕಾರದ ಸೌಲಭ್ಯಕ್ಕಾಗಿ ದೇವರಾಜ ಅರಸು ನಿಗಮಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಅಲ್ಲಿ ಯಾವುದೋ ಪ್ರಭಾವದಿಂದ ಮುಂದುವರಿದರಿಗೆ ಮಾತ್ರವೇ ಸೌಲಭ್ಯಗಳು ದೊರೆಯುತ್ತಿತ್ತು. ಇದೀಗ ಗಾಣಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಲಿ ಸ್ಥಾಪನೆಯಾಗಿದ್ದು ನಮ್ಮ ಜನಾಂಗಕ್ಕೆ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಲು ಸಾಧ್ಯ. ನಿಗಮ ಮಂಡಳಿಯ ಅಧ್ಯಕ್ಷನಾಗಿ ನಮ್ಮ ಜನಾಂಗದ ಅಭಿವೃದ್ಧಿ, ಸಂಘಟನೆಗೆ ಚಿಂತನೆ ಮಾಡಿ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಯತ್ನಿಸಲಾಗುವುದು. ಗಾಣಿಗ ಸಮಾಜದಲ್ಲಿರುವ ವಿವಿಧ ಉಪ ಜಾತಿಗಳನ್ನು ಒಟ್ಟು ಸೇರಿಸಿ, ನಮ್ಮ ಜನಾಂಗಕ್ಕೆ ಸಲ್ಲಬೇಕಾದ ಎಲ್ಲಾ ಸವಲತ್ತುಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ವಿವಿಧ ಸಮಿತಿಗಳ ಅಧ್ಯಕ್ಷರ ಅಭಿಪ್ರಾಯ ಕ್ರೂಡಿಕರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಎಲ್ಲಾ ಜನಾಂಗದ ಅಭಿವೃದ್ಧಿ ನಿಗಮವಿದೆ. ಗಾಣಿಗ ಸಮಾಜಕ್ಕೂ ನಿಗಮ ಮಾಡುವುದಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಕಳೆದ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಅವರಲ್ಲಿ ಮನವಿ ಮಾಡಿದ್ದು ಮೂರು ನಾಲ್ಕು ತಿಂಗಳಲ್ಲಿ ನಿಗಮವನ್ನು ದೆಹಲಿಯಲ್ಲಿ ನೋಂದಾಯಿಸಿಕೊಂಡು ನಿಗಮ ಸ್ಥಾಪನೆ ಮಾಡಿದ ಸಿದ್ದರಾಮಯ್ಯ ಅವರು ನಿಗಮಕ್ಕೆ ನನ್ನನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಅನಂತ್ ಮೈಸೂರು ಹೇಳಿದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬ್ಯಾರಿಸ್ಟರ್ ಎಲ್ಲಪ್ಪ ಎಂದು ನಾಮಕರಣ ಮಾಡಬೇಕು-ಜನಾರ್ದನ ಬೆಟ್ಟ:
ಜನಾರ್ದನ ಬೆಟ್ಟ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರು ಗಾಣಿಗ ಯಾನೆ ಸಪಲಿಗೆ ಸಮಾಜ ಬಾಂಧವರಾಗಿದ್ದಾರೆ. ಅವರು ದೇಶಕ್ಕಾಗಿ ಎಲ್ಲವನ್ನೂ ಅರ್ಪಣೆ ಮಾಡಿದವರು. ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಮ್ಮ ಜಾಗವನ್ನು ಕೊಡುಗೆಯಾಗಿ ನೀಡಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಎಂದು ನಾಮಕರಣ ಮಾಡಬೇಕು ಹಾಗೂ ಅಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸರಕಾರದ ಸವಲತ್ತುಗಳನ್ನು ಪಡೆದು ಸದೃಡವಾಗಬೇಕು-ಲೋಹಿತ್ ಬೆಂಗಳೂರು:
ಸಮಾಜ ಸೇವಕ ಬೆಂಗಳೂರಿನ ಲೋಹಿತ್ ಮಾತನಾಡಿ, ಗಾಣಿಗ ಸಮಾಜವು ಎಲ್ಲಾ ಜನಾಂಗದವರೊಂದಿಗೆ ಸ್ನೇಹಜೀವಿಯಾಗಿರುವ ಸಮಾಜ. ಒಂದು ಸಮುದಾಯಕ್ಕೆ ಸೀಮಿತವಾದ ಸಮಾಜವಲ್ಲ. ನಮ್ಮ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿಯು ರಚನೆಯಾಗಿದ್ದು ಸಮಾಜ ಬಾಂಧವರು ಕೇಂದ್ರ ಹಾಗೂ ರಾಜ್ಯ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸದೃಡವಾಗಬೇಕು. ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬ್ಯಾರಿಸ್ಟರ್ ಎಲ್ಲಪ್ಪ ಅವರನ್ನು ಕಾರ್ಗಿಲ್ ವಿಜಯೋತ್ಸವದಲ್ಲಿ ನೆನಪಿಸುವ ಕೆಲಸವಾಗಿಲ್ಲ ಎಂದು ಹೇಳಿದರು.
ನಿಗಮದ ಮೂಲಕ ಸಮಾಜವನ್ನು ಭದ್ರ ಪಡಿಸುವ ಕೆಲಸವಾಗಬೇಕು-ಲಕ್ಷ್ಮೀಪ್ರಸಾದ್ ಬೆಟ್ಟ:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿಯಾಗಿದ್ದ ಅನಂತ್ ಮೈಸೂರು ಅವರ ಮುಖಾಂತಯರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೊಂಡಿದೆ. ನಿಗಮದ ಮೂಲಕ ಸಮಾಜವನ್ನು ಭದ್ರ ಪಡಿಸುವ ಕೆಲಸವಾಗಬೇಕು. ಸಮಾಜದಲ್ಲಿ ಬಹಳಷ್ಟು ಮಂದಿ ಬಡವರಿದ್ದು ಸರಕಾರದ ಸವಲತ್ತುಗಳನ್ನು ಪಡೆಯಲು ಸಹಕರಿಯಾಗಬೇಕು. ಐಎಎಸ್.ಐಪಿಎಸ್ ಮೊದಲಾದ ಉನ್ನತ ಶಿಕ್ಷಣಕ್ಕೆ ಸಮಾಜ ಬಾಂಧವರಿಗೆ ಸಹಕಾರ ನೀಡಬೇಕು. ಸಮಾಜಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದು ಅವರು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಆದಾಯ ಮಿತಿ ಏರಿಕೆಗೆ ಮನವಿ-ಹರಿರಾಮಚಂದ್ರ:
ಉಪ್ಪಿನಂಗಡಿ ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಅಧ್ಯಕ್ಷ ಹರಿರಾಮಚಂದ್ರ ಮಾತನಾಡಿ, ಗಾಣಿಗ ಸಮಾಜದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವಲ್ಲಿ ತಾರತಮ್ಯ ನೀತಿಯಿದ್ದು ಅದನ್ನು ಬದಲಾಯಿಸಬೇಕು. ಆದಾಯ ಮಿತಿಯನ್ನು 1 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗೆ ಏರಿಕೆ ಮಾಡಬೇಕು ಎಂದು ಹೇಳಿ ನಿಗಮ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.
ಗಾಣಿಗ ಯಾನೆ ಸಪಲಿಗರ ಮಾತೃ ಸಂಘದ ಅಧ್ಯಕ್ಷೆ ರಮಣಿ ಡಿ ಗಾಣಿಗ, ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಉಪಾಧ್ಯಕ್ಷ ಸುಷ್ಮಾ ದಾಮೋದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾನ್ಯಲಕ್ಷ್ಮೀ, ಮಂಜುಳಾ ಕೃಷ್ಣಪ್ರಸಾದ್ ಬೆಟ್ಟ ಪ್ರಾರ್ಥಿಸಿದರು. ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಮಾಜಿ ಅಧ್ಯಕ್ಷ ದಾಮೋದರ ಪಾಟಾಳಿ ಸ್ವಾಗತಿಸಿದರು. ಗಾಣಿಗ ಯಾನೆ ಸಪಲಿಗರ ಸಂಘದ ಉಪಾಧ್ಯಕ್ಷ ಪ್ರದೀಪ್ ಬೊಳುವಾರು, ಕಾರ್ಯದರ್ಶಿ ವಿಜಯಲಕ್ಷ್ಮಿ, ಕೋಶಾಧಿಕಾರಿ ಹೇಮಚಂದ್ರ ಹಾಗೂ ಸಮಾಜದ ಹಿರಿಯರಾದ ತಿಮ್ಮಪ್ಪ ಸಪಲ್ಯ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಕೋಶಾಧಿಕಾರಿ ಕಾರ್ತಿಕ್ ಕಬಕ, ಮಾತೃ ಮಂಡಳಿ ಸದಸ್ಯೆಯರಾದ ಜಯಶ್ರೀ ಕೊಪ್ಪಳ, ಮಮತಾ ಕಬಕ, ಉಷಾ ಗಂಗಾಧರ್, ಭವ್ಯ, ವೀಣಾ ಸಹಕರಿಸಿದರು. ಉಪ್ಪಿನಂಗಡಿ ಸಂಘದ ಕಾರ್ಯದರ್ಶಿ ನಿತಿನ್ ನೆಕ್ಕಿಲಾಡಿ ವಂದಿಸಿದರು. ಜತೆ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಕಾರ್ಯಕ್ರಮ ನಿರೂಪಿಸಿದರು.
ಗಾಣಿಗ ಸಮುದಾಯಕ್ಕೆ ಸೇರಿದ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರು ಮಹಾತ್ಮ ಗಾಂಧೀಯವರ ಸಾಲಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು. ಭಾರತದಲ್ಲಿ ಯಾರೂ ಮಾಡದ ಕೆಲಸವನ್ನು ಎಲ್ಲಪ್ಪ ಅವರು ಮಾಡಿದ್ದಾರೆ. ಆದರೆ ಅವರನ್ನು ಮರೆತಿರುವುದು ದುರದೃಷ್ಟಕರ. ಗಾಣಿಗ ಸಮುದಾಯದವರಾದ ನಾವು ಅವರ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಅವರ ಹೆಸರು ಅಮರವಾಗಿರಬೇಕು. ಅವರ ಹೆಸರಿಗೆ ಸರಿಯಾದ ಗೌರವ ತರುವ ಕೆಲಸವಾಗಬೇಕು. ಹೀಗಾಗಿ ಮಂಗಳೂರು ರೈಲು ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಹಾಗೂ ಅವರ ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು
ಅನಂತ್ ಮೈಸೂರು, ಗಾಣಿಗೆ ಅಭಿವೃದ್ಧಿ ನಿಗಮ ಮಂಡಳಿ










