







ನೆಲ್ಯಾಡಿ: ಕಳೆದ ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಸಮೀಪ ಗುಡ್ಡ ಕುಸಿದು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಘಟನೆ ಆ.2ರಂದು ನಡೆದಿದೆ.


ಭಾರೀ ಮಳೆಗೆ ಹೆದ್ದಾರಿ ಬದಿಯ ಗುಡ್ಡದ ಮಣ್ಣು ಸಡಿಲಗೊಂಡು ಕುಸಿತಗೊಂಡಿದೆ. ಮಣ್ಣಿನ ಜೊತೆ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಣ್ಣು ಹಾಗೂ ಮರ ರಸ್ತೆ ಮಧ್ಯೆ ಬಿದ್ದ ಕಾರಣ ಎರಡೂ ದಿಕ್ಕಿನ ವಾಹನಗಳು ಕೆಲ ಸಮಯ ಸಂಚರಿಸಲು ಸಾಧ್ಯವಾಗದೆ ಚಾಲಕರು ಪರದಾಡುವಂತಾಯಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ವರದಿಯಾಗಿದೆ.













