‘ಪಾತಾಳ ಸ್ಮೃತಿ ಗೌರವ’ಕ್ಕೆ ಅರುಣ್ ಕುಮಾರ್ ಪುತ್ತಿಲ ಆಯ್ಕೆ- ಆ.6ರಂದು ಗೌರವ ಪ್ರದಾನ

0

ಉಪ್ಪಿನಂಗಡಿ: ಪಾತಾಳ ಯಕ್ಷ ಪ್ರತಿಷ್ಠಾನ, ಪಾತಾಳ ಉಪ್ಪಿನಂಗಡಿ ಇದರ 2026ನೇ ಸಾಲಿನ ‘ಪಾತಾಳ ಸ್ಮೃತಿ ಗೌರವ’ಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ, ಖ್ಯಾತ ಯಕ್ಷಗಾನ ಕಲಾವಿದ ಅಂಬಾ ಪ್ರಸಾದ ಪಾತಾಳ ತಿಳಿಸಿದರು.


ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಕ್ಷಗಾನವನ್ನು ಸೇರಿ ಸಮಾಜದ ವಿವಿಧ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮೂಲಕ ಸಾಮೂಹಿಕ ವಿವಾಹ, ವೈದ್ಯಕೀಯ ನೆರವು, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ವಸತಿ ಹೀನರಿಗೆ ವಸತಿ ನಿರ್ಮಾಣ, ಆಂಬುಲೆನ್ಸ್ ಸೇವೆ, ಧರ್ಮ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಮುಂಚೂಣಿ ಹೋರಾಟಗಾರರಾಗಿರುವ ಅರುಣ್ ಕುಮಾರ್ ಪುತ್ತಿಲರನ್ನು ಪಾತಾಳ ಸ್ಮೃತಿ ಗೌರವಕ್ಕೆ ಆಯ್ಕೆ ಮಾಡುವ ಮೂಲಕ ಪಾತಾಳ ಸ್ಮೃತಿ ಗೌರವವನ್ನು ಯಕ್ಷಗಾನದ ಆಚೆಯ ಸಾಧನೆಗೂ ಪರಿಗಣಿಸಲಾಗಿದೆ ಎಂದು ತಿಳಿಸಿದರು.


ಪ್ರತಿಷ್ಠಾನದ ಕೋಶಾಧಿಕಾರಿ ಶ್ರೀರಾಮ ಭಟ್ ಪಾತಾಳ ಮಾತನಾಡಿ, ಯಕ್ಷಗಾನದಲ್ಲಿ ಮಹತ್ತರ ಸಾಧನೆ ತೋರಿದ ಪಾತಾಳ ವೆಂಕಟರಮಣ ಭಟ್ ಅವರ ಇಚ್ಚೆಯಂತೆ ಅವರ ಜೀವಿತಾವಧಿಯಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ತೋರಿದವರನ್ನು ಗುರುತಿಸಲಾಗುತ್ತಿತ್ತು. 2002ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಈವರೆಗೆ 50 ಮಂದಿ ಕಲಾವಿದರಿಗೆ ಹಾಗೂ 5 ಮಂದಿ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ಗೌರವ ಧನವನ್ನು ಹೊಂದಿರುತ್ತದೆ. 2025ರಲ್ಲಿ ಹರಿಕೃಷ್ಣ ಪುನರೂರು ಅವರು ಈ ಗೌರವವನ್ನು ನೀಡಲಾಗಿತ್ತು. 2026ನೇ ಸಾಲಿನ ಗೌರವಕ್ಕೆ ಅರುಣ್ ಕುಮಾರ್ ಪುತ್ತಿಲ ಆಯ್ಕೆಗೊಂಡಿದ್ದು, ಆ.6ರಂದು ರಾತ್ರಿ 7ರಿಂದ ಪಾತಾಳ ಮನೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾತಾಳ ಸ್ಮೃತಿ ಗೌರವ ಪ್ರಧಾನ ಮಾಡಲಾಗುತ್ತದೆ. ಇದೇ ಸಂದರ್ಭ ಪಾತಾಳ ವೆಂಕಟರಮಣ ಭಟ್‌ರವರು ಗತಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಚಿತವಾದ ‘ಪಾತಾಳರ ನೆನಪು’ ಎಂಬ ಕೃತಿಯು ಅನಾವರಣಗೊಳ್ಳಲಿದ್ದು, ಇದೇ ಕಾರ್ಯಕ್ರಮದಲ್ಲಿ ಸಂಜೆ ಐದರಿಂದ ‘ಶ್ರೀ ಕೃಷ್ಣ ಪರಂಧಾಮ’ ಯಕ್ಷಗಾನ ತಾಳಮದ್ದಳೆಯೂ ನಡೆಯಲಿದೆ ಎಂದರು.


ರಾತ್ರಿ 7ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಸಾಹಿತಿ ಹಾಗೂ ಹಿರಿಯ ಪ್ರವಚನಕಾರರಾದ ಮುಳಿಯ ಶಂಕರ ಭಟ್ ‘ಪಾತಾಳರ ಸ್ಮೃತಿ’ ಹಾಗೂ ಅರುಣ್ ಕುಮಾರ್ ಪುತ್ತಿಲರ ಅಭಿನಂದನೆಯನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಲಾ ಸಾಹಿತಿ ಜನಾರ್ದನ ಹಂದೆ ಕೋಟ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಡಾ. ಟಿ. ಶ್ಯಾಮ್ ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಬಿ.ಎನ್. ಮಹಾಲಿಂಗ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here