







ಕಂಬಳಕೋಡಿಯ ಮನೆಯವರಿಂದ ರಸ್ತೆ ಬೇಕೆಂಬ ಆಗ್ರಹ


ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ಹರಿಯುವ ತೋಡಿನ ಬಳಿಯಲ್ಲಿ ರಸ್ತೆ ನಿರ್ಮಾಣಗೊಂಡರೆ ಮುಂದೆ ಅದು ಸಾರ್ವಜನಿಕ ರಸ್ತೆಯಾಗಲಿದೆ. ಇದಕ್ಕೆ ನಮ್ಮ ವಿರೋಧವಿದೆ. ದೇವಳದ ಒಂದು ಇಂಚು ರಸ್ತೆಯನ್ನು ಬಿಟ್ಟುಕೊಡುವ ವಿಚಾರವೇ ಇಲ್ಲ. ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಽಸಿ ದೇವಳದ ಆಡಳಿತ ಮಂಡಳಿ ಭಕ್ತರ ಸಭೆಯನ್ನು ಕರೆಯುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವೇದಿಕೆಯ ನೇತೃತ್ವದಲ್ಲಿ ಆ.3ರಂದು ದೇವಳದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ. ಇದೇ ಸಭೆಯಲ್ಲಿ ಭಾಗವಹಿಸಿದ್ದ ಕಂಬಳಕೋಡಿಯ ಮನೆಯವರು ನಮಗೆ ರಸ್ತೆ ಬೇಕೆಂದು ಆಗ್ರಹಿಸಿದ ಘಟನೆಯೂ ನಡೆದಿದೆ. ಸಭೆ ದೇವಳದ ಸಭಾಭವನದಲ್ಲಿ ನಡೆಯಿತು.



ಭಕ್ತರ ಭಾವನೆಗೆ ವಿರುದ್ಧವಾಗಿ ನಡೆಯುವ ಕಾರ್ಯ ವಿಷಾಧನೀಯ:
ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ, ನಮ್ಮ ದೇಶದಲ್ಲಿ ನಮ್ಮದೇ ದೇವಸ್ಥಾನದ ಸಂರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಭಕ್ತರ ಭಾವನೆಗೆ ವಿರುದ್ದವಾಗಿ ನಡೆಯುವ ಕಾರ್ಯ ವಿಷಾಧನೀಯ. ದೇವಳದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣವಾಗುತ್ತಿರುವುದು ಬಹಳ ಬೇಸರದ ವಿಚಾರ. ದೇವಳದ ಜಾಗ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು. ಇಲ್ಲಿನ ಗೊಂದಲ ಸಂಘರ್ಷಕ್ಕೆ ಕಾರಣವಾಗದೆ ಸೌಹಾರ್ದತೆಯಲ್ಲಿ ಬಗೆಹರಿಸಬೇಕು. ಜಾತ್ರೆಯ ಒಂದು ದಿನ ರಥೋತ್ಸವ ನಡೆಯುತ್ತದೆ. ಶ್ರೀ ದೇವರ ರಥದ ರಸ್ತೆ ಆ ಬಳಿಕ ೩೬೫ ದಿನವೂ ಸಾರ್ವಜನಿಕ ರಸ್ತೆಯಾಗಿ ಬಳಕೆಯಾಗುವುದು ಬಹಳ ಬೇಸರದ ವಿಷಯ. ಭಕ್ತರ ಬೇಡಿಕೆ ಏನಿದೆಯೋ ಅದನ್ನು ಮನಗಂಡು ಚರ್ಚಿಸಬೇಕೆಂದು ಹೇಳಿದರು.

ಅಭಿವೃದ್ಧಿಗೆ ವಿರೋಧವಿಲ್ಲ, ಭಕ್ತರ ಭಾವನೆಗೆ ಸ್ಪಂದಿಸಬೇಕು:
ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ, ದೇವಳದ ಜಾಗದ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ದೇವಳದ ಬಳಿಯಲ್ಲಿ 30 ಫೀಟ್ನ ರಸ್ತೆ ರೂ. 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಅದಕ್ಕೆ ಕಂಪೌಂಡ್ ಮಾಡಿದಾಗ ಅದು ಸಾರ್ವಜನಿಕ ರಸ್ತೆಯಾಗುತ್ತದೆ. ಇಲ್ಲಿ ನಾವು ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿ ಮಾಡುವುದಿಲ್ಲ. ಆದರೆ ಭಕ್ತರ ಭಾವನೆಗಳಿಗೆ ಸ್ಪಂಽಸಬೇಕು. ನಿರ್ಮಾಣಗೊಳ್ಳುವ ರಸ್ತೆ ಮುತ್ತಿನ ಕೆರೆಯ ಪಾವಿತ್ರ್ಯಕ್ಕೆ ಅಡ್ಡಿಯಾಗಲಿದೆ. ಹಾಗೆಂದು ನಮ್ಮದೇ ಜನರಿಗೆ ಮೂಲಭೂತ ಸೌಕರ್ಯಕ್ಕೂ ಅಡ್ಡಿ ಮಾಡುವುದಿಲ್ಲ. ನಟರಾಜ ವೇದಿಕೆ ತೆರವು ಸಹಿತ ಇತರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ರಾಜಕೀಯವಿಲ್ಲ. ನಾವು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ. ಮೂಲಭೂತ ಸೌಕರ್ಯಕ್ಕೆ ನಮ್ಮ ಅಡ್ಡಿಯಿಲ್ಲ. ಸರ್ವ ಭಕ್ತರ ಸಭೆ ಕರೆದು ವಿಚಾರವನ್ನು ಭಕ್ತರ ಮುಂದಿಡಲಿ. ವಿವಾದಕ್ಕಾಗಿ ಸೇರದೆ ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಒಂದು ಇಂಚು ಜಾಗ ಬಿಡಲು ನಾವು ಸಿದ್ದವಿಲ್ಲ:
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ದೇವಳದ ಒಂದು ಇಂಚು ಜಾಗ ಕೂಡಾ ಸಾರ್ವಜನಿಕ ವ್ಯವಸ್ಥೆಗೆ ಜೋಡಿಸಬಾರದು. ದೇವಳದ ಭೂಮಿಯನ್ನು ವಶ ಪಡಿಸುವ ಸಂದರ್ಭ ಅನೇಕರು ಮಹಾಲಿಂಗೇಶ್ವರ ದೇವರ ಜಾಗವನ್ನು ಮಹಾಲಿಂಗೇಶ್ವರ ದೇವರಿಗೆ ನೀಡಿದರು. ಆದರೆ ಸಮಿತಿ ಇವತ್ತು ಭಕ್ತರ ನಿರ್ಧಾರದ ವಿರುದ್ಧವೇ ರಸ್ತೆ ನಿರ್ಮಾಣ ಮಾಡುತ್ತಿದೆ. ಕಂಬಳಕೋಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಹಿಂದೆ ದೇವಳದ ಸಮಿತಿ ಅಧ್ಯಕ್ಷರಾಗಿದ್ದ ಸುಧಾಕರ್ ಶೆಟ್ಟಿಯವರಲ್ಲಿ ತೋಡಿನ ಮೇಲೆ ಕಾಂಕ್ರೀಟ್ ರಸ್ತೆ ಮಾಡುವ ಸಲಹೆ ನೀಡಿದ್ದೆವು. ಆಗ ದೇವಸ್ಥಾನದ ಜಾಗವೂ ಉಳಿಯುತ್ತದೆ ಎಂದು ತಿಳಿಸಿದ್ದೆವು. ಆದರೆ ಇವತ್ತು ಸಮಿತಿಯು ಭಕ್ತರ ಯಾವುದೇ ಸಲಹೆ ಪಡೆದುಕೊಳ್ಳದೆ ರಸ್ತೆ ನಿರ್ಮಾಣಕ್ಕೆ ಹೊರಟಿದೆ. ದೇವಳ ಸಮಿತಿ ಇದನ್ನು ಸ್ವ ಪ್ರತಿಷ್ಟೆಯ ನಿಟ್ಟಿನಲ್ಕಿ ಕೈಗೆತ್ತಿಕೊಂಡರೆ ಒಂದು ಇಂಚು ಜಾಗ ಬಿಡಲು ನಾವು ಸಿದ್ದವಿಲ್ಲ. ಭಕ್ತರ ವಿರೋಧದ ನಡುವೆ ಅನುಷ್ಟಾನ ಮಾಡಲು ಪ್ರಯತ್ನ ಮಾಡಿದರೆ ಭಕ್ತರು ಸುಮ್ಮನೆ ಇರುವುದಿಲ್ಲ. ತೋಡಿನ ಮೇಲೆ ರಸ್ತೆ ಮಾಡಿ ಕಂಬಳಕೋಡಿ ನಿವಾಸಿಗಳ ಜೊತೆ ನಾವಿದ್ದೇವೆ ಎಂದರು.

ತೋಡಿನ ಬದಿ ಜಾಗ ಕಡಿತಗೊಳ್ಳಬಾರದು:
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖರಾಗಿರುವ ಅನಿಲ್ ಕುಮಾರ್ ಕಣ್ಣರ್ನೂಜಿ ಅವರು ಸ್ವಾಗತಿಸಿ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಆರಂಭದಿಂದಲೇ ದೇವಳದ ಹೊರಗಡೆ ಮತ್ತು ಒಳಗಡೆಯ ಲೋಪದೋಷಗಳನ್ನು ಶಾಸಕರಿಗೆ ಮತ್ತು ದೇವಳದ ಸಮಿತಿಗೆ ಮನವಿ ಮೂಲಕ ತಿಳಿಸುವ ಕೆಲಸ ಮಾಡುತ್ತಾ ಬಂದಿದೆ. ದೇವರ ಮುಂದೆ ನಮ್ಮದು ರಾಜಕೀಯ ಉದ್ದೇಶವಿಲ್ಲ. ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಮಾಸ್ಟರ್ ಪ್ಲಾನ್ ಮಾಡುವುದು ಸಂತೋಷ. ಆದರೆ ತೋಡಿನ ಬದಿ ಜಾಗ ಕಡಿತಗೊಳ್ಳಬಾರದು ಎಂದು ಹೇಳಿದರು.
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಇನ್ನೋರ್ವ ಪ್ರಮುಖರಾಗಿರುವ ಹರಿಪ್ರಸಾದ್ ನೆಲ್ಲಿಕಟ್ಟೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂರಕ್ಷಣಾ ಸಮಿತಿ ಗ್ರೂಪ್ನಲ್ಲಿ 1 ಸಾವಿರ ಮಂದಿ ಸದಸ್ಯರಿದ್ದಾರೆ. ಇದು ಪ್ರತಿಷ್ಟೆಗೆ ಬೇಕಾಗಿ ಮಾಡಿದ್ದು ಅಲ್ಲ. ಸತ್ಯ ಮತ್ತು ಧರ್ಮದ ಮೇಲೆ ಹೋಗಲು ಭಗವಂತನ ಅನುಗ್ರಹ ಬೇಕಾಗುತ್ತದೆ. ದೇವಳದ ವಿಚಾರದಲ್ಲಿ ತಪ್ಪು ಅಥವಾ ಸರಿ ಇದ್ದರೆ ನೇರ ಹೇಳುತ್ತೇವೆ. ಹಿಂದಿನ ಸಮಿತಿಯ ತಪ್ಪುಗಳನ್ನು ನೇರವಾಗಿ ಹೇಳುತ್ತಿದ್ದೆವು. ಈಗಿನ ಸಮಿತಿಯವರಿಗೂ ಆಗಾಗ ವ್ಯತ್ಯಾಸಗಳನ್ನು ಗಮನಕ್ಕೆ ತರುತ್ತೇವೆ. ಒಳ್ಳೆಯ ಕೆಲಸ ಮಾಡಿದಾಗ ನಾವು ಅಭಿನಂದನೆ ಸಲ್ಲಿಸಿದ್ದೇವೆ. ದೇವಳಕ್ಕೆ ಬರುವ ಭಕ್ತರು ಕೇವಲ ಭಕ್ತರಾಗಿ ಬರುವುದಲ್ಲ. ದೇವಳದ ವ್ಯವಸ್ಥೆಗಳನ್ನು ನೋಡಬೇಕು. ಈ ಹಿಂದೆ ದೇವಳಕ್ಕೆ ಹೋದ ಜಾಗವನ್ನು ಮರಳಿಸುವಲ್ಲಿ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ಬಹಳ ಪ್ರಯತ್ನ ಪಟ್ಟಿದ್ದಾರೆ. ಹಾಗಾಗಿ ಇವತ್ತು ಚರ್ಚೆಯಲ್ಲಿರುವ ದೇವಳದ ತೋಡಿನ ಬಳಿಯ ದಾರಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಸುಮಾರು 3 ಎಕ್ರೆ ಜಾಗ ಹೋಗುವ ಸಾಧ್ಯತೆ ಇದೆ ಎಂದ ಅವರು ಶ್ರದ್ದಾಕೇಂದ್ರದಲ್ಲಿ ಮಾತ್ರ ಒಗ್ಗಟ್ಟು ಇರುವುದಲ್ಲ. ಸಂಘಟನೆ ಎರಡು ಮೂರಿದ್ದರೂ ಒಗ್ಗಟ್ಟು ಮುಖ್ಯ ಎಂದರು.
ಪುತ್ತೂರಿನ ಹೃದಯ ಭಾಗದಲ್ಲಿದ್ದರೂ ಮೂಲಭೂತ ಸೌಕರ್ಯ ಸಿಗಲಿಲ್ಲ:
ಶಿಕ್ಷಕ ಶ್ರೀಕಾಂತ್ ಕಂಬಳಕೋಡಿ ಅವರು ಮಾತನಾಡಿ, ನಾವು ಪುತ್ತೂರಿನ ಹೃದಯ ಭಾಗದಲ್ಲಿದ್ದೇವೆ. ಆದರೆ ಈ ತನಕ ಮೂಲಭೂತ ಸೌಕರ್ಯ ಸಿಗಲಿಲ್ಲ. ಮಳೆಗಾಲದ ಪ್ರತಿ ವರ್ಷ ಮನೆಗೆ ನೀರು ನುಗ್ಗಿ ನಮ್ಮ ಆಸ್ತಿ, ವಾಹನ ಕಳೆದುಕೊಂಡಿದ್ದೇವೆ. ಸಮಸ್ಯೆ ಬಗ್ಗೆ ಎಲ್ಲರಿಗೂ ಮನವಿ ಮಾಡಿದ್ದೇವು. ಯಾವುದು ಸಹ ಕಾರ್ಯಗತವಾಗಲಿಲ್ಲ. ಕಳೆದ 30 ವರ್ಷಗಳಿಂದ ನಮ್ಮ 25 ಮನೆಗಳ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಪ್ರಸ್ತುತ ನಮ್ಮ ಬೇಡಿಕೆ ಹಿನ್ನೆಲೆಯಲ್ಲಿ ಶಾಸಕರು ರೂ. 3 ಕೋಟಿ ರಸ್ತೆಗೆ ಅನುದಾನ ಇಟ್ಟಿದ್ದಾರೆ. ಮುಳುಗುವವನಿಗೆ ಎಲೆ ಸಿಕ್ಕಿದ ಹಾಗೆ ಆಗಿದೆ. ನಾವು ಯಾರ ಪರವೂ ಇಲ್ಲ, ಯಾರ ವಿರೋಧವೂ ಇಲ್ಲ. ಆದರೆ 25 ಮನೆಯವರ ನೋವಿಗೆ ಸಭೆಯಲ್ಲಿ ಸೇರಿದವರೆಲ್ಲ ಕಾರಣ ಕರ್ತರಾಗುತ್ತೀರಿ ಎಂದು ನೋವಿನಿಂದ ನುಡಿದ ಅವರು ನಮಗೂ ಪರ್ಯಾಯ ವ್ಯವಸ್ಥೆ ಮಾಡಿ ಕೊಡಿ ಸ್ವಾಮಿ ಎಂದು ಮನವಿ ಮಾಡಿದರು. ಉತ್ತರಿಸಿದ ಬಾಲಚಂದ್ರ ಸೊರಕೆಯವರು ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಪರಿಹಾರವಿಲ್ಲ. ನಿಮಗೆ ರಸ್ತೆ ಕೊಡಬಾರದು ಎಂಬ ಉದ್ದೇಶ ನಮ್ಮದಲ್ಲ. ರಸ್ತೆ ಕೊಡುವುದು ಸರಕಾರ. ಹೊರತು ದೇವಸ್ಥಾನವಲ್ಲ. ಸ್ಮಶಾನ ಭಾಗದಿಂದ ರಸ್ತೆ ಮಾಡಿಸಿಕೊಳ್ಳಿ. ದೇವಳದ ಒಂದು ಇಂಚು ಜಾಗ ಹೋದರೂ ನಾವು ಬಿಡುವುದಿಲ್ಲ ಎಂದರು. ರಸ್ತೆ -ಲಾನುಭವಿ ದಿವಾಕರ ಸಪಲ್ಯ ಅವರು ಮಾತನಾಡಿ, ನಾವು ದೇವಳದ ಚಾಕ್ರಿ ಮಾಡಿಕೊಂಡು ಬಂದವರು. ನಮಗೆ ಈಗ ರಸ್ತೆ ಅಗತ್ಯವಾಗಿ ಬೇಕೆಂದರು. ರಸ್ತೆ -ಲಾನುಭವಿ ನಿವೃತ್ತ ಶಿಕ್ಷಕಿ ವೇದಾವತಿ ಅವರು ಮಾತನಾಡಿ ಪ್ರತಿ ವರ್ಷ ಮನೆಗೆ ನೀರು ನುಗ್ಗಿ ಸಮಸ್ಯೆ ಎದುರಿಸುತ್ತಿದ್ದೇವೆ. ತೋಡಿನ ಮೇಲೆ ರಸ್ತೆ ಮಾಡುವುದು ಕಾನೂನಿನ ಚೌಕಟ್ಟಿನಲ್ಲಿ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಕೇಳಿಬಂದ ಸಲಹೆ ಸೂಚನೆಗಳು:
ಉಜ್ವಲ್ ಪ್ರಭು ಅವರು ಮಾತನಾಡಿ ಹಿರಿಯರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದರು. ನಾರಾಯಣ ಪ್ರಕಾಶ್ ಅವರು ಮಾತನಾಡಿ ದೇವಳದ ಜಾಗ ಅತಿಕ್ರಮಣ ಮಾಡಬಾರದು ಎಂದರು. ರವಳನಾಥ ಪ್ರಭು ಅವರು ಮಾತನಾಡಿ, 2010ರಲ್ಲಿ ರಸ್ತೆ ಹಾಗೂ ಇತರ ವಿಚಾರಕ್ಕೆ ಸಂಬಂಽಸಿ ನಾನೇ ಮನವಿ ಮಾಡಿದ್ದೆ ಎಂದರು. ಈ ಸಂದರ್ಭ ಹಲವಾರು ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ದೇವಳದ ಜಾಗ ಯಾರಿಗೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಶಶಿಧರ್ ನಾಯಕ್, ನ್ಯಾಯವಾದಿ ಚಿನ್ಮಯ್ ರೈ ಉಪಸ್ಥಿತರಿದ್ದರು. ರತ್ನಾ ನಾಯಕ್ ಅವರು ಪ್ರಾರ್ಥಿಸಿದರು. ಬಾಲಚಂದ್ರ ಸೊರಕೆ ಕಾರ್ಯಕ್ರಮ ನಿರ್ವಹಿಸಿದರು.

ಕಂಬಳಕೋಡಿ ನಿವಾಸಿ, ಸಂರಕ್ಷಣಾ ಸಮಿತಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ
ಸಭೆಯಲ್ಲಿ ಭಾಗವಹಿಸಿದವರ ಅಭಿಪ್ರಾಯ ಪಡೆಯುವ ಸಂದರ್ಭ ಕಂಬಳಕೋಡಿಯ ಶ್ರೀಕಾಂತ್ ಅವರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ಅವರ ಬಳಿಕ ದಿವಾಕರ ಸಪಲ್ಯ ಅವರು ಮಾತನಾಡಿದರು. ಅದಾದ ನಂತರ ಕಂಬಳಕೋಡಿಯ ವೇದಾವತಿ ಅವರು ಮಾತನಾಡಲು ಮುಂದಾದಾಗ ಕಂಬಳಕೋಡಿಯವರೇ ಮಾತನಾಡಿದರೆ ಸಾಲದು, ಇತರರಿಗೂ ಅವಕಾಶ ಕೊಡುವಂತೆ ಅನೌನ್ಸ್ ಮಾಡಲಾಯಿತು. ಈ ವೇಳೆ ನಾರಾಯಣ ಪ್ರಕಾಶ್ ಅವರು ಮೈಕ್ ಹಿಡಿದು ಮಾತನಾಡಲು ಯತ್ನಿಸಿದಾಗ ನಮಗೆ ನಮ್ಮ ಸಮಸ್ಯೆ ಹೇಳಲು ಅವಕಾಶ ಮಾಡಿಕೊಡಿ ಎಂದು ವೇದಾವತಿ ಅವರು ಆಗ್ರಹಿಸಿದರು. ಬಳಿಕ ವೇದಾವತಿ ಅವರು ಮಾತು ಮುಗಿಸಿ ಕಂಬಳಕೋಡಿಯ 25 ಮನೆಯವರು ಹೊರಗೆ ಹೋಗಲು ಯತ್ನಿಸಿದಾಗ ಸಮಿತಿಯ ಸದಸ್ಯರೊಬ್ಬರು ಈಗ ಹೋಗಬೇಡಿ. ಇನ್ನೂ ಕೆಲವರ ಅಭಿಪ್ರಾಯ ಕೇಳಿ ಹೋಗಿ ಎಂದರು. ಈ ವೇಳೆ ವೇದಾವತಿ ಅವರು ನಮ್ಮ ಸಮಸ್ಯೆ ಹೇಳಿ ಆಯಿತು. ಇನ್ನು ನಾವು ಹೋಗುವುದು ಸೂಕ್ತ ಎಂದಾಗ ಸ್ವಲ್ಪ ಹೊತ್ತು ಅವರೊಳಗೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಹರಿಪ್ರಸಾದ ನೆಲ್ಲಿಕಟ್ಟೆಯವರು ಇಲ್ಲಿ ಗೊಂದಲ ನಿರ್ಮಾಣ ಆಗಬಾರದು ಎಂದು ತಿಳಿಸಿ ಸಭೆಯನ್ನು ಶಾಂತ ರೀತಿಗೆ ಕೊಂಡೊಯ್ದರು.









