ತಾ|ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ-ಪದ ಪ್ರದಾನ

0

ಉದ್ಯಮದಲ್ಲಿ ಸ್ಪರ್ಧೆ ಬದಲು ಆರೋಗ್ಯಕರ ಸ್ಪರ್ಧೆಯಿರಲಿ-ಮಠಂದೂರು

ಪುತ್ತೂರು:ಕಾಯಕವೇ ಕೈಲಾಸ ಎಂಬಂತೆ ದಿನವಿಡೀ ಕಾರ್ಯ ನಿರ್ವಹಿಸುವ ಈ ಸಂಘಟನೆಯ ಕಾರ್ಯ ನಿಜಕ್ಕೂ ರಿಸ್ಕ್ ಎನಿಸುವ ಕಾರ್ಯವಾಗಿದೆ. ಯಾರು ಸಮಾಜದಲ್ಲಿ ಉತ್ಕೃಷ್ಟ ಸೇವೆ ನೀಡುತ್ತಾರೋ ಅವರಿಗೆ ಸಮಾಜದಲ್ಲಿ ಮೊದಲ ಪ್ರಾಶಸ್ತ್ಯ ಸಿಗುತ್ತದೆ. ಸಂಘದ ಬೆಳವಣಿಗೆಯಲ್ಲಿ ಅಧ್ಯಕ್ಷರೊಂದಿಗೆ ನಾವಿದ್ದೇವೆ ಎಂಬಂತೆ ಕೆಲಸ ನಿರ್ವಹಿಸಿದಾಗ ಜೊತೆಗೆ ನಮ್ಮೊಳಗೆ ಸ್ಪರ್ಧೆಯನ್ನೀಯದೆ ಆರೋಗ್ಯಕರ ಸ್ಪರ್ಧೆಯೊಂದಿಗೆ ಮುಂದಡಿಯಿಟ್ಟಾಗ ಸಂಘಟನೆ ಬೆಳೆಯುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರುರವರು ಹೇಳಿದರು.


ಆ.೬ ರಂದು ಪಡೀಲು ಎಂ.ಡಿ.ಎಸ್ ಟ್ರಿನಿಟಿ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ೨೦೨೬-೨೮ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಅಧ್ಯಕ್ಷ ಯೋಗೀಶ್ ಕಾವುರವರಿಗೆ ಧ್ವಜ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿ ಮಾತನಾಡಿದರು. ಸಮಾಜದಲ್ಲಿ, ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಇಂತಹ ಸಂಘಟನೆಯ ಅಗತ್ಯ ಬಹಳ ಬೇಕಾಗಿದೆ. ಇಂತಹ ಸಂಘಟನೆಯಲ್ಲಿರುವವರು ಶ್ರಮಿಕ ವರ್ಗದ ಕಾರ್ಮಿಕರಾಗಿರುತ್ತಾರೆ ಎಂದರು.


ವೃತ್ತಿ ಬಾಂಧವರು ದೀಪದಂತೆ ಪ್ರಜ್ವಲಿಸಿ ಜೀವನವು ಉಜ್ವಲವಾಗಿ ಬೆಳೆಯಲಿ-ಶ್ಯಾಮ್ ಮಂಜುನಾಥ್ ಪ್ರಸಾದ್:
ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ಸ್ ಮಾಲಕರ ಸಂಘದ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್‌ರವರು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿ, ಹೇಗೆ ಇಂದು ಕಾರ್ಯಕ್ರಮದ ದೀಪ ಬೆಳಗಿಸಿದಂತೆ ಮುಂದೆ ಸಂಘವೂ ದೀಪದಂತೆ ಪ್ರಜ್ವಲಿಸಲಿ ಜೊತೆಗೆ ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ಸ್ ವೃತ್ತಿ ಬಾಂಧವರು ದೀಪದಂತೆ ಪ್ರಜ್ವಲಿಸಿ ಜೀವನವು ಉಜ್ವಲವಾಗಿ ಬೆಳೆಯಲಿ ಎಂದರು.


ದೇಹದ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಿ-ವಂ|ಡಾ|ಜೆ.ಬಿ ಸಲ್ದಾನ್ಹಾ:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಡಾ|ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಮಾತನಾಡಿ, ಇಂತಹ ಸಂಘಟನೆಗಳಲ್ಲಿ ದುಡಿಯುವವರು ಸಮರ್ಪಕ ನಿದ್ರೆ, ಆಹಾರ, ವ್ಯಾಯಮವನ್ನು ಕಾಪಾಡುವುದರೊಂದಿಗೆ ತನ್ನ ದೇಹದ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಬೇಕು ಜೊತೆಗೆ ಇಂತಹ ಸಂಘಟನೆಯಲ್ಲಿ ಗುರುತಿಸಿಕೊಂಡ ಸದಸ್ಯರು ವರ್ಷಕ್ಕೊಮ್ಮೆ ಆರೋಗ್ಯದ ತಪಾಸಣೆ ಮಾಡಬೇಕಾಗಿದೆ. ಯಾಕೆಂದರೆ ನಿಮ್ಮನ್ನು ನಂಬಿಕೊಂಡು ಕುಟುಂಬವಿದೆ, ಅವರ ರಕ್ಷಣೆ ನಿಮ್ಮ ಹೊಣೆಯಾಗಿದೆ ಅನ್ನುವುದನ್ನು ಮರೆಯಬೇಡಿ. ನಾವೆಲ್ಲಾ ಜಾತಿ, ಮತ, ಧರ್ಮ ಭೇದ ಮರೆತು ಪರಸ್ಪರ ಸಹಕರಿಸುತ್ತಾ ಮುಂದುವರೆಯೋಣ ಎಂದರು.


ಸಂಘಕ್ಕೆ ಉತ್ತಮ ನಿವೇಶನ ಸಿಗುವಲ್ಲಿ ಸರಕಾರಕ್ಕೆ ಒತ್ತಡ ಹಾಕೋಣ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವೃತ್ತಿಯಲ್ಲಿ ನಿರತರಾಗಿರುವ ಈ ಸಂಘಟನೆಯ ಸದಸ್ಯರಿಗೆ ಅವರ ವೃತ್ತಿಗೆ ರಕ್ಷಣೆ ಹಾಗೂ ಶಕ್ತಿಯನ್ನು ನೀಡಲು ಈ ಸಂಘಟನೆಯನ್ನು ಆರಂಭಿಸಿರುವುದಾಗಿದೆ. ಯಾವುದೇ ಕಾರ್ಯಕ್ರಮವಿರಲಿ, ಆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಈ ಸಂಘಟನೆಯ ಜವಾಬ್ದಾರಿ ಮಹತ್ವದ್ದು ಮಾತ್ರವಲ್ಲ ಕಾರ್ಯಕ್ರಮದ ಯಶಸ್ಸಿನ ಕ್ರೆಡಿಟ್ ಇವರದ್ದಾಗಿದೆ. ಯಾವುದೇ ಕಾರ್ಯವಿರಲಿ, ಕಾರ್ಯಕ್ರಮದ ಧ್ವನಿಯಾಗಿಸುವ, ಬೆಳಕಾಗಿಸುವ, ಆಸರೆಯಾಗಿಸುವ, ಚಂದಗಾಣಿಸುವ ಇವರ ಸಂಘಟನೆಯು ಬಲವರ್ಧನೆಗೊಳ್ಳಲಿ ಜೊತೆಗೆ ಸಂಘಕ್ಕೆ ಉತ್ತಮ ನಿವೇಶನ ಸಿಗುವಲ್ಲಿ ಸರಕಾರಕ್ಕೆ ಒತ್ತಡ ಹಾಕೋಣ ಎಂದರು.


ಜಗತ್ತಿನಲ್ಲಿನ ಪ್ರಕೃತಿಯಲ್ಲಿಯೇ ಸೌಹಾರ್ದತೆ, ಸೇವಾ ಮನೋಭಾವ, ಕರುಣೆ ಮೇಳೈಸಿದೆ-ಎಸ್.ಬಿ ದಾರಿಮಿ:
ಹಿರಿಯ ಧಾರ್ಮಿಕ ಪಂಡಿತ, ಎಸ್.ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ, ದೇಶದ ಸೌಹಾರ್ದತೆಯ ಕೊಡುಗೆಯೇ ಈ ಸಂಘಟನೆಯಾಗಿದೆ. ಈ ಸಂಘಟನೆಗೆ ಯಾವುದೇ ಜಾತಿ-ಧರ್ಮವಿಲ್ಲ, ರಾಜಕೀಯ ಪಕ್ಷವಿಲ್ಲದೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಓದಿ ಸೌಹಾರ್ದತೆಯು ಬರಲ್ಲ. ಜಗತ್ತಿನಲ್ಲಿನ ಪ್ರಕೃತಿಯಲ್ಲಿಯೇ ಸೌಹಾರ್ದತೆ, ಸೇವಾ ಮನೋಭಾವ, ಕರುಣೆ ಮೇಳೈಸಿದೆ. ಕೇವಲ ಗ್ರಂಥಗಳನ್ನು ಓದಿದರೆ ಸಾಲದು, ನಾವು ವೈಜ್ಞಾನಿಕವಾಗಿ ಮುಂದುವರೆದಾಗ ಮಾತ್ರ ನಮ್ಮಲ್ಲಿನ ಸಾಮಾಜಿಕ ಜವಾಬ್ದಾರಿ ಎಚ್ಚೆತ್ತುಕೊಳ್ಳುತ್ತದೆ. ವೈಜ್ಞಾನಿಕವಾದ ಚಿಂತನೆ ಇದ್ದಾಗ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ದೇಶದ ಹಿತದೃಷ್ಟಿಯಿಂದ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.


ಧಾರ್ಮಿಕ/ರಾಜಕೀಯ ನಾಯಕರು, ಆರ್ಕೇಸ್ಟ್ರಾ/ಗಾಯಕರು ಲೀಡರ್ ಆಗಲು ಸಂಘಟನೆ ಕಾರಣ-ಧನರಾಜ್ ಶೆಟ್ಟಿ:
ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಧನರಾಜ್ ಶೆಟ್ಟಿ ಮಾತನಾಡಿ, ಕಳೆದ ಒಂಭತ್ತು ವರ್ಷಗಳಲ್ಲಿ ಈ ಸಂಘಟನೆಯು ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ ಮಾತ್ರವಲ್ಲ ಪ್ರತಿ ತಾಲೂಕಿನಲ್ಲಿ ಸಂಘಟನೆಗೆ ಸದಸ್ಯರ ಸೇರ್ಪಡೆ ವರ್ಷದಿಂದ ವರ್ಷ ದ್ವಿಗುಣಗೊಳ್ಳುತ್ತಲೇ ಇದೆ. ನಮ್ಮಲ್ಲಿ ಒಗ್ಗಟ್ಟಿದ್ದರೆ ಕಾನೂನಿನ ನೆಲೆಗಟ್ಟಿನಲ್ಲಿ ನಾವು ಏನು ಬೇಕಾದರೂ ಮಾಡಬಹುದಾಗಿದೆ. ಧಾರ್ಮಿಕ ಗುರುಗಳು, ರಾಜಕೀಯ ನಾಯಕರು, ಆರ್ಕೇಸ್ಟ್ರಾದವರು, ಗಾಯಕರು ಲೀಡರ್ ಆಗಲು ನಮ್ಮ ಸಂಘಟನೆ ಕಾರಣ ಎಂದರು.


ಸಂಘಟನೆಯಲ್ಲೂ ಸಮಾನತೆ ಮೇಳೈಸಲಿ-ಶ್ರೀಗಿರೀಶ್ ಮಳಿ:
ನ್ಯಾಯವಾದಿ ಹಾಗೂ ಸಂಘಟನೆಯ ಕಾನೂನು ಸಲಹೆಗಾರರಾದ ಶ್ರೀಗಿರೀಶ್ ಮಳಿ ಮಾತನಾಡಿ, ಸಂವಿಧಾನದಲ್ಲಿ ಸಮಾನತೆ ಹೇಗೆ ಮೇಳೈಸಿದೆಯೋ ಹಾಗೆಯೇ ಈ ಸಂಘಟನೆಯಲ್ಲಿನ ಯಶಸ್ವಿಯುತ ಜವಾಬ್ದಾರಿಯುತ ಕಾರ್ಯವೈಖರಿಯೂ ಸಮಾಜದಲ್ಲಿ ಮೇಳೈಸಿದೆ. ಸಂಘವು ಅಭಿವೃದ್ಧಿ ನೆಲೆಯಲ್ಲಿ ಸಾಗಬೇಕಾದರೆ ಅಲ್ಲಿ ಯಾವುದೇ ಕಾನೂನಿನ ತೊಡಕು ಬರಬಾರದು. ಸಂಘವು ಕಾನೂನಿನಡಿಯಲ್ಲಿ ಕಾರ್ಯ ನಿರ್ವಹಿಸಿದಾಗ ಸಂಘವು ಬಲಗೊಳ್ಳುವುದು ಜೊತೆಗೆ ಸಂಘಟನೆಯಲ್ಲಿನ ಕಾರ್ಮಿಕರಿಗೆ ಜೀವನಕ್ಕೆ ಆಧಾರವಾಗುವಂತಹ ಜೀವ ವಿಮೆಯನ್ನು ಮಾಡಿಸಿಕೊಳ್ಳಿ ಎಂದರು.


ವ್ಯವಹಾರದಲ್ಲಿ ಸ್ಪರ್ಧೆಗೆ ಹೋಗಬೇಡಿ, ಮಾನವೀಯತೆ ಬೆಳೆಸಿಕೊಳ್ಳಿ-ಬಾಬು ವಿಟ್ಲ;
ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಮಾತನಾಡಿ, ಹೇಗೆ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಅಲ್ಲಿ ಧ್ವನಿ, ಬೆಳಕು ಮುಖ್ಯ ನಿಜ. ಆದರೆ ಅಲ್ಲಿ ಉತ್ತಮವಾದ ಚಪ್ಪರವಿಲ್ಲದಿದ್ದರೆ?. ವರ್ಷದ ಹನ್ನೆರಡು ತಿಂಗಳುಗಳಲ್ಲಿ ನಮಗೆ ಇರುವುದು ಕೇವಲ ಮೂರರಿಂದ ಆರು ತಿಂಗಳು ಕೆಲಸ ಮಾತ್ರ. ಸೌಂಡ್ಸ್ ಮತ್ತು ಶಾಮಿಯಾನ ಪೊಣ್ಣ ಕಟ್ಟ್, ಅಳಿಯ ಕಟ್ಟ್ ಇದ್ದಾಗೆ. ಇವೆರಡೂ ಒಟ್ಟಾಗಿ ಸಾಗಿದಾಗ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಸಂಘದವರು ತಮ್ಮ ವಾಹನಗಳ ದಾಖಲೆಗಳನ್ನು ಕಾಲಕಾಲಕ್ಕೆ ಸರಿಯಾಗಿಸಿಟ್ಟುಕೊಳ್ಳಿ. ವ್ಯವಹಾರದಲ್ಲಿ ಸ್ಪರ್ಧೆಗೆ ಹೋಗಬೇಡಿ, ಮಾನವೀಯತೆ ಬೆಳೆಸಿಕೊಳ್ಳಿ. ನಮ್ಮ ವ್ಯವಹಾರದಲ್ಲಿನ 18% ಜಿ.ಎಸ್.ಟಿ ದರವನ್ನು 5% ಕ್ಕೆ ಇಳಿಸುವಲ್ಲಿ ಈಗಾಗಲೇ ಮನವಿಯನ್ನು ರೆಡಿ ಮಾಡಿಕೊಂಡಿದ್ದು ಶೀಘ್ರ ಈ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.


ಸಂಘಟನೆಯನ್ನು ಬಲಪಡಿಸುವಲ್ಲಿ ನಾವು ಸಂಕಲ್ಪ ತೊಡುವವರಾಗಬೇಕು-ರಾಜಶೇಖರ ಶೆಟ್ಟಿ:
ಕರ್ನಾಟಕ ರಾಜ್ಯ ಶಾಮಿಯಾನ, ಡೆಕೋರೇಶನ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಹ ಕಾರ್ಯದರ್ಶಿ ರಾಜಶೇಖರ ಶೆಟ್ಟಿ ಕುಡ್ತಮುಗೇರು ಮಾತನಾಡಿ, ಧ್ವನಿ, ಬೆಳಕು, ಶಾಮಿಯಾನ ಇದಕ್ಕೆ ಡೆಕೋರೇಶನ್ಸ್ ವಿಭಾಗವೂ ಸೇರಿಕೊಂಡಿದೆ. ಸಂಘಟನೆಗಳು ಸಮಾಜದಲ್ಲಿ ಗುರುತಿಸುವಂತಾಗಬೇಕು ಜೊತೆಗೆ ಆರ್ಥಿಕ ಪ್ರಗತಿಯೂ ಕಾಣುವಂತಾಗಬೇಕು. ಸಂಘಟನೆಯಲ್ಲಿ ಸ್ಪರ್ಧೆ ಮಾಡುವುದು ಬೇಡ, ಅದು ಮನಸ್ಸಿನಲ್ಲಿರಲಿ. ಸಂಘಟನೆಯನ್ನು ಬಲಪಡಿಸುವಲ್ಲಿ ನಾವು ಸಂಕಲ್ಪ ತೊಡುವಂತಾಗಬೇಕು. ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ಕೆ.ರವರ ತಂಡ ಉತ್ತಮ ಕಾರ್ಯ ಕೈಗೊಂಡಿದ್ದು ನೂತನ ಅಧ್ಯಕ್ಷ ಯೋಗೀಶ್ ಕಾವುರವರ ತಂಡ ಇವನ್ನು ಮುಂದುವರೆಸಲಿ ಎಂದರು.


ವೃತ್ತಿ ಬಾಂಧವರ ನಡುವೆ ಸ್ಪರ್ಧೆ ಬೇಡ, ಒಗ್ಗಟ್ಟಿರಲಿ-ರಾಮಕೃಷ್ಣ ಕೆ:
ಅಧ್ಯಕ್ಷತೆ ವಹಿಸಿದ ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ಸ್ ಮಾಲಕರ ಸಂಘದ ನಿರ್ಗಮಿತ ಅಧ್ಯಕ್ಷ ರಾಮಕೃಷ್ಣ ಕೆ ಮಾತನಾಡಿ, ಸಂಘಟನೆಯ ಸದಸ್ಯರ ಸಹಕಾರದೊಂದಿಗೆ ನಮ್ಮ ಸಂಘಟನೆಯು ಸಮಾಜದಲ್ಲಿ ಉತ್ತಮವಾಗಿ ಗುರುತಿಸಿಕೊಂಡಿದೆ. ನಮ್ಮ ಸಂಘದ ಪ್ರೀತಿ, ಒಂದೇ ಕುಟುಂಬ ಎಂಬ ಒಗ್ಗಟ್ಟಿನ ಮನಸ್ಸಿನಂತೆ ಇದು ಸಾಧ್ಯವಾಗಿದೆ. ನಮ್ಮ ವೃತ್ತಿ ಬಾಂಧವರ ನಡುವೆ ಸ್ಪರ್ಧೆ ಬೇಡ, ಒಗ್ಗಟ್ಟಿರಲಿ. ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಯೋಗೀಶ್ ಕಾವುರವರ ತಂಡವು ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಶ್ವಾಸವಿದ್ದು ಓರ್ವ ಸಾಮಾನ್ಯ ಸದಸ್ಯನಾಗಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.


ಶ್ರದ್ಧಾಂಜಲಿ:
ಸಂಘದ ಸದಸ್ಯರಾಗಿದ್ದು ಅಗಲಿದ ಶ್ರೀದುರ್ಗಾ ಸೌಂಡ್ಸ್‌ನ ಕೃಷ್ಣಪ್ಪ ಗೌಡ, ಅಮರ್ ಸೌಂಡ್ಸ್‌ನ ರವೀಂದ್ರ, ಪಂಚಾಕ್ಷರಿ ಸೌಂಡ್ಸ್‌ನ ಗಣೇಶ್, ಶಿವಕೃಪ ಶಾಮಿಯಾನದ ಚಂದ್ರಹಾಸ ಆಳ್ವ, ಸೋನಿ ಗೊನ್ಸಾಲ್ವಿಸ್‌ರವರುಗಳ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಅಭಿನಂದನೆ:
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ವಿಸ್ಮಯ ಇವೆಂಟ್‌ನ ಸಾಯಿರಾಂ, ಓಂಕಾರ್ ಸೌಂಡ್ಸ್‌ನ ಚಿಂತನ್, ಫಿಕ್ಸೆಲ್ ಎಲ್.ಇಡಿಯ ಪ್ರಜ್ವಲ್ ಎಂ.ಎಸ್, ಸಂಘದ ಅಧ್ಯಕ್ಷ ರಾಮಕೃಷ್ಣ ಕೆರವರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಷಾ ಆಚಾರ್ಯ, ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿರುವ ಹರ್ಷಿತ್ ಮರ್ಕಂಜ, ಚಂದ್ರಶೇಖರ ಪುತ್ತೂರು, ರಶ್ಮಿ ಗಿರಿಭಾಗ್, ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದ ಬಾಲಕೃಷ್ಣ ರೈ ಪೊರ್ದಾಲ್, ಕಾರ್ಯಕ್ರಮದ ಸುದ್ದಿಯನ್ನು ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ಪತ್ರಕರ್ತ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕರವರುಗಳನ್ನು ಹಾಗೂ ಸಭೆಯಲ್ಲಿ ಅದೃಷ್ಟದ ವ್ಯಕ್ತಿಗಳಾಗಿ ಗುರುತಿಸಿಕೊಂಡಿರುವ ಜಯರಾಜ್ ಹಾಗೂ ರಂಜಿತ್‌ರವರುಗಳನ್ನು ಅಭಿನಂದಿಸಲಾಯಿತು.


ವೇದಿಕೆಯಲ್ಲಿ ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು. ರಶ್ಮಿ ಗಿರಿಭಾಗ್ ಪ್ರಾರ್ಥಿಸಿದರು. ನಿರ್ಗಮಿತ ಕೋಶಾಧಿಕಾರಿ ಶ್ರೀಹರ್ಷ ರೈ ಸ್ವಾಗತಿಸಿ, ನಿರ್ಗಮಿತ ಕಾರ್ಯದರ್ಶಿ ಅನೀಶ್ ಶೆಟ್ಟಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕೇಶವ ಕುಡಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಅಧ್ಯಕ್ಷ ಯೋಗೀಶ್ ಕಾವು ವಂದಿಸಿದರು. ಸಂಘದ ಸದಸ್ಯರಾದ ಪ್ರಕಾಶ್ ಡಿ’ಸೋಜ, ಮನೋಹರ್ ಶೆಟ್ಟಿ, ಜೀವನ್ ಕಿಶೋರ್ ಫೆರ್ನಾಂಡೀಸ್, ಹಸನ್ ಹಾಜಿ, ವಿಲಿಯಂ ಪಿಂಟೊ, ಸೀತಾರಾಮ ಬಲ್ನಾಡು, ವಸಂತ ಬೆಳ್ಳಿಪ್ಪಾಡಿ, ಮಧು ಬೊಳ್ವಾರು, ಜನಾರ್ದನ ಗೌಡ ಕೆಮ್ಮಾಯಿ, ಕೇಶವ ಕುಡಿಪಾಡಿ, ಪಿ.ಗೋವರ್ಧನ್ ಶೆಟ್ಟಿ, ರಝಾಕ್, ಹೇಮಂತ್‌ರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಪದ ಪ್ರದಾನ…
ಸಂಘದ ನೂತನ ಅಧ್ಯಕ್ಷ ಯೋಗೀಶ್ ಕಾವು, ಕಾರ್ಯದರ್ಶಿ ಶ್ರೀಹರ್ಷ ರೈ ಕೆ, ಕೋಶಾಧಿಕಾರಿ ಪಿ.ಗೋವರ್ಧನ್ ಶೆಟ್ಟಿ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್, ಉಪಾಧ್ಯಕ್ಷ ಜೀವನ್ ಕಿಶೋರ್ ಫೆರ್ನಾಂಡೀಸ್, ಜೊತೆ ಕಾರ್ಯದರ್ಶಿ ವಿನ್ಸನ್ ಕಿಶೋರ್ ರೇಗೊ, ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಗೌರವ ಸಲಹೆಗಾರರಾದ ಹಸನ್ ಹಾಜಿ, ಸಿಪ್ರಿಯಾನ್ ಮೊರಾಸ್, ವಿಲಿಯಂ ಪಿಂಟೊ, ರಾಮಕೃಷ್ಣ ಕೆ, ನಾಗೇಶ್ ಕೆ.ಬಲ್ನಾಡು, ಸಮಿತಿ ಸದಸ್ಯರಾಗಿ ಅನೀಶ್ ಶೆಟ್ಟಿ, ಜನಾರ್ದನ ಕೆಮ್ಮಾಯಿ, ಸುಧೀರ್ ಬಲ್ನಾಡು, ವಸಂತ ಬೆಳ್ಳಿಪ್ಪಾಡಿ, ವಿಶ್ವನಾಥ ಪಂಚಮಿ, ನವೀನ್ ಜನನಿ, ಅಬ್ಬಾಸ್ ರಾಯಲ್, ಧನಂಜಯ ಪಂಚಾಕ್ಷರಿ, ಲೋಕೇಶ್ ಸ್ಕಂದ, ಸೀತಾರಾಮ ಬಲ್ನಾಡು, ಪ್ರಕಾಶ್ ಡಿ’ಸೋಜ ಆಶೀರ್ವಾದ, ಹೇಮಂತ್ ಸಾಲ್ಮರ, ಕೇಶವ ಸುವರ್ಣರವರುಗಳಿಗೆ ಮಾಜಿ ಶಾಸಕ ಸಂಜೀವ ಮಠಂದೂರುರವರು ಧ್ವಜ ನೀಡುವ ಮೂಲಕ ಪದ ಪ್ರದಾನ ನೆರವೇರಿಸಿದರು.

ರಂಜಿಸಿದ ರಸಮಂಜರಿ..
ನೂತನ ಅಧ್ಯಕ್ಷ ಚಿಂತನ ಸೌಂಡ್ಸ್ ಮಾಲಕ ಯೋಗೀಶ್ ಕಾವುರವರ ಪ್ರಾಯೋಜಕತ್ವದಲ್ಲಿ ಗಾಯಕರಾದ ಹರ್ಷಿತ್ ಮರ್ಕಂಜ, ಚಂದ್ರಶೇಖರ ಪುತ್ತೂರು, ರಶ್ಮಿ ಗಿರಿಭಾಗ್‌ರವರ ಸಿರಿಕಂಠದಿಂದ ಮೂಡಿಬಂದ ಭಕ್ತಿಗೀತೆಗಳು, ಹಿಂದಿ, ಕನ್ನಡ, ತಮಿಳು ಚಲನಚಿತ್ರೆಗಳು ಪ್ರೇಕ್ಷಕರ ಮನರಂಜಿಸಿದವು.

ಸನ್ಮಾನ..
ಕಳೆದ ಹಲವು ವರ್ಷಗಳಿಂದ ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್‌ನಲ್ಲಿ ಸೇವೆಗೈಯುತ್ತಾ ಬಂದಿರುವ, 1984ರಲ್ಲಿ ಅರುವ ಯಕ್ಷಗಾನ ಮೇಳದಲ್ಲಿ ಧ್ವನಿ ಬೆಳಕು ಸಂಯೋಜನೆಯ ಸಂಯೋಜಕರಾಗಿ ಆರಂಭಿಸಿ, 11 ವರ್ಷ ಎವರ್‌ಬ್ರೈಟ್, ಅಮರ್ ಲೈಟಿಂಗ್ ನೆಲ್ಲಿಕಟ್ಟೆ, ಬಲೆ ಚಾ ಪರ್ಕ ತಂಡದಲ್ಲಿ ಹೀಗೆ ಇತರ ತಂಡಗಳೊಂದಿಗೆ ದುಡಿದು 2023ರಲ್ಲಿ ಈಶ್ವರಮಂಗಲದಲ್ಲಿ ಸ್ವಂತ ಕೃಷ್ಣ ಲೈಟ್ಸ್ ಸೌಂಡ್ಸ್ ಆರಂಭಿಸಿರುವ ಹಿರಿಯರಾದ ಯಂ.ಕೃಷ್ಣ ಮುಂಡ್ಯ, ಪುತ್ತೂರಿನಲ್ಲಿ ಸೌಂಡ್ಸ್ ಮತ್ತು ಲೈಟಿಂಗ್ಸ್ ಮೊದಲಾಗಿ ಆರಂಭಿಸಿ ಕಳೆದ 25 ವರ್ಷಗಳಿಂದ ನಡೆಸುತ್ತಾ ಬಂದಿರುವ ಶ್ರುತಿ ಸೌಂಡ್ಸ್ ಮತ್ತು ಲೈಟಿಂಗ್ಸ್‌ನ ಮೋಹನ್ ಜೈನ್ ಬನ್ನೂರು, 15ನೇ ವಯಸ್ಸಿನಲ್ಲೇ ಸೌಂಡ್ಸ್‌ನಲ್ಲಿ ಕೆಲಸ ಆರಂಭಿಸಿ ಬಳಿಕ ಜಮೀಳ ಸೌಂಡ್ಸ್, ರವಿ ಸೌಂಡ್ಸ್‌ನಲ್ಲಿ ಕೆಲಸ ನಿರ್ವಹಿಸಿದ ಅಬ್ದುಲ್ ರಹಿಮಾನ್(ಅದ್ರಮಾಚ್ಚ) ಹಾಗೂ ತಾಲೂಕು ಧ್ವನಿ, ಬೆಳಕು, ಶಾಮಿಯಾನ, ಡೆಕೋರೇಶನ್ಸ್ ಸಂಸ್ಥೆಯಲ್ಲಿ ಗೌರವಾಧ್ಯಕ್ಷರಾಗಿರುವ ಶ್ಯಾಮ್ ಮಂಜುನಾಥ ಪ್ರಸಾದ್, ಸಂಸ್ಥೆಯ ಕಾರ್ಯಕ್ರಮಗಳಿಗೆ ಸಭಾಂಗಣವನ್ನು ನೀಡಿ ಸಹಕರಿಸುತ್ತಿರುವ ಎಂ.ಡಿ.ಎಸ್ ಮಾಲಕ ಹೆನ್ರಿ ಡಿ’ಸೋಜ, ಕಳೆದ ವರ್ಷ ಅಧ್ಯಕ್ಷರಾಗಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ನಿರ್ಗಮಿತ ಅಧ್ಯಕ್ಷ ರಾಮಕೃಷ್ಣ ಕೆ, ಸಂಸ್ಥೆಯ ಸದಸ್ಯರಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಸದಸ್ಯರ ಮಕ್ಕಳಾದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದರ್ಶಿನಿ ಎಂ(ಧರ್ಮಶ್ರೀ ಸರ್ವಿಸಸ್‌ನ ಎಂ.ಮೋಹನ್ ಗೌಡ-ಯಶೋಧರವರ ಪುತ್ರಿ), ಪದವಿ ಪರೀಕ್ಷೆಯಲ್ಲಿ ತನ್ವಿತಾ ಎಂ.ಶೆಟ್ಟಿ(ಮಹಾಲಿಂಗೇಶ್ವರ ಸೌಂಡ್ಸ್ & ಲೈಟ್ಸ್‌ನ ಮನೋಹರ್ ಶೆಟ್ಟಿ-ಗಾಯತ್ರಿ ಶೆಟ್ಟಿರವರ ಪುತ್ರಿ)ರವರುಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here