







ನೆಲ್ಯಾಡಿ: ನೆಲ್ಯಾಡಿಬೈಲು-ಹೊಸವಕ್ಲು ಸಾರ್ವಜನಿಕ ರಸ್ತೆಯಲ್ಲಿ ಕೆಸರು ಮಿಶ್ರಿತ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ನೆಲ್ಯಾಡಿ ಬ್ರಾಂಚ್ ಅಧ್ಯಕ್ಷ ಮಹಮ್ಮದ್ ಶರೀಫ್ ನೆಲ್ಯಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.


ಈ ರಸ್ತೆಯಲ್ಲಿ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ದ್ವಿಚಕ್ರ ಹಾಗೂ ಇತರೇ ವಾಹನ ಸವಾರರು ಸಂಚರಿಸುತ್ತಾರೆ. ರಸ್ತೆಯ ಮೇಲೆ ಕೆಸರು ಮಿಶ್ರಿತ ನೀರು ಹರಿಯುತ್ತಿರುವ ಕಾರಣ ನಡೆದು ಹೋಗಲು ಹಾಗೂ ವಾಹನ ಚಲಾಯಿಸಲು ತುಂಬಾ ಕಷ್ಟವಾಗಿದ್ದು ಜಾರಿ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಸ್ತೆಗೆ ಕೆಸರು ನೀರು ಹರಿಯದಂತೆ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸುವುದು ಅಥವಾ ಅಗತ್ಯ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ಮನವಿಯಲ್ಲಿ ವಿನಂತಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ಎಸ್‌ಡಿಪಿಐ ನೆಲ್ಯಾಡಿ ಬ್ರಾಂಚ್ ಕಾರ್ಯದರ್ಶಿ ಹಾರೀಸ್, ಭಾಷಾ ಸಾಹೇಬ್ ಉಪಸ್ಥಿತರಿದ್ದರು.













