






ಕಡಬ: ಪುತ್ತೂರು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿಗಳಾದ ಮಂಗಳ ಕಾಳೆ ಅವರ ಅಧ್ಯಕ್ಷತೆಯಲ್ಲಿ ಕಡಬ ತಾಲ್ಲೂಕು ವಿಕಲಚೇತನರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಆ.5ರಂದು ಕಡಬ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.



ಪುತ್ತೂರು ತಾಲ್ಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಅವರು ಜುಲೈ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ವರದಿಯನ್ನು ವಾಚಿಸಿದರು.



ಸಭೆಯ ನಿರ್ಣಯಗಳು:
ಕಡಬ ತಾಲ್ಲೂಕು ವ್ಯಾಪ್ತಿಯ ಹಿರಿಯ ನಾಗರಿಕರ ಗ್ರಾಮವಾರು ಮಾಹಿತಿಯನ್ನು ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರಿಂದ ಸಂಗ್ರಹಿಸುವುದು.1ನೇ ತರಗತಿಯಿಂದ 2ನೇ ಪಿಯುಸಿವರೆಗಿನ ವಿಕಲಚೇತನ ಮಕ್ಕಳ ಮಾಹಿತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿಗಳ ಕಚೇರಿಗೆ ಕಳುಹಿಸುವುದು.ಆಟಿಸಂ, ಸೆರೆಬ್ರಲ್ ಪಾಲ್ಸಿ, ಬೌದ್ಧಿಕ, ಬಹುವಿಧ ವಿಕಲತೆ ಇರುವವರಿಗೆ ಗ್ರಾಮ ಪಂಚಾಯತ್ ವಾರು ನಿರಾಮಯ ಯೋಜನೆ ಮಾಡಿಸುವುದು.ವಿಕಲಚೇತನರ ಇಲಾಖೆಯ ಸಾಧನ ಸಲಕರಣೆಗಳ ಬಗ್ಗೆ ಚರ್ಚೆ.ಹಿರಿಯ ನಾಗರಿಕರಿಗೆ ಗುರುತು ಚೀಟಿ ಮಾಡಿಸಲು ಪುತ್ತೂರು ಹಾಗೂ ಕಡಬ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಪುತ್ತೂರು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಪತ್ರ ಬರೆಯುವುದು.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಯುವ ವಿಕಲಚೇತನರ ಪ್ರಮಾಣ ಪತ್ರ ಶಿಬಿರಕ್ಕೆ ನಿಯೋಜನೆಗೊಂಡ ಪುತ್ತೂರು ಹಾಗೂ ಕಡಬ ತಾಲ್ಲೂಕಿನ ಎಲ್ಲಾ ವಿಕಲಚೇತನರ ಇಲಾಖೆಯ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಶಿಬಿರ ಮುಕ್ತಾಯವಾಗುವವರೆಗೆ ಕರ್ತವ್ಯ ನಿರ್ವಹಿಸುವುದು.
ಸಭೆಯಲ್ಲಿ ಕಡಬ ತಾಲ್ಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಹಾಜರಿದ್ದರು.ಕಡಬ ತಾಲ್ಲೂಕು ಅಲಂಕಾರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಮೋನಪ್ಪ ಸ್ವಾಗತಿಸಿದರು. ಕಡಬ ತಾಲ್ಲೂಕು ನೊಜಿಬಾಳ್ತಿಲ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಸಜಿತ್ ಪಿ.ವಿ ವಂದಿಸಿದರು.










