






ಉಪ್ಪಿನಂಗಡಿ: ಆಟವಾಡಿ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕರನ್ನು ಹಿರೇಬಂಡಾಡಿ ಗ್ರಾಮದ ಅಡ್ಯಲ್ ಎಂಬಲ್ಲಿ ಕಾರಿನಲ್ಲಿ ಬಂದಿದ್ದ ನಾಲ್ಕೈದು ಮಂದಿಯ ತಂಡವೊಂದು ಕಾರಿನಲ್ಲಿ ಕರೆದೊಯ್ಯಲು ಒತ್ತಾಯಿಸಿ ಬೆನ್ನಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಶಂಕಿತ ನಾಲ್ವರು ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.


ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಹಿರೇಬಂಡಾಡಿ ಗ್ರಾಮದ ಮುಡಿಪು ಹಾಗೂ ಕಡ್ಯೊಟ್ಟು ಪರಿಸರದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಶಾಲಾ ಮೈದಾನದಲ್ಲಿ ಆಟವಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಡ್ಯಲ್ ಎಂಬಲ್ಲಿ ಕಾರೊಂದನ್ನು ರಸ್ತೆ ಬದಿ ನಿಲ್ಲಿಸಿದ್ದ ನಾಲ್ಕೈದು ಮಂದಿಯ ತಂಡ, ನಾವೂ ಕೂಡಾ ಮುಂದಕ್ಕೆ ಹೋಗುತ್ತಿದ್ದೇವೆ. ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಬನ್ನಿ ನಮ್ಮ ಜೊತೆ ಎಂದು ಕರೆದಿದ್ದಾರೆ. ಬಾಲಕರು ಬರುವುದಿಲ್ಲವೆಂದು ತಿಳಿಸಿದಾಗ ತಂಡದ ಇಬ್ಬರು ಬೆನ್ನಟ್ಟಿದ್ದರೆಂದೂ, ಬೆದರಿದ ಬಾಲಕರು ಓಡಿ ತಪ್ಪಿಸಿಕೊಂಡರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



ಕಾರಿನಲ್ಲಿದ್ದ ಮಂದಿ ಪರಿಸರದಲ್ಲಿ ತುಂಬಾ ಹೊತ್ತು ಕಾರನ್ನು ನಿಲ್ಲಿಸಿ ಸಂಶಯಾಸ್ಪದ ವರ್ತನೆ ತೋರುತ್ತಿದ್ದರೆಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.
ದೂರು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ಸಿಸಿ ಕ್ಯಾಮಾರಗಳ ದಾಖಲೆಯನ್ನು ಪರಿಶೀಲಿಸಿ ಘಟನಾ ಸ್ಥಳದಲ್ಲಿದ್ದ ಕಾರನ್ನು ಗುರುತಿಸಿ ಅದರಲ್ಲಿ ಪ್ರಯಾಣಿಸಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸುತ್ತಿದ್ದು, ಪ್ರಾಥಮಿಕ ಮಾಹಿತಿಯಂತೆ ಗೆಳೆಯನ ಕಾರನ್ನು ಚಲಾಯಿಸಿಕೊಂಡು ಬಂದ ಯುವಕರು ಅದರ ಇಂಧನ ಖಾಲಿಯಾಗಿ ಅಡ್ಯಲ್ ಪರಿಸರದಲ್ಲಿ ನಿಲ್ಲಿಸಬೇಕಾಗಿ ಬಂದಿತ್ತೆಂದೂ, ಇಂಧನವನ್ನು ತರಿಸಿ ಕಾರನ್ನು ಚಲಾಯಿಸುವ ಸಮಯದಲ್ಲಿ ಆ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಬಾಲಕರಿಬ್ಬರಿಗೆ ಸಹಾಯ ಮಾಡುವ ಸಲುವಾಗಿ ನಮ್ಮ ಕಾರಿನಲ್ಲಿ ಬನ್ನಿ ಎಂದು ಕರೆದಿದ್ದೇವೆಯೇ ವಿನಹ ಯಾವುದೇ ದುರುದ್ದೇಶವನ್ನು ಹೊಂದಿರಲಿಲ್ಲ ಎಂದು ಯುವಕರು ತಿಳಿಸಿದ್ದು, ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆನ್ನು ತಿಳಿಯಲು ವಿಚಾರಣೆಯನ್ನು ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಹೆತ್ತವರು ನೀಡಿದ ದೂರಿಗೆ ಪೊಲೀಸ್ ಇಲಾಖೆ ತೋರಿದ ತ್ವರಿತ ಸ್ಪಂದನೆಯು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.










