







ಸುಳ್ಯದ ಹೂಮಲೆ ಆನೆಗಳ ತಂಡ ಬೆಂಗಮಲೆಯಿಂದ ಕೆಮ್ಮನಬಳ್ಳಿಗೆ ಪ್ರವೇಶ


ವರದಿ : ಪ್ರವೀಣ್ ಚೆನ್ನಾವರ



ಪುತ್ತೂರು: ಅರಣ್ಯದಂಚಿನ ಜನರ ನಿದ್ದೆಗೆಡಿಸಿರುವುದು ಕಾಡಾನೆಗಳ ನಿರಂತರ ದಾಳಿ. ಶಾಶ್ವತ ಪರಿಹಾರದ ಆಗ್ರಹ ಕೇಳಿ ಕೇಳಿ ಸುಸ್ತಾದರೂ ಇನ್ನೂ ಫಲ ಸಿಕ್ಕಿಲ್ಲ. ಈ ನಡುವೆ ಕಾಡಾನೆಗಳ ದಾಳಿ ಮುಂದುವರಿದಿದೆ. ಆ. 11ರ ರಾತ್ರಿ ಹೊಸ ಆನೆಗಳ ತಂಡವೊಂದು ಜನವಸತಿ ಪ್ರದೇಶಕ್ಕೆ ನುಗ್ಗಿರುವುದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಹೂಮಲೆ ಆನೆಗಳ ತಂಡದ ಪ್ರವೇಶ:
ಸುಳ್ಯದ ಹೂಮಲೆ ಕಾಡಿನಲ್ಲಿದ್ದ 7 ಆನೆಗಳಿರುವ ತಂಡ ಬೆಂಗಮಲೆ ಕಾಡಿನಿಂದ ಕೆಮ್ಮನಬಳ್ಳಿ ಪ್ರದೇಶಕ್ಕೆ ಪ್ರವೇಶಿಸಿದೆ. ಈ ಆನೆಗಳು ಇನ್ನೂ ಜಾಲ್ಸೂರು, ಕನಕಮಜಲು, ಆನೆಗುಂಡಿ, ಕರ್ನಾಜೆ, ಮುಗೇರು, ದೇಲಂಪಾಡಿ, ಪೆರ್ನಾಜೆ, ಪೆರ್ಲಂಪಾಡಿ, ನೂಜಿಬೈಲು, ಕೊಚ್ಚಿ, ಕಾವು, ಚಾಕೋಟೆ, ತಿಂಗಳಾಡಿ, ಮಾಡಾವು, ಮುಂತಾದ ಭಾಗಗಳಿಗೆ ಬಂದು ದಾಂಧಲೆ ಮಾಡುವ ಆತಂಕ ಸಾರ್ವಜನಿಕರಲ್ಲಿದೆ. ರಾತ್ರಿ ಹೊತ್ತು ಜಾಗರಣೆ ಮಾಡಿ ಬೆಳೆ ಕಾಪಾಡುವ ಪರಿಸ್ಥಿತಿ ಮತ್ತೆ ಬಂದಿದೆ.
4 ತಾಲೂಕುಗಳಲ್ಲಿ ತೀವ್ರ ಆತಂಕ:
ದ.ಕ ಜಿಲ್ಲೆಯ ಕಡಬ, ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕುಗಳು ಪಶ್ಚಿಮ ಘಟ್ಟದ ಅರಣ್ಯಕ್ಕೆ ಹೊಂದಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡುಕೋಣ, ಕಾಡುಹಂದಿ, ಕಾಡಾನೆಗಳು ತೋಟಗಳಿಗೆ ಲಗ್ಗೆ ಇಟ್ಟು ರಬ್ಬರ್, ಅಡಿಕೆ, ಬಾಳೆ, ಭತ್ತದ ಬೆಳೆಯನ್ನು ನಾಶ ಮಾಡುತ್ತಿವೆ. ಅದರೊಂದಿಗೆ ಕಾಡಾನೆಯ ಉಪಟಳ ಅಪಾಯಕಾರಿ ಮಟ್ಟದಲ್ಲಿದೆ. ಕಾಡಾನೆಗಳ ಸಂಚಾರದ ವೇಳೆ ಅವುಗಳಿಗೆ ಎದುರಾಗುವ ಜನರು ತುಳಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಶಾಶ್ವತ ಪರಿಹಾರ ಎಲ್ಲಿ?:
ಕಾಡಾನೆಗಳು ಜನವಸತಿ ಮತ್ತು ಕೃಷಿ ಭೂಮಿಗೆ ನುಗ್ಗುವುದನ್ನು ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ರೈತರು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಕೃಷಿ ಹಾನಿಗೆ ಅಲ್ಪ-ಸ್ವಲ್ಪ ಪರಿಹಾರ ಮಾತ್ರ ಸಿಗುತ್ತಿದೆ. ಕೆಲವೆಡೆ ಸೋಲಾರ್ ಬೇಲಿ, ಕಾಂಕ್ರೀಟ್ ತಡೆಗೋಡೆ, ಆನೆ ಕಂದಕ ನಿರ್ಮಿಸಲಾಗಿದ್ದರೂ ಆನೆಗಳು ಹೊಸ ದಾರಿ ಹುಡುಕಿ ಒಳಗೆ ನುಗ್ಗುತ್ತಿರುವುದರಿಂದ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಪರಿಹಾರದ ಹಣದಿಂದ ಹೋದ ಬೆಳೆ ಮರಳಿ ಬರುವುದಿಲ್ಲ. ನಮ್ಮ ಜೀವಕ್ಕೆ ಭದ್ರತೆ ಕೊಡಿ ಎಂಬುದು ಕಾಡಂಚಿನ ರೈತರ ಬೇಡಿಕೆ.
ಕಾಡಾನೆ ದಾಳಿಗೆ ಬಲಿಯಾದವರು :
ಕಳೆದ ವರ್ಷಗಳಲ್ಲಿ ಕಾಡಾನೆ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. 2022 ಡಿ.31 ಶಿರಾಡಿಯಲ್ಲಿ ತಿಮ್ಮಪ್ಪ(45) ಮೃತ್ಯು. 2023 ಫೆ.20ರಂದು ರೆಂಜಿಲಾಡಿ ಮೀನಾಡಿ ಬಳಿ ರಮೇಶ್ ರೈ(55) ಮತ್ತು ರಂಜಿತಾ(21) ಮೃತ್ಯು. 2023 ಸೆ.28ರಂದು ಐತ್ತೂರಿನ ಚೋಮ(56) ಗಾಯಗೊಂಡು ಮೃತ್ಯು. 2025 ಏ.29ರಂದು ಪುತ್ತೂರು ತಾಲೂಕಿನ ಕಣಿಯಾರುಮಲೆ ಸಮೀಪದ ಹರ್ತ್ಯಡ್ಕದಲ್ಲಿ ಸೆಲ್ಲಮ್ಮ(65) ಒಂಟಿ ಸಲಗದ ದಾಳಿಗೆ ಬಲಿಯಾಗಿದ್ದರು. ಈಚೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೆಲ್ಯಡ್ಕ-ಇದ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಅವರನ್ನು 2026 ಆಗಸ್ಟ್ 1ರಂದು ಕಾಡಾನೆ ಕೊಂದು ಹಾಕಿತ್ತು.
ಕೃಷಿ ನಾಶ ಮತ್ತು ಸೆರೆ ಕಾರ್ಯಾಚರಣೆ:
2024 ಜೂನ್ನಲ್ಲಿ ಮೊದಲ ಬಾರಿಗೆ ಮಾಡಾವು, ಪುಣ್ಚಪ್ಪಾಡಿ, ಪಾಲ್ತಾಡಿ, ಸವಣೂರು, ಕೆಯ್ಯೂರು ಸೇರಿದಂತೆ ಹಲವೆಡೆ ಕಾಡಾನೆಗಳು ಬೆಳೆ ನಾಶ ಮಾಡಿದ್ದವು. 2025ರಲ್ಲೂ ಆನೆ ಸಂಚಾರ ಮುಂದುವರಿದಿತ್ತು.2023ರಲ್ಲಿ ರೆಂಜಿಲಾಡಿಯಲ್ಲಿ ಇಬ್ಬರು ಅಮಾಯಕರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದ ಘಟನೆಯ ಬಳಿಕ, ಎಲ್ಲ ಆನೆಗಳನ್ನು ಸೆರೆ ಹಿಡಿಯುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ 1 ಆನೆಯನ್ನು ಮಾತ್ರ ಸೆರೆ ಹಿಡಿದು ಕಾರ್ಯಾಚರಣೆ ನಿಂತಿತು. ಈಗ ಕಂಡುಬಂದ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸವಷ್ಟೇ ನಡೆಯುತ್ತಿದೆ. ಹೊಸದಾಗಿ 7 ಆನೆಗಳ ತಂಡ ಬಂದಿರುವುದರಿಂದ ಕಾಡಂಚಿನ 14ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಭಯ ಆವರಿಸಿದೆ. ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರವೇ ಈಗಿನ ತುರ್ತು ಬೇಡಿಕೆ.
ಗಂಭೀರ ವಿಚಾರ – ಸುನೀಲ್ ಬೋರ್ಕರ್ ಕಾವು
ಕಾಡಾನೆ ದಾಳಿಗೆ ಏನು ಪರಿಹಾರ ಮಾಡಬಹುದು ಎಂಬುದರ ಬಗ್ಗೆ ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಜನರನ್ನು ಕೃಷಿಕರನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿರುವ ಸುನೀಲ್ ಬೋರ್ಕರ್ ಕಾವು ಅವರ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾಕಾದರೂ ಕೃಷಿಕರಾದೆವೋ ಅಂತನ್ನಿಸುವಷ್ಟರ ಮಟ್ಟಿಗೆ ಈ ಕಾಡಾನೆ ನಮಗೆ ಭೀತಿ ಮತ್ತು ಬೇಸರವನ್ನೂ ಹುಟ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಅಷ್ಟು ಭಯಾನಕವಾಗಿದೆ. ಶಾಲೆಗೆ ತೆರಳುವ ಮಕ್ಕಳು, ತೋಟಗಳಿಗೆ ತೆರಳುವ ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಉದ್ಯೋಗದ ನಿಮಿತ್ತ ಸಂಚರಿಸುವ ಪ್ರಯಾಣಿಕರಿಗೆ ಯಾವ ಕ್ಷಣದಲ್ಲಿ ಕಾಡಾನೆ ಎದುರಾಗಬಹುದೋ ಎಂಬ ದಿಗಿಲು. ಕಾಡಾನೆ ಹಾವಳಿಯಿಂದಾಗಿ ಅಡಕೆ, ತೆಂಗು, ಬಾಳೆ, ಕಾಳುಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳು ನಾಶವಾಗುತ್ತಿದ್ದು ಕೃಷಿಕರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಇದು ಕೇವಲ ಬೆಳೆ ನಷ್ಟದ ಸಮಸ್ಯೆಯಲ್ಲ:
ಕೃಷಿಕರ ಬದುಕಿನ ಮೇಲೆಯೇ ಪರಿಣಾಮ ಬೀರುವ ಗಂಭೀರ ಸಮಸ್ಯೆ. ಕಾಡಾನೆಗಳ ಹಾವಳಿ ಇರುವ ಪ್ರದೇಶಗಳನ್ನು ಗುರುತಿಸಿ ಸರಕಾರ ’ಅಪಾಯದ ವಲಯ’ ಎಂದು ಘೋಷಿಸಬೇಕು. ಕಾಡಾನೆಗಳ ಚಲನವಲನದ ಬಗ್ಗೆ ಗ್ರಾಮಸ್ಥರಿಗೆ ತಕ್ಷಣ ಮಾಹಿತಿ ನೀಡಲು ತುರ್ತು ಎಚ್ಚರಿಕೆ ವ್ಯವಸ್ಥೆ ರೂಪಿಸಬೇಕು. ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಅಪಾಯಕಾರಿ ಪ್ರದೇಶಗಳಲ್ಲಿ ರಾತ್ರಿ ಹಾಗೂ ಮುಂಜಾನೆ ವಿಶೇಷ ಗಸ್ತು ಹೆಚ್ಚಿಸಬೇಕು. ಸಂತ್ರಸ್ತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ತಕ್ಷಣದ ರಕ್ಷಣಾ ತಂಡಗಳನ್ನು ನಿಯೋಜಿಸಬೇಕು.ಕಾಡಾನೆಗಳಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಕೃಷಿಕರಿಗೆ ಪರಿಹಾರಧನವನ್ನು ವಿಳಂಬವಿಲ್ಲದೆ ನೀಡಬೇಕು. ಕಾಡಾನೆಗಳ ನಾಡು ಪ್ರವೇಶ ತಡೆಗೆ ಅಗತ್ಯವಿರುವ ಪ್ರದೇಶಗಳಲ್ಲಿ ಶಾಶ್ವತ ರೈಲ್ವೆ ಹಳಿ ಬ್ಯಾರಿಕೇಡ್, ಸೌರ ವಿದ್ಯುತ್ ಬೇಲಿ ಹಾಗೂ ಇತರ ಪರಿಣಾಮಕಾರಿ ತಡೆ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಕಾಡುಪ್ರದೇಶ ಮತ್ತು ಕೃಷಿಭೂಮಿಯ ನಡುವಿನ ಗಡಿ ಪ್ರದೇಶವನ್ನು ವೈಜ್ಞಾನಿಕವಾಗಿ ಗುರುತಿಸಿ ’ಸುರಕ್ಷಿತ ಬಝರ್ ವಲಯ’ ನಿರ್ಮಿಸಬೇಕು. ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳನ್ನು ಗುರುತಿಸಿ, ಅವುಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಆನೆ ಕಾರಿಡಾರ್ಗಳನ್ನು ಸಂರಕ್ಷಿಸಬೇಕು..
ಅರಣ್ಯ ಪ್ರದೇಶಗಳಲ್ಲಿನ ಕೆರೆ, ಹೊಂಡ ಹಾಗೂ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಿ ಕಾಡಿನೊಳಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.










