ಮಹಾಲಿಂಗೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿ 30 ಅಡಿ ರಸ್ತೆ ನಿರ್ಮಾಣ ವಿಚಾರದ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿ ವಿಲೇವಾರಿ

0

ಪುತ್ತೂರು:ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿ 30 ಅಡಿ ಅಗಲದ ರಸ್ತೆ ನಿರ್ಮಿಸುವ ವಿಚಾರದಲ್ಲಿ, ಭಕ್ತರ ಸಹಿತ ಸಾರ್ವಜನಿಕರ ಸಲಹೆ, ಅಭಿಪ್ರಾಯಗಳನ್ನು ಪಡೆದು ಮುಂದುವರಿಯಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಿ,ಉದ್ದೇಶಿತ ನಿರ್ಮಾಣ ಕಾಮಗಾರಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯೊಂದನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಆ.13ರಂದು ವಿಲೇವಾರಿ ಮಾಡಿದೆ.


ನೆಲ್ಲಿಕಟ್ಟೆಯ ಹರಿಪ್ರಸಾದ್ ಶೆಟ್ಟಿ,ನೆಹರೂನಗರ ‘ರಚಿತ ನಿಲಯ’ದ ಶ್ರೀಮತಿ ರತ್ನಾ ಕೆ.,ಕೈಕಾರ ಮಿನಿಪದವು ಹರೀಶ್ ಕುಮಾರ್, ಪಡೀಲ್ ಹಂದ್ರಟ್ಟದ ಪದ್ಮನಾಭ ಜಿ., ಮುಂಡೂರು ಕಣ್ಣಾರ್ನೂಜಿಯ ಕೆ.ಅನಿಲ್ ಕುಮಾರ್, ಹಳೆ ಸಂಚಾರಿ ಪೊಲೀಸ್ ಠಾಣೆ ಬಳಿಯ ನಟ್ಟೋಜಿ ಕಂಪೌಂಡ್‌ನ ರಾಜೇಶ್ ಜೆ.ಮಣಿಯಾಣಿ,ಮುಂಡೂರು ‘ಅತ್ರೇಯ ನಿಲಯ’ದ ಪಿ.ಶ್ರೀಧರ ಪೂಜಾರಿ,ಅನಂತಾಡಿಯ ‘ಸಂಕೇಶ ಹೌಸ್’ನ ವಾಸುದೇವ ಆಚಾರ್ಯ ಮತ್ತು ಕುರೆಮಜಲು ಬಾಲಚಂದ್ರ ಎಸ್.ಎಂಬವರು ಈ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು,ಜಿಲ್ಲಾಧಿಕಾರಿ,ಮಂಗಳೂರು ಸಹಾಯಕ ಆಯುಕ್ತರು, ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ನಮೂದಿಸಲಾಗಿತ್ತು. ಮಹಾಲಿಂಗೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಹೆಚ್ಚುವರಿ ರಸ್ತೆ ನಿರ್ಮಿಸುವ ಪ್ರಸ್ತಾವನೆಯ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಭಕ್ತರು ಹಾಗೂ ಸಾರ್ವಜನಿಕರಿಂದ ಸಲಹೆ-ಆಕ್ಷೇಪಣೆಗಳನ್ನು ಪಡೆದು ಮರುಪರಿಶೀಲಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಮತ್ತು ಅಲ್ಲಿಯವರೆಗೆ ಉದ್ದೇಶಿತ ನಿರ್ಮಾಣಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು.ಆ.10ರಂದು ರಿಟ್ ಅರ್ಜಿಯನ್ನು ದಾಖಲಿಸಲಾಗಿತ್ತು.


ಜು.28ರಂದು, ಪ್ರತಿವಾದಿಗಳಾದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಹಾಗೂ ಆ.3ರಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಈ ಕುರಿತು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಿ,ಭಕ್ತರು ಮತ್ತು ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ನಿರ್ಮಾಣದ ಪ್ರಸ್ತಾವನೆಯನ್ನು ಮರುಪರಿಶೀಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತಲ್ಲದೆ, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನುಬಾಹಿರ ಪ್ರಕ್ರಿಯೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಅರ್ಜಿದಾರರು ಕೋರಿದ್ದರು.ದೇವಸ್ಥಾನದ ದಕ್ಷಿಣ ಭಾಗದಲ್ಲಿ ಪ್ರಸ್ತಾಪಿಸಲಾಗಿರುವ 30 ಅಡಿ ರಸ್ತೆಯ ನಿರ್ಮಾಣವನ್ನು ಸಾರ್ವಜನಿಕ ಅಭಿಪ್ರಾಯ ಹಾಗೂ ಸಂಬಂಧಪಟ್ಟವರ ಮನವಿಗಳನ್ನು ಪರಿಗಣಿಸಿ ಮರುಪರಿಶೀಲಿಸುವುದು ರಿಟ್ ಅರ್ಜಿಯ ಪ್ರಮುಖ ಬೇಡಿಕೆಯಾಗಿತ್ತು.ಆ.13ರಂದು ವಿಚಾರಣೆ ನಡೆದು ರಿಟ್ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿದೆ.ಅರ್ಜಿದಾರರ ಪರ ವಕೀಲ ಅಜಯ್ ಪ್ರಭು ಎಂ. ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here