ಮಹಾಲಿಂಗೇಶ್ವರ ದೇವಳ ವಠಾರದ ಮೂಲಕ ಅಕ್ರಮ ಮಣ್ಣು ಸಾಗಾಟ ಆರೋಪ – ಭಕ್ತರ ಗುಂಪು ಜಮಾವಣೆ-ಕ್ರಮಕ್ಕೆ ಆಗ್ರಹ: ಇಒ ಅವರಿಂದ ಕ್ರಮದ ಭರವಸೆ

0

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಶ್ರೀ ಅಯ್ಯಪ್ಪ ಗುಡಿಗೆಂದು ಕಾದಿರಿಸಿದ ಸ್ಥಳದ ಪಕ್ಕ ಇರುವ ಅನ್ಯಮತೀಯರೋರ್ವರ ಉದ್ಯಮದ ಕಟ್ಟಡಕ್ಕೆ ದೇವಳದ ರಾಜಾಂಗಣದ ಮೂಲಕ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಭಕ್ತರ ಗುಂಪೊಂದು ರಾತ್ರಿ ದೇವಳದ ವಠಾರದಲ್ಲಿ ಜಮಾಯಿಸಿ,ಇದರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ ಘಟನೆ ಆ.13ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.


ದೇವಳದ ಹೊರಾಂಗಣದ ಬಳಿ ಶ್ರೀ ಅಯ್ಯಪ್ಪ ಗುಡಿಗೆ ಕಾದಿರಿಸಿದ ಸ್ಥಳದ ಸಮೀಪ ಇರುವ ಅನ್ಯಮತೀಯರೋರ್ವರ ಉದ್ಯಮದ ಕಟ್ಟಡ ಕಾಮಗಾರಿಗಾಗಿ ಪಿಕಪ್‌ವೊಂದರಲ್ಲಿ ಮಣ್ಣು ತರಲಾಗಿತ್ತು.ಆದರೆ ಪಿಕಪ್ ದೇವಳದ ರಾಜಾಂಗಣದ ಮೂಲಕ ಸಾಗಿರುವುದು ಭಕ್ತರ ಕೋಪಕ್ಕೆ ಕಾರಣವಾಗಿದೆ.ದೇವಳದ ವಠಾರದಲ್ಲಿ ರಾಶಿ ಹಾಕಿದ ಮಣ್ಣನ್ನು ಅನ್ಯಮತೀಯರ ಜಾಗಕ್ಕೆ ತುಂಬಿಸಿ ಕೊಂಡೊಯ್ಯಯಲಾಗುತ್ತಿತ್ತು ಎಂದು ಆಕ್ಷೇಪಿಸಿದ ಭಕ್ತರ ಗುಂಪು ದೇವಳದ ಕಾರ್ಯನಿರ್ವಹಣಾಧಿಕಾರಿ ಅವರ ಗಮನಕ್ಕೆ ತಂದಿದ್ದಾರೆ.


ಅಧ್ಯಕ್ಷರು ಯಾ ಇಒ ಸ್ಥಳಕ್ಕೆ ಆಗಮಿಸಲು ಆಗ್ರಹ:
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿಯವರು ಮಾಧ್ಯಮದ ಜೊತೆ ಮಾತನಾಡಿ, ದೇವಳದ ಹೊರಾಂಗಣದಲ್ಲಿ ಅಕ್ರಮವಾಗಿ ಮಣ್ಣು ಹಾಕಿದ್ದಾರೆ. ಅದನ್ನು ಅನ್ಯರ ಜಾಗಕ್ಕೆ ತುಂಬಿಸುತ್ತಿದ್ದಾರೆ.ಈ ಕುರಿತು ನೌಕರರಲ್ಲಿ ಕೇಳಿದಾಗ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.ಅಧ್ಯಕ್ಷರಿಗೆ ಕರೆ ಮಾಡಿದಾಗ ಅವರು ರಿಸೀವ್ ಮಾಡಿಲ್ಲ,ಕಾರ್ಯನಿರ್ವಹಣಾಧಿಕಾರಿಯವರಿಗೆ ಕರೆ ಮಾಡಿ ತಿಳಿಸಿದಾಗ, ನಾನು ಮನೆಯಲ್ಲಿದ್ದೇನೆಂದು ತಿಳಿಸಿದ್ದಾರೆ.ಮಣ್ಣು ಹಾಕಿದ ವಿಚಾರ ನನಗೆ ಗೊತ್ತಿಲ್ಲ ಎಂದು ಅವರು ಹೇಳುತ್ತಾರೆ.ಮಣ್ಣು ತುಂಬಿಸುವವರನ್ನು ವಿಚಾರಿಸಿದಾಗ ನಮಗೆ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಹೇಳುತ್ತಾರೆ.ಹಾಗಾಗಿ ಇದು ಅಧ್ಯಕ್ಷರ ಪ್ರೇರಣೆಯಿಂದ ಮಣ್ಣು ತುಂಬಿಸುವುದು ಎಂದು ತಿಳಿದು ಬಂದಿದೆ.ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ವಿಚಾರಕ್ಕೆ ಅವಕಾಶ ಕೊಡಬಾರದು.ಈಗಾಗಲೇ ನಾವು ಕೆಲಸ ಕಾರ್ಯ ನಿಲ್ಲಿಸಿದ್ದೇವೆ.ಅಧ್ಯಕ್ಷರು ಅಥವಾ ಕಾರ್ಯನಿರ್ವಹಣಾಧಿಕಾರಿಯವರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರಲ್ಲದೆ ಈ ಜಾಗವನ್ನು ವಕೀಲ ಎನ್.ಕೆ.ಜಗನ್ನಿವಾಸ ರಾವ್ ಅವರು ಲೀಸಿಗೆ ಕೊಟ್ಟಿದಾರೆಂಬ ಮಾಹಿತಿ ಇದೆ ಎಂದರು.

ಅಜಿತ್ ರೈ ಹೊಸಮನೆ ಅವರು ಮಾತನಾಡಿ, ಇಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಕಾರ್ಯನಿರ್ವಹಣಾಧಿಕಾಯವರಿಗೆ ಗೊತ್ತಿಲ್ಲದೆ ಅನ್ಯಮತೀಯರೋರ್ವರು ಮಣ್ಣು ತಂದು ದೇವಳದ ಬಳಿ ಹಾಕುತ್ತಾರೆ ಎಂದರೆ ಇದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ.ಇದನ್ನು ಹಿಂದು ಸಂಘಟನೆ ಪ್ರಬಲವಾಗಿ ಖಂಡಿಸುತ್ತದೆ.ತಕ್ಷಣ ಕಾರ್ಯನಿರ್ವಹಣಾಧಿಕಾರಿ ಅಥವಾ ಅಧ್ಯಕ್ಷರು ಬಂದು ಸ್ಪಷ್ಟನೆ ನೀಡಬೇಕು.ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಆಗಮಿಸಿದ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಕೆ.ವಿ ಅವರು, ದೇವಳದ ಸಿಸಿ ಕ್ಯಾಮರ ಪರಿಶೀಲನೆ ಮಾಡಿ ದೇವಳದ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ ಪಿಕಪ್ ವಾಹನ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನೆರೆದ ಭಕ್ತರಿಗೆ ತಿಳಿಸಿದ ಬಳಿಕ,ಜಮಾಯಿಸಿದ್ದ ಭಕ್ತರು ಅಲ್ಲಿಂದ ತೆರಳಿದರು.ಜಯಂತ್ ಕುಂಜೂರುಪಂಜ, ಹರಿಪ್ರಸಾದ್ ದೋಳ್ಪಾಡಿ, ಚೇತನ್, ಜಗದೀಶ್, ನಾಗೇಶ್ ಟಿ.ಎಸ್, ಶಶಿಧರ್ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ದೇವಳದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿ ಪಿಕಪ್ ವಾಹನ ಸಂಖ್ಯೆಯನ್ನು ದಾಖಲು ಮಾಡಲಾಗಿದೆ.ದೇವಳದ ಅನುಮತಿ ಇಲ್ಲದೆ ರಾಜಾಂಗಣಕ್ಕೆ ಪಿಕಪ್ ವಾಹನ ತಂದಿರುವ ಕುರಿತು ಪಿಕಪ್ ವಾಹನ ಮಾಲಕರಿಗೆ ನೋಟಿಸ್ ಮಾಡಿ ಎಚ್ಚರಿಕೆ ನೀಡಲಾಗುವುದು ಮತ್ತು ಭದ್ರತಾ ಸಿಬ್ಬಂದಿಗಳನ್ನೂ ವಿಚಾರಿಸಲಾಗುವುದು.ಮುಂದೆ ದೇವಳದ ಹಿಂಬದಿಯ ಕೆರೆಯ ಮತ್ತು ಎದುರಿನ ಭಾಗದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು
-ಕೆ.ವಿ.ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here