13 ವರ್ಷದ ಇಶಾನ್‌ಗೆ ‘IBR Achiever’ ಗೌರವ: 4 ನಿಮಿಷ 17 ಸೆಕೆಂಡುಗಳ ಅಪೂರ್ವ ಸಾಹಸ

0

ಬಡಗನ್ನೂರು, ಸುಳ್ಯ: ಸುಳ್ಯ ತಾಲೂಕಿನ ಪ್ರತಿಭಾವಂತ ಬಾಲಕ ಇಶಾನ್ ಬಿ.ಎ. ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ ಬಲಗೈಯಿಂದ ಎಲೆಕ್ಟ್ರಾನಿಕ್ ಕೀಬೋರ್ಡ್ ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

13 ವರ್ಷ 5 ತಿಂಗಳ ವಯಸ್ಸಿನ ಇಶಾನ್ ಅವರು ಕೇವಲ 4 ನಿಮಿಷ 17 ಸೆಕೆಂಡುಗಳಲ್ಲಿ ಈ ಸಾಹಸವನ್ನು ಮಾಡಿ ತೋರಿಸಿದರು. ಈ ವಿಶಿಷ್ಟ ಸಾಧನೆಯನ್ನು 2026ರ ಜುಲೈ 13ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ದೃಢಪಡಿಸಿ, ಅವರಿಗೆ ‘IBR Achiever’ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಸ್ತುತ ಮಂಗಳೂರಿನ ಶಾರದ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಇಶಾನ್, ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಡಾ. ದಿನೇಶ್ ರಾವ್ ಅವರಿಂದ ಕೀಬೋರ್ಡ್ ವಾದನದ ತರಬೇತಿ ಹಾಗೂ ಆಚಾರ್ಯ ಮಂಜುನಾಥ್ ಪೂಜಾರ್ ಗುರೂಜಿ, ಶಿವಮೊಗ್ಗ ಅವರಿಂದ ಗಾಂಧಾರ ವಿದ್ಯೆಯ ಮಾರ್ಗದರ್ಶನ ಪಡೆಯುತ್ತಿದ್ದಾರೆ.ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಉಪನ್ಯಾಸಕ ಅಜಿತ್ ಬಿ.ಟಿ. ಮತ್ತು ಬ್ಯಾಂಕ್ ಆಫ್ ಬರೋಡದ ಉದ್ಯೋಗಿ ಸುಪ್ರಿತಾ ಕೆ.ಎಸ್. ದಂಪತಿಗಳ ಪುತ್ರನಾದ ಇಶಾನ್‌ನ ಸಾಧನೆಗೆ ಕುಟುಂಬಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

“ಇಶಾನ್‌ನ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನದಿಂದ ಈ ದಾಖಲೆ ಸಾಧ್ಯವಾಯಿತು. ಮುಂದೆಯೂ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ” ಎಂದು ಪೋಷಕರು ತಿಳಿಸಿದರು.ಇಶಾನ್ ಅವರ ಅಪೂರ್ವ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು ಹಾಗೂ ಶಾರದ ವಿದ್ಯಾಲಯದ ಆಡಳಿತ ಮಂಡಳಿಯಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಒಂದು ಕೈಯಿಂದ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನುಡಿಸುವ ಈ ಅಪರೂಪದ ಪ್ರದರ್ಶನವು ಇಶಾನ್‌ನ ಏಕಾಗ್ರತೆ, ಅಭ್ಯಾಸ ಮತ್ತು ಸಂಗೀತದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here