ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ-Dr. ಎಂ ಕೆ ಪ್ರಸಾದ್ ಅವರಿಂದ ಚಾಲನೆ

0

ದೇಶದ ಏಕತೆ ಕಾಪಾಡಲು ರಾಷ್ಟ್ರೀಯ ಚಿಂತನೆ ಅಗತ್ಯ- ರಾಜೇಶ್ ಮೇನಾಲ
ನಾವು ಯಾವಾಗಲೂ ಒಗ್ಗಟ್ಟಿನಲ್ಲಿರಬೇಕು -ಕೇಶವ ನಾಯಕ್

ಪುತ್ತೂರು: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದು ಜಾಗರಣಾ ವೇದಿಕೆಯ ಆಶ್ರಯದಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ವಂದೇ ಮಾತರಂ ಗೀತೆಗೆ 150ನೇ ವರ್ಷ ತುಂಬಿದ ಅಂಗವಾಗಿ ಮತ್ತು ಅಖಂಡ ಭಾರತದ ಸಂಕಲ್ಪದೊಂದಿಗೆ ಆ.14ರಂದು ರಾತ್ರಿ ಬೃಹತ್ ಪಂಜಿನ ಮೆರವಣಿಗೆ ಪುತ್ತೂರು ಬೊಳುವಾರಿನಿಂದ ಕಿಲ್ಲೆ ಮೈದಾನದ ತನಕ ಯಶಸ್ವಿಯಾಗಿ ನಡೆಯಿತು.

ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಚಿದ ಹೊರಟ ಪಂಜಿನ ಮೆವಣಿಗೆ ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಸಭಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರು ಬೆಳಕಿನ ದೊಂದಿಯನ್ನು ಪ್ರಮುಖರಿಗೆ ಹಸ್ತಾಂತರಿಸಿ ತೆಂಗಿನ ಕಾಯಿ ಒಡೆದು ಮೆರಣಿಗೆಗೆ ಚಾಲನೆ ನೀಡಿದರು. ಬಳಿಕ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕ ಬಳಿ ಭಾರತ ಮಾತಾ ಪೂಜನಾ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಯೋಧರಿಗೆ ಸನ್ಮಾನ:
ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ಭಾರತ್ ಮಾತೆಗೆ ಪುಷ್ಪಾರ್ಚಣೆ ದೀಪ ಬೆಳಗಿಸಿ ಯೋದರಿಗೆ ಗೌರವ ಸಲ್ಲಿಸಲಾಯಿತು. ನಿವೃತ್ತ ಯೋಧರಾದ ಹವಾಲ್ದಾರ್ ಅಶೋಕ್ ನೆಲಪ್ಪಾಲು, ಮುರ ಪಲ್ಲತ್ತಾರು ನಿವಾಸಿ ಸುಂದರ ಪೂಜಾರಿ, ಆಪರೇಷನ್ ಸಿಂದೂರ್ ನಲ್ಲಿ ಭಾಗವಹಿಸಿದ ಚಂದ್ರಶೇಖರ್ ಯು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಒರವಸಗಿ ಚಂದ್ರಶೇಖರ್ ಮಾತನಾಡಿ ದೇಶದಲ್ಕಿ ಗಡಿ ಕಸಯುವ ಯೋಧರು ಮಾತ್ರ ದೇಶ ಕಾಯುವುದಲ್ಲ. ಸಾರ್ವಜನಕರು ಕೂಡಾ ತಮ್ಮ ನಿಷ್ಟೆಯಿಂದ ಮಾಡುವ ಕೆಲಸ ದೇಶ ಸೇವೆಯಂತೆ ಎಂದ ಅವರು ಇಂತಹ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಪ್ರೇರಣೆ ಆಗಲಿ ಎಂದು ಹೇಳಿದರು.

ದೇಶದ ಏಕತೆ ಕಾಪಾಡಲು ರಾಷ್ಟ್ರೀಯ ಚಿಂತನೆ ಅಗತ್ಯ:
ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಸೇವಾ ಭಾರತಿಯ ಪ್ರಮುಖ ರಾಜೇಶ್ ಮೇನಾಲ ಅವರು ದಿಕ್ಸೂಚಿ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯ ಹೋರಾಟ, ವಿಭಜನೆ ಹಾಗೂ ಸ್ವಾತಂತ್ರ್ಯಾನಂತರದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯತೆ ಮತ್ತು ದೇಶದ ಏಕತೆಯ ಅಗತ್ಯವನ್ನು ಪ್ರತಿಪಾದಿಸಿದ ವಕ್ತಾರರು, ಎಡಪಂಥೀಯ ಸಿದ್ಧಾಂತಗಳು ದೇಶವನ್ನು ಒಗ್ಗೂಡಿಸುವ ಬದಲು ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ದೇಶದ ರಾಜಕೀಯ ವ್ಯವಸ್ಥೆಯಲ್ಲಿನ ದೋಷಗಳನ್ನು ಟೀಕಿಸುವ ಬದಲು ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸಿಕೊಂಡು ನಡೆಯುವ ನಿಂದನೆಗಳನ್ನು ತಡೆಯಬೇಕಾಗಿದೆ. ದೇಶದ ಏಕತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ದೇಶಭಕ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದ ನಾಯಕರು
ದೇಶ ವಿಭಜನೆಯ ಬೇಡಿಕೆ ಮುಂದಿಟ್ಟಾಗ, ಭಾರತ ವಿಭಜನೆಯಾಗಲು ಸಾಧ್ಯವಿಲ್ಲ ಎಂದು ಹಲವು ರಾಷ್ಟ್ರೀಯ ನಾಯಕರು ಪ್ರತಿಪಾದಿಸಿದ್ದರು. ಮಹಾತ್ಮ ಗಾಂಧೀಜಿ ಕೂಡ ದೇಶ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವು ನಾಯಕರು ವಿಭಜನೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ 1947ರಲ್ಲಿ ಭಾರತ ವಿಭಜನೆಯಾಗಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು ಎಂದು ರಾಜೇಶ್ ಮೇನಾಲ ಅವರು ಹೇಳಿದರು.

ಪ್ರಧಾನಿ ವಿರುದ್ಧದ ವೈಯಕ್ತಿಕ ಟೀಕೆಗೆ ಆಕ್ಷೇಪ
ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ರಾಜಕೀಯ ನಾಯಕರ ನೀತಿ-ನಿಲುವುಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆಯಾದರೂ ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ ಎಂದು ಹೇಳಿದರು. ಪ್ರಧಾನಿಯವರ ವೈಯಕ್ತಿಕ ಜೀವನ, ದೈಹಿಕ ರೂಪ, ಕುಟುಂಬ ಹಾಗೂ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ರಾಜಕೀಯ ಸಂಸ್ಕೃತಿಗೆ ಶೋಭೆ ತರುವುದಿಲ್ಲ ಎಂದು ಆಕ್ಷೇಪಿಸಿದರು.

ನಾವು ಯಾವಾಗಲೂ ಒಗ್ಗಟ್ಟಿನಲ್ಲಿರಬೇಕು:
ಪುತ್ತೂರಿನ ಉದ್ಯಮಿ ಕೇಶವ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ್ಯ ಬಂದು 80 ವರ್ಷ ಆಗಿದೆ ಈಗ ಭಾರತ್ ಜೋಡು ಮಾಡುತ್ತಿದ್ದಾರೆ. ಭಾರತ ತೋಡೋ ಮಾಡಿದವರು ಭಾರತ್ ಜೋಡೋ ಯಾಕೆ ಮಾಡುತ್ತಾರೆ. ಇದಕ್ಕೆ ಅರ್ಥ ಇದೆಯಾ ಎಂದು ಪ್ರಶ್ನಿಸಿದ ಅವರು ನಾವು ಯಾವಾಗಲು ಒಗ್ಗಟ್ಟಿನಲ್ಲಿರಬೇಕೆಂದು ಹೇಳಿದರು.

ಸಭೆಯ ಕೊನೆಯಲ್ಲಿ ಅಖಂಡ ಭಾರತ ಪ್ರತಿಜ್ಞಾ ವಿಧಿಯನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ದಿನೇಶ್ ಪಂಜಿಗ ಬೋಧಿಸಿದರು. ವಿಶ್ವಹಿಂದು ಪರಿಷತ್ ನಗರ ಪ್ರಖಂಡ ಗೋ ರಕ್ಷಾ ಪ್ರಮುಖ್ ಧನರಾಜ್ ಕೊಡಿಪ್ಪಾಡಿ, ಹಿಂದು ಜಾಗರಣ ವೇದಿಕೆ ತಾಲೂಕು ಸಹ ಸಂಯೋಜಕ ಸುಭಾಶ್ ಮುಕ್ವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಪ್ರಸಾದ್, ಹರೀಶ್ ದೋಳ್ಪಾಡಿ ಅತಿಥಿಗಳನ್ನು ಗೌರವಿಸಿದರು. ಕು ಗರಿಮಾ, ಕು ವೈಷ್ಣವಿ ಪ್ರಾರ್ಥಿಸಿದರು. ವಿಶ್ವಹಿಂದು ಪರಿಷತ್ ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಸ್ವಾಗತಿಸಿದರು. ಸಂತೋಷ್ ರೈ ವಂದಿಸಿದರು. ವಿಶಾಕ್ ರೈ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ವಂದೇ ಮಾತರಂ ಹಾಡು ಹಾಡುವ ಮೂಲಕ ವಂದೇ ಮಾತರಂ ಗೀತೆಗೆ 150ನೇ ವರ್ಷದ ಸ್ಮರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹೇಶ್ ಕಜೆ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಸತಿಶ್ ಬಿ.ಎಸ್, ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದು ಪರಿಷತ್‌ನ ಪ್ರಖಂಡ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತಡ್ಡ, ಸಹದೇವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಯತಿ ಆರುವಾರು, ನಾಗೇಶ್ ಟಿಎಸ್, ಉದ್ಯಮಿ ಉಜ್ವಲ್ ಪ್ರಭು, ಸಂತೋಷ್ ರೈ ಕೈಕಾರ, ವಿಶ್ವನಾಥ ಗೌಡ ಬನ್ನೂರು, ರಾಜೇಶ್ ಬನ್ನೂರು, ಮಾಧವ ಪೂಜಾರಿ, ಶೇಷಪ್ಪ ಬೆಳ್ಳಿಪ್ಪಾಡಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ಲಕ್ಷ್ಮಣ ಬೆಳ್ಳಿಪ್ಪಾಡಿ, ಮಹೇಶ್ ಕೇರಿ, ವಿದ್ಯಾಧರ್ ಜೈನ್, ನಾಗೇಂದ್ರ ಬಾಳಿಗ, ಹರಿಪ್ರಸಾದ್ ಯಾದವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here