ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿಯಿಂದ ವಿದ್ಯಾರ್ಥಿವೇತನ ವಿತರಣೆ

0

ಶೈಕ್ಷಣಿಕವಾಗಿ ಮುಂದುವರಿಯುವುದು ಕೆನರಾ ಬ್ಯಾಂಕ್ ಯೋಚನೆ- ಡಿ. ಸುರೇಶ್
ವಿದ್ಯಾರ್ಥಿವೇತನದಿಂದ ಉತ್ತಮ ಶಿಕ್ಷಣ ಪಡೆಯಿರಿ- ಅಲವಾಲ ವೀರಾಂಜನೆಯಲು

ಪುತ್ತೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪುತ್ತೂರು ವತಿಯಿಂದ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿವೇತನ ಯೋಜನೆಯಡಿ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಆ.೧೪ರಂದು ಪುತ್ತೂರು ಪ್ರಾದೇಶಿಕ ಕಛೇರಿಯಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸುರೇಶ್‌ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ ಕೆನರಾ ಬ್ಯಾಂಕ್‌ನಿಂದ ವಿದ್ಯಾರ್ಥಿವೇತನ ವಿತರಿಸಿ ನಿಮ್ಮನ್ನು ಪ್ರೋತ್ಸಾಹ ಮಾಡಿದ್ದಾರೆ. ಶೈಕ್ಷಣಿಕವಾಗಿ ನೀವು ಮುಂದುವರಿಯಬೇಕು ಎಂಬುದು ಕೆನರಾ ಬ್ಯಾಂಕ್ ಯೋಚನೆ ಆಗಿದೆ. ವಿದ್ಯಾರ್ಥಿವೇತನವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ. ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ ಎಂದರು. ಕೆನರಾ ಬ್ಯಾಂಕ್‌ನಿಂದ ನನ್ನ ಶಿಕ್ಷಣಕ್ಕೂ ಸಹಾಯ ಆಗಿದೆ. ಜ್ಞಾನಶಕ್ತಿ ಹೆಚ್ಚು ಮಾಡಲು ಹೆಚ್ಚು ಅಧ್ಯಯನ ಮಾಡಬೇಕು ಕೆಟ್ಟ ವಿಚಾರ ಬೇಡ. ಉತ್ತಮ ವಿಚಾರ ಅಳವಡಿಸಿಕೊಳ್ಳಿ. ಶಿಕ್ಷಣ ಇಲಾಖೆಯಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ಅಭಿಯಾನ ಮಾಡಲಾಗಿದೆ. ಎಂದ ಅವರು ಒಳ್ಳೆಯ ಗುರಿ ಇಟ್ಟುಕೊಂಡು ಸಮಾಜದ ಮುಖ್ಯವಾಹಿನಿಗೆ ನೀವೂ ಬರಬೇಕು ಎಂದು ಹೇಳಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕರಾದ ಅಲವಾಲ ವೀರಾಂಜನೆಯಲು ಮಾತನಾಡಿ ಕೆನರಾ ಬ್ಯಾಂಕ್ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ವಿದ್ಯಾರ್ಥಿವೇತನದಿಂದ ಉತ್ತಮ ಶಿಕ್ಷಣ ಪಡೆಯಿರಿ. ಉದ್ಯೋಗ ಪಡೆಯಿರಿ ಎಂದ ಅವರು ಕೆನರಾ ಬ್ಯಾಂಕ್‌ನಿಂದ ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಸಿಗುತ್ತದೆ. ಶಿಕ್ಷಣ ಸಾಲಕ್ಕೆ ಯಾವುದೇ ಭದ್ರತೆ ಬೇಕಾಗಿಲ್ಲ. ಉತ್ತಮ ಅಂಕವಿದ್ದರೆ ಸಾಕು. ಐಟಿ ನೀಟ್ ಕೋರ್ಸ್‌ಗಳಿಗೆ ೪೦ ಲಕ್ಷದವರೆಗೆ ಸಾಲ ತಕ್ಷಣ ಸಾಲ ಸಿಗುತ್ತದೆ. ಕೆನರಾ ಬ್ಯಾಂಕ್ ನಿಮ್ಮ ಮನೆ ಬ್ಯಾಂಕ್ ತರಹ ಇದೆ. ಚೆನ್ನಾಗಿ ಓದಿ ಉತ್ತಮ ಶಿಕ್ಷಣ ಪಡೆಯಿರಿ ಎಂದರು.

ಪುತ್ತೂರು ಪ್ರಾದೇಶಿಕ ಕಛೇರಿಯ ವಿಭಾಗಿಯ ವ್ಯವಸ್ಥಾಪಕರಾದ ವನಿತಾ ಪ್ರಾಸ್ತಾವಿಕವಾಗಿ ಮಾತನಾಡಿ ೧೯೦೬ರಲ್ಲಿ ಆರಂಭವಾದ ಕೆನರಾ ಬ್ಯಾಂಕ್ ೧೨೦ ವರ್ಷಗಳ ಹಿಂದಿನ ಬ್ಯಾಂಕ್. ಬ್ಯಾಂಕ್ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬಾರಾವ್‌ರವರು ಆಗಲೇ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಚಿಂತನೆ ಮಾಡಿದ್ದು ಮಂಗಳೂರಿನಲ್ಲಿ ಕೆನರಾ ಹೆಣ್ಣುಮಕ್ಕಳ ಪ್ರೌಢಶಾಲೆ ಆರಂಭಿಸಿದ್ದಾರೆ. ಈಗಲೂ ಕೆನರಾ ಬ್ಯಾಂಕ್ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುತ್ತಾ ಬಂದಿದೆ. ಪ್ರತೀವರ್ಷ ಸ್ವಾತಂತ್ರ್ಯ ದಿನದಂದು ದೇಶದಾದ್ಯಂತ ಇರುವ ಶಾಖೆಗಳ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲೆಯ ಎಸ್‌ಸಿ ಎಸ್‌ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದೆ. ಪುತ್ತೂರು ಪ್ರಾದೇಶಿಕ ಕಚೇರಿಯಿಂದ ಕೊಟ್ಟ ವಿದ್ಯಾರ್ಥಿವೇತನಗಳು ಈಗಾಗಲೇ ವಿದ್ಯಾರ್ಥಿನಿಯರ ಖಾತೆಗೆ ಜಮೆ ಆಗಿದೆ ಎಂದು ಹೇಳಿ ಸ್ವಾಗತಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬ್ಯಾಂಕ್ ಸಂಸ್ಥಾಪಕಾರದ ದಿ|ಅಮ್ಮೆಂಬಳ ಸುಬ್ಬರಾವ್‌ರವರ ಪುತ್ಥಳಿಗೆ ಹಾರಾರ್ಪಣೆ ಮಾಡಲಾಯಿತು. ವಿದ್ಯಾರ್ಥಿನಿ ಸಹನಾ, ಕೆಶಿ, ಅಮೂಲ್ಯ, ಆಶಾ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಭಂದಕ ನಿಮಿಶ್, ನೆಹರುನಗರ ಶಾಖಾ ಪ್ರಬಂಧಕ ತೇಜ ಕುಮಾರ್ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು. ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕ ವಿಠಲ್ ನಾಯಕ್ ವಂದಿಸಿದರು.

ಪ್ರಾದೇಶಿಕ ಕಚೇರಿಯ 57 ಶಾಖೆಗಳ ವ್ಯಾಪ್ತಿಯ 342 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿಯ ೫೭ ಶಾಖೆಗಳ ವ್ಯಾಪ್ತಿಯಲ್ಲಿರುವ ಸರಕಾರಿ ಹಾಗೂ ಅನುದಾನಿತ ಶಾಲೆಗಳ ೫ ರಿಂದ ೧೦ನೇ ತರಗತಿವರೆಗಿನ ಪ್ರತಿಭಾವಂತ ೩೪೨ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಒಟ್ಟು ೧೩.೬೮ ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಗಿದೆ. ೫ ರಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ತಲಾ ೩೦೦೦ ರೂ. ಹಾಗೂ ೮ ರಿಂದ ೧೦ನೇ ತರಗತಿ ವರೆಗಿನ ವಿದ್ಯಾರ್ಥಿನಿಯರಿಗೆ ತಲಾ ೫೦೦೦ ರೂ. ವಿದ್ಯಾರ್ಥಿವೇತನವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ.

LEAVE A REPLY

Please enter your comment!
Please enter your name here