






ನೆಲ್ಯಾಡಿ: ಹಲ್ಲೆ ಆರೋಪ ಹೊರಿಸಿ ಯುವತಿಯೊಬ್ಬರು ನೀಡಿದ ದೂರಿನಂತೆ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿಗಳಾದ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು @ಅಶ್ರಫ್, ಅಶ್ರಫ್ ಕೋಲ್ಪೆ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರುದಾರೆ ಕೋಲ್ಪೆ ನಿವಾಸಿ ಫಾಯಿಝಾ (18ವ.) ಮೆಲ್ಕಾರ್‌ನಲ್ಲಿ ಝಾಹಿರ್ ಎಂಬವರ ಅಂಗಡಿಯಲ್ಲಿ ಹ್ಯಾಂಪರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆ.12ರಂದು ಕೆಲಸ ಮುಗಿಸಿ ರಾತ್ರಿ ಝಾಹಿರ್ ಅವರ ಗೆಳೆಯ ಸಿಪ್ನಾನ್‌ರವರ ಕಾರಿನಲ್ಲಿ ಸಿಪ್ನಾನ್, ಝಾಹಿರ್, ಅವರ ತಾಯಿ ಸಫಿಯಾ ಜೊತೆ ಮೆಲ್ಕಾರಿನಿಂದ ಹೊರಟು ಬಂದವರು ಫಾಯಿಝಾರನ್ನು ಅವರ ಮನೆ ಬಳಿ ಬಿಟ್ಟು, ಸಫ್ನಾನ್ ಹಾಗೂ ಸಫಿಯಾರವರು ಕಾರಿನಲ್ಲಿ ಮತ್ತು ಝಾಹಿರ್‌ರವರು ಅವರ ಮನೆಗೆ ಹೋಗಲು ಫಾಯಿಝಾರ ಮನೆಯಲ್ಲಿದ್ದ ಸ್ಕೂಟರ್‌ನಲ್ಲಿ ಹೊರಟು ಹೋಗುತ್ತಿರುವ ಸಮಯ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ರಾತ್ರಿ 11 ಗಂಟೆ ವೇಳೆ ಸ್ಕೂಟರ್ ಹಾಗೂ ಕಾರನ್ನು ಐದಾರು ಜನರ ತಂಡ ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದನ್ನು ಗಮನಿಸಿದ ಫಾಯಿಝಾರವರು ಅವರ ಬಳಿ ಹೋಗಿ ವಿಚಾರಿಸಿದಾಗ ಜಾಬಿರ್ ಎಂಬಾತ ನೀನು ಯಾರು ನಮ್ಮನ್ನು ಕೇಳಲು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಸಿದ್ದೀಕ್ ಎಂಬಾತ ಕಪಾಳಕ್ಕೆ ಕೈಯಿಂದ ಹೊಡೆದು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಈ ವೇಳೆ ಜಗಳ ಬಿಡಿಸಲು ಬಂದ ಜಮಾಲ್ ಎಂಬವರಿಗೆ ಸಿದ್ಧಿಕ್, ಉನೈಸ್ ಮತ್ತು ರಂಶಿಕ್ ಕೈಯಿಂದ ಹೊಡೆದು ದೂಡಿ ಹಾಕಿರುತ್ತಾರೆ. ಈ ವೇಳೆ ರಂಶಿಕ್, ಸಂಶುದ್ದೀನ್, ಜಾಫರ್, ಜಾಬಿರ್ ಎಂಬವರು ಬೈದು ಫಾಯಿಝಾರನ್ನು ದೂಡಿ ಹಾಕಿ ಪಕ್ಕದಲ್ಲಿದ್ದ ಝಾಹಿರ್‌ರವರ ಸ್ಕೂಟರ್ (ಕೆಎ೨೧ ಇಇ೬೩೦೨)ನ್ನು ಕಾಲಿಗೆ ಬೀಳಿಸಿ ನೋವುಂಟು ಮಾಡಿದ್ದಲ್ಲದೇ ಸ್ಕೂಟರ್ ಎತ್ತಲು ಬಂದ ಝಾಹಿರ್‌ರವರಿಗೆ ಕೈಯಿಂದ ಹೊಡೆದಿದ್ದಾರೆ. ಆಶಿಕ್ ಮತ್ತು ಅಚೂರು @ ಅಶ್ರಫ್ ಎಂಬವರು ಫಾಯಿಝಾರ ಎದೆಗೆ ಹೊಡೆದಿದ್ದು ಈ ವೇಳೆ ಫಾಯಿಝಾ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಎತ್ತಲು ಬಂದ ಆಕೆಯ ತಂಗಿಯ ಕಪಾಳಕ್ಕೆ ಸಿದ್ದಿಕ್ ಹೊಡೆದು ದೂಡಿ ಹಾಕಿದ್ದು ಈ ವೇಳೆ ಅಶ್ರಫ್ ಕೋಲ್ಪೆ ಎಂಬಾತ ತಲೆಗೆ ಹೊಡೆದಿರುವುದಾಗಿದೆ ಆರೋಪಿಸಲಾಗಿದೆ. ಫಾಯಿಝಾ ಹಾಗೂ ಆಕೆಯ ತಂಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.













