ಬೇಂಗಮಲೆಯಲ್ಲಿ ಕಾಡಾನೆ ಓಡಿಸಲು ಪುತ್ತೂರು ಅರಣ್ಯ ಇಲಾಖೆ ಫೈರಿಂಗ್ – ಸ್ಕೂಟರ್ ಸವಾರನ ಕಾಲಿಗೆ ತಾಗಿದ ಚಿಲ್ಲ್ – ಆಸ್ಪತ್ರೆಗೆ ದಾಖಲು

0

ಪುತ್ತೂರು:ಸುಳ್ಯ ಬೇಂಗಮಲೆಯಲ್ಲಿ ಕಾಡಾನೆ ಓಡಿಸಲು ಪುತ್ತೂರು ವಲಯ ಅರಣ್ಯ ‌ಇಲಾಖೆಯವರು ಗಾಳಿಯಲ್ಲಿ ಹಾರಿಸಿದ ಗುಂಡಿನ ಚಿಲ್ಲ್ ಆ ರಸ್ತೆಯಾಗಿ ಹೋಗುತ್ತಿದ್ದ ಸ್ಕೂಟರ್ ಸವಾರರೊಬ್ಬರ ಕಾಲಿಗೆ ಆಕಸ್ಮಿಕವಾಗಿ ತಾಗಿದ ಪರಿಣಾಮ ಗಾಯವಾಗಿ ಸುಳ್ಯದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ವರದಿಯಾಗಿದೆ.

ಪೆರುವಾಜೆ ಗ್ರಾಮದ ಏನಡ್ಕ ರಾಘವ ಪ್ರಭು ಎಂಬವರು ಕಲ್ಲುಗುಂಡಿಯ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಆ.12 ರಂದು ಸಂಜೆ ಕೆಲಸ ಮುಗಿಸಿ ಸಂಪಾಜೆಯಿಂದ ಸಂಜೆ ಸುಮಾರು 7.30 ರ ವೇಳೆಗೆ ಪೆರುವಾಜೆಯ ಮನೆಗೆ ಹೋಗುತ್ತಿದ್ದಾಗ ಐವರ್ನಾಡು ಗ್ರಾಮದ ಬೇಂಗಮಲೆ ಎಂಬಲ್ಲಿ ಕಾಡಾನೆ ಇತ್ತೆನ್ನಲಾಗಿದೆ. ಪುತ್ತೂರು ವಲಯದ ಅರಣ್ಯ ಇಲಾಖೆಯವರು ಆನೆಯನ್ನು ಓಡಿಸಲು ಪ್ರಯತ್ನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಆನೆ ಇದ್ದ ವಿಚಾರ ರಾಘವ ಪ್ರಭುಗಳಿಗೆ ತಿಳಿದಿರಲಿಲ್ಲವೆಂದೂ, ಸ್ಕೂಟಿಯಲ್ಲಿ ಹೋಗುತ್ತಿದ್ದ ರಾಘವರಿಗೆ ಮುಂದಕ್ಕೆ ಹೋಗದಂತೆ ಅರಣ್ಯ ಸಿಬ್ಬಂದಿ ಸಂಜ್ಞೆ ಮಾಡಿದರೂ ರಾಘವರಿಗೆ ಗೊತ್ತಾಗದೆ ಮುಂದಕ್ಕೆ ಹೋದಾಗ ಆನೆ ರಸ್ತೆ ದಾಟುತ್ತಿರುವುದನ್ನು ನೋಡಿ, ಸ್ಕೂಟಿಯನ್ನು ತಿರುಗಿಸಿದರೆನ್ನಲಾಗಿದೆ.

ಆ ಹೊತ್ತಿಗೆ ಆನೆಯನ್ನು ಕಾಡಿನೊಳಕ್ಕೆ ಓಡಿಸಲು ಪ್ರಯತ್ನಿಸುತ್ತಿದ್ದ ಅರಣ್ಯ ಇಲಾಖೆಯವರು, ಆನೆಯನ್ನು ಹೆದರಿಸುವುದಕ್ಕಾಗಿ ರಸ್ತೆಗೆ ಕೋವಿಯಿಂದ ಫೈರಿಂಗ್ ಮಾಡಿದರೆಂದೂ, ಆ ಗುಂಡಿನ ಒಂದು ಚಿಲ್ಲ್ ಸುಳ್ಯದತ್ತ ಸ್ಕೂಟಿ ತಿರುಗಿಸುತ್ತಿದ್ದ ರಾಘವರ ಎಡಕಾಲಿಗೆ ತಾಗಿತೆಂದೂ ಹೇಳಲಾಗಿದೆ. ಗಾಯಗೊಂಡ ರಾಘವರು ಆ.13 ರಂದು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆ.14 ರಂದು ಸರ್ಜರಿಯಾಗಿದ್ದು, ಗಾಯದೊಳಗಿದ್ದ ಕೊತ್ತಂಬರಿ ಕಾಳಿನಷ್ಟು ದೊಡ್ಡ ಚಿಲ್ಲನ್ನು ಹೊರತೆಗೆದಿರುವುದಾಗಿ ಹೇಳಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಸುದ್ದಿಯೊಂದಿಗೆ ಮಾತನಾಡಿದ ರಾಘವ ಪ್ರಭು, “ನಾನು ಬ್ಯಾಂಕ್ ಕೆಲಸ‌ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಾಗ ಬೇಂಗಮಲೆಯಲ್ಲಿ ಆನೆಯೊಂದು ರಸ್ತೆ ದಾಟುತ್ತಿತ್ತು.‌ ಇದನ್ನು ನೋಡಿದ ನಾನು ಸ್ಕೂಟಿಯನ್ನು ಸುಳ್ಯದತ್ತ ತಿರುಗಿಸಿದೆ. ಅರಣ್ಯ ಇಲಾಖೆಯವರೂ ಅಲ್ಲಿ ಇದ್ದರು. ಅವರು ಮಾಡಿದ ಫೈರಿಂಗ್ ನ ಪರಿಣಾಮ ಒಂದು ಚಿಲ್ಲ್ ನನ್ನ ಕಾಲಿಗೆ ತಾಗಿತು. ಆಗಲೇ ನಾನು ಅವರಿಗೆ ನನಗಾದ ಗಾಯವನ್ನು ತೋರಿಸಿದೆ. ಅದು ಏನಾಗುವುದಿಲ್ಲ ಹೋಗಿ ಎಂದು ಹೇಳಿ ನನ್ನನ್ನು ಕಳುಹಿಸಿದರು. ಮರುದಿನ ನೋವು ಹೆಚ್ಚಾದುದರಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆಪರೇಶನ್ ಮಾಡಿ ಕಾಲಿನಲ್ಲಿದ್ದ ಗುಂಡು ವೈದ್ಯರು ಹೊರತೆಗೆದಿದ್ದಾರೆ” ಎಂದರು.

ಘಟನೆಯ ಬಗ್ಗೆ ಸುದ್ದಿಯನ್ನು ಸಂಪರ್ಕಿಸಿ ಮಾತನಾಡಿದ ಪುತ್ತೂರಿನ ಅರಣ್ಯಾಧಿಕಾರಿಗಳು ” ನಾವು ಆನೆ ಓಡಿಸಲು ಪ್ರಯತ್ನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಹೆಚ್ಚಿನಂಶ ಒಂದು ಚಿಲ್ಲ್ ರಿಬೌಂಡ್ ಆಗಿ ಬಂದು ಇವರಿಗೆ ತಾಗಿರಬೇಕು. ಅವರ ಚಿಕಿತ್ಸೆಯ ವ್ಯವಸ್ಥೆ, ಆಸ್ಪತ್ರೆಯ ವೆಚ್ಚ ಸಂಪೂರ್ಣ ನಾವೇ ನೋಡಿಕೊಳ್ಳುತ್ತಿದ್ದೇವೆ ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here