







ಎಕ್ಕುಟ್ಟು ಹೋದ ಜಂಕ್ಷನ್ ರಸ್ತೆ, ವಾಹನ ಸವಾರರ ಪರದಾಟ


ಪುತ್ತೂರು : ಪುತ್ತೂರಿನ ಪ್ರಮುಖ ಸಂಪರ್ಕ ಕೊಂಡಿಯಾದ ಪರ್ಲಡ್ಕ ಜಂಕ್ಷನ್‌ನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಂಕ್ಷನ್‌ನ ಮಧ್ಯಭಾಗದಲ್ಲಿ ಮತ್ತು ಬದಿಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಲ್ಲಿ ಕೆಸರು ನೀರು ತುಂಬಿಕೊಂಡಿದ್ದು, ರಸ್ತೆಯ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದೆ. ಪರ್ಲಡ್ಕ ಜಂಕ್ಷನ್ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಪ್ರದೇಶವಾಗಿದೆ. ಆದರೆ, ರಸ್ತೆಯ ತುಂಬೆಲ್ಲಾ ಗುಂಡಿಗಳು ಇರುವುದರಿಂದ ವಾಹನ ಸವಾರರು ಸರಾಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಗುಂಡಿಗಳನ್ನು ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಚಲಿಸುವುದರಿಂದ ಅಪಘಾತಗಳ ಭಯ ಮೂಡಿದೆ. ಆಟೋ, ಕಾರು ಮತ್ತು ಸರಕು ಸಾಗಣೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿವೆ. “ಈ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಬಂದಾಗಲಂತೂ ಪರಿಸ್ಥಿತಿ ನರಕಸದೃಶವಾಗುತ್ತದೆ. ಸಮರ್ಪಕ ನಿರ್ವಹಣೆಯ ಕೊರತೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಜಂಕ್ಷನ್‌ನ ಮಹತ್ವವನ್ನು ಅರಿತು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಗುಂಡಿಗಳನ್ನು ಮುಚ್ಚಿ, ವಾಹನ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



ನಾಲ್ಕು ಕಡೆಗಳಿಂದ ವಾಹನ ಸೇರುವ ಜಂಕ್ಷನ್
ಪರ್ಲಡ್ಕ ಜಂಕ್ಷನ್‌ನ್ ನಾಲ್ಕು ರಸ್ತೆಗಳು ಸೇರುವ ಜಂಕ್ಷನ್ ಆಗಿದೆ. ಪುತ್ತೂರು ಪೇಟೆಯಿಂದ ಬರುವ ವಾಹನಗಳು ಒಂದು ಕಡೆಯಾದರೆ, ರಾ.ಹೆದ್ದಾರೆಯಲ್ಲಿ ತೆಂಕಿಲ ಕಡೆಯಿಂದ ಬರುವ ವಾಹನಗಳು ಹಾಗೇ ಮುಕ್ರಂಪಾಡಿ ಕಡೆಯಿಂದ ಬರುವ ವಾಹನಗಳು ಮತ್ತು ದೇವಸ್ಯ ಕಡೆಯಿಂದ ಬರುವ ವಾಹನಗಳು ಎಲ್ಲವೂ ಕೂಡ ಪರ್ಲಡ್ಕ ಜಂಕ್ಷನ್‌ನ್‌ನಿಂದಲೇ ಮುಂದೆ ಸಾಗುತ್ತವೆ. ಹೀಗಿರುವಾಗ ಈ ಜಂಕ್ಷನ್ ಅನ್ನು ವ್ಯವಸ್ಥಿತವಾಗಿ ಮಾಡಬೇಕಾದ ಅಗತ್ಯತೆ ತುಂಬಾ ಇದೆ.
ರಸ್ತೆ ಉಬ್ಬುಗಳನ್ನು ಸರಿ ಮಾಡಬೇಕಾಗಿದೆ.
ವಾಹನಗಳ ವೇಗವನ್ನು ತಗ್ಗಿಸಲು ಮತ್ತು ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಪರ್ಲಡ್ಕ ಜಂಕ್ಷನ್‌ನಲ್ಲಿ ಅಳವಡಿಸಲಾಗಿರುವ ರಸ್ತೆ ಉಬ್ಬು(ಸ್ಪೀಡ್ ಬ್ರೇಕರ್) ಸಂಪೂರ್ಣ ಹಾಳಾಗಿದ್ದು ಇದನ್ನೂ ಕೂಡ ಸರಿ ಮಾಡಬೇಕಾಗಿದೆ. ರಸ್ತೆಯ ಒಂದು ಬದಿಯಲ್ಲಿ ಸಂಪೂರ್ಣ ಗುಂಡಿಗಳು ಬಿದ್ದಿದ್ದು ನೀರು ತುಂಬಿಕೊಂಡಿದ್ದು ವಾಹನಗಳು ಒಂದೇ ಕಡೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದಲೇ ಈ ಕೂಡಲೇ ಪರ್ಲಡ್ಕ ಜಂಕ್ಷನ್ ಅನ್ನು ದುರಸ್ತಿಗೊಳಿಸಿ ಒಂದು ವ್ಯವಸ್ಥಿತವಾಗಿ ಜಂಕ್ಷನ್ ಆಗಿ ಮಾಡಬೇಕಾದ ಅಗತ್ಯತೆ ಇದೆ.










