ಕಳೆದುಹೋದ ಮಾಂಡೋವಿ ಮೋಟಾರ್ಸ್ ನ ಹಣ – ಪ್ರಾಮಾಣಿಕತೆ ಮೆರೆದ ಮಂಗಳೂರಿನ ಉದ್ಯಮಿ ಯಾಕೂಬ್

0

ಪುತ್ತೂರು: ಉಪ್ಪಿನಂಗಡಿಯ ಮಾಂಡೋವಿ ಮೋಟಾರ್ಸ್ ಶೋರೂಮ್‌ನಿಂದ ಎಸ್‌ಬಿಐ ಬ್ಯಾಂಕ್‌ಗೆ ಕಂಪನಿಯ ರೂ.3,82,414 ಹಣವನ್ನು ಜಮಾ ಮಾಡಲು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಳೆದುಹೋದ ಹಣವನ್ನು ಪತ್ತೆಹಚ್ಚಿ ಕಂಪನಿಗೆ ಮರಳಿಸುವ ಮೂಲಕ ಮಂಗಳೂರಿನ ಗ್ರಾನೈಟ್ ವರ್ಲ್ಡ್ ಅಡ್ಯಾರ್ ಇದರ ಮಾಲಕ ಯಾಕೂಬ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.


ಮಾಂಡೋವಿ ಮೋಟಾರ‍್ಸ್ ಉಪ್ಪಿನಂಗಡಿ ಶಾಖೆಯ ಉದ್ಯೋಗಿಗಳಾದ ಪ್ರವೀಣ್ ಮತ್ತು ಚಂದ್ರಶೇಖರ್ ಅವರು ಆ.21ರಂದು ಕಂಪನಿಯ ರೂ.3,82,414 ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲು ಕೆಎ-19-ಎಂಇ-8432 ನೋಂದಣಿ ಸಂಖ್ಯೆಯ ವ್ಯಾಗನರ್ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.

ಈ ವೇಳೆ ಹಣವಿದ್ದ ಬ್ಯಾಗ್ ಅನ್ನು ಕಾರಿನ ಮೇಲ್ಭಾಗದಲ್ಲಿಟ್ಟಿದನ್ನು ಮರೆತು ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಬ್ಯಾಗ್ ಕಾರಿನ ಮೇಲ್ಭಾಗದಲ್ಲಿಟ್ಟಿದಿರುವುದು ನೆನಪಾಗಿ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಹಣದ ಬ್ಯಾಗ್‌ ಕಳೆದುಹೋಗಿರುವುದು ಗೊತ್ತಾಗಿದೆ . ಕೂಡಲೇ ಕಂಪನಿಗೆ ಮಾಹಿತಿ ನೀಡಿ, ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ಬಳಿಕ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಣ ಪತ್ತೆಹಚ್ಚಲು ಪ್ರಯತ್ನ ನಡೆಸಿದ್ದರು. ಈ ನಡುವೆ, ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಹಣವಿದ್ದ ಬ್ಯಾಗ್ ಮಂಗಳೂರಿನ ಯಾಕುಬ್‌ ಎಂಬವರಿಗೆ ಸಿಕ್ಕಿದೆ. ಈ ಹಣ ಮಾಂಡೋವಿ ಮೋಟಾರ‍್ಸ್‌ಗೆ ಸೇರಿದ್ದು ಎಂದು ತಿಳಿದುಕೊಂಡ ಅವರು ಕಂಪನಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಯಾಕುಬ್‌ ಅವರ ಟೈಲ್ಸ್ ಶೋರೂಮ್ ಮಾಂಡೋವಿ ಮೋಟಾರ‍್ಸ್‌ನ ಶೋರೂಮ್ ಪಕ್ಕದಲ್ಲಿರುವುದು ತಿಳಿದುಬಂದಿದೆ. ನಂತರ ಯಾಕೂಬ್ ಅವರು ಹಣವನ್ನು ಮಂಗಳೂರು ಉಪ ಪೊಲೀಸ್ ಆಯುಕ್ತರ (ಅಪರಾಧ ಮತ್ತು ಸಂಚಾರ) ಕಚೇರಿಗೆ ತಂದು ಹಸ್ತಾಂತರಿಸಿದ್ದಾರೆ.

ಆ.22ರಂದು ಮಾಂಡೋವಿ ಮೋಟಾರ‍್ಸ್ ಸಂಸ್ಥೆಯ ಪ್ರತಿನಿಧಿಗಳು ಡಿಸಿಪಿ ಕಚೇರಿಗೆ ತೆರಳಿ, ಯಾಕೂಬ್ ಅವರು ಹಿಂತಿರುಗಿಸಿದ ರೂ.3,82,414 ಹಣವನ್ನು ಕಂಪನಿಯ ಪರವಾಗಿ ಸ್ವೀಕರಿಸಿದರು. ಕಳೆದುಹೋದ ಕಂಪನಿಯ ಹಣವನ್ನು ಯಾವುದೇ ಸ್ವಾರ್ಥವಿಲ್ಲದೆ ಪತ್ತೆಹಚ್ಚಿ ಮರಳಿಸಿದ ಯಾಕೂಬ್ ಅವರ ಪ್ರಾಮಾಣಿಕತೆಗೆ ಮಾಂಡೋವಿ ಮೋಟಾರ್ಸ್‌ನ ಉಪಾಧ್ಯಕ್ಷರು ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದ್ದಾರೆ ಎಂದು ಮಂಗಳೂರು ಹಂಪನಕಟ್ಟೆ ಮಾಂಡೋವಿ ಮೋಟಾರ‍್ಸ್‌ನ ಎಕೌಂಟ್ಸ್ ವಿಭಾಗದ ಡಿಜಿಎಂ ಅಶೋಕ್ ಕುಮಾರ್, ಸೀನಿಯರ್ ಮ್ಯಾನೇಜರ್ ಶಿವಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here