






ಪುತ್ತೂರು: ಕಾಡುಪ್ರಾಣಿಗಳಿಂದ ಕೃಷಿ ಹಾಗೂ ಜೀವ ರಕ್ಷಿಸಿಕೊಳ್ಳಲು ರೈತರು ಹೊಂದಿರುವ ಕೋವಿ (ಬಂದೂಕು) ಪರವಾನಗಿ ನವೀಕರಣ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನೀಡುತ್ತಿರುವ ಕಿರುಕುಳವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.


ವಿಧಾನ ಪರಿಷತ್ತಿನಲ್ಲಿ ಬಂದೂಕು ಪರವಾನಗಿ ನವೀಕರಣದ ವಿಳಂಬದ ಕುರಿತು ಶಾಸಕರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವರು, “ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರಳೀಕರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ” ಎಂದು ನೀಡಿರುವ ಉತ್ತರ ಸರ್ಕಾರದ ರೈತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಶಾಸಕರು ಪ್ರಸ್ತಾಪಿಸಿದ ಮುಖ್ಯ ಅಂಶಗಳು:
5 ವರ್ಷದ ಅವಕಾಶವಿದ್ದರೂ 2 ವರ್ಷಕ್ಕೆ ಕಡಿತ: ನಿಯಮಾವಳಿಗಳ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಕೋವಿ ಪರವಾನಗಿಯನ್ನು ಗರಿಷ್ಠ 5 ವರ್ಷಗಳವರೆಗೆ ನವೀಕರಿಸಿಕೊಡುವ ಅಧಿಕಾರವಿದೆ. ಆದರೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಇದನ್ನು ಕೇವಲ ೨ ವರ್ಷಕ್ಕೆ ಸೀಮಿತಗೊಳಿಸುತ್ತಿದ್ದು, ರೈತರು ಅಲೆಯುವಂತೆ ಮಾಡುತ್ತಿದ್ದಾರೆ.
ಆನೆಗಳ ದಾಳಿ ಮತ್ತು ರೋಗಬಾಧೆ:
ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಅಡಿಕೆ ಎಲೆಚುಕ್ಕೆ ರೋಗ ಮತ್ತು ಹಳದಿ ರೋಗದಿಂದ ತತ್ತರಿಸಿದ್ದಾರೆ. ಇದರ ಜೊತೆಗೆ ನಿರಂತರ ಆನೆಗಳ ದಾಳಿಯಿಂದ ಕೃಷಿ ಭೂಮಿಗಳನ್ನು ತೊರೆದು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಹಾರದ ದಾಖಲೆ ಕಡ್ಡಾಯಗೊಳಿಸುವುದು ಅವೈಜ್ಞಾನಿಕ:
ಕಾಡು ಪ್ರಾಣಿಗಳ ದಾಳಿಗೆ ಪರಿಹಾರ ಪಡೆದ ದಾಖಲೆ ಸಲ್ಲಿಸಿದರೆ ಮಾತ್ರ ಲೈಸೆನ್ಸ್ ನವೀಕರಿಸಲಾಗುವುದು ಎಂಬ ನಿಲುವು ಮೂರ್ಖತನದ್ದಾಗಿದೆ. ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ರೈತರ ಕಷ್ಟ ಅರಿಯಬೇಕು.
ಕೋವಿ ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸರ್ಕಾರ ತಕ್ಷಣವೇ ಸರಳೀಕರಿಸದಿದ್ದಲ್ಲಿ, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಕಿಸಾನ್ ಸಂಘ ಹಾಗೂ ಬಂದೂಕು ಪರವಾನಗಿದಾರರ ಒಕ್ಕೂಟದ ಜಯಪ್ರಸಾದ್ ಜೋಶಿ, ಇಳಂತಾಜೆ ಸುಕುಮಾರ್ ಮತ್ತು ಸಾವಿರಾರು ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಕಿಶೋರ್ ಕುಮಾರ್ ಪುತ್ತೂರು ಎಚ್ಚರಿಸಿದ್ದಾರೆ.










