






ಪುತ್ತೂರು; ಪುತ್ತೂರು ಶಾಸಕರು ಏನು ಅಭಿವೃದ್ದಿ ಕೆಲಸ ಮಾಡಿದ್ದಾರೆಂದು ಪುತ್ತೂರಿನ ಜನತೆಗೆ ಗೊತ್ತಿದೆ, ನಿಮಗೆ ಗೊತ್ತಿಲ್ಲದೇ ಇದ್ದರೆ ಪುತ್ತೂರಿನ ಜನರಲ್ಲಿ ಕೇಳಿ ಎಲ್ಲವನ್ನೂ ಹೇಳುತ್ತಾರೆ, ನೀವು ಪುತ್ತೂರಿಗೆ ಬಂದು ತಾಕತ್ತಿನ ಮಾತನ್ನಾಡುವುದು ಬೇಡ, ನಿಮಗೆ ತಾಕತ್ತಿದ್ದರೆ ಜಿಲ್ಲೆಯಲ್ಲಿ ನಿಮ್ಮದೇ ಬಿಜೆಪಿಯ ಆರು ಮಂದಿ ಶಾಸಕರಿದ್ದಾರೆ ಅವರು ಮೂರು ವರ್ಷದಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿ ತಾಕತ್ತು ಪ್ರದರ್ಶಿಸಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ್ ಅವರಿಗೆ ಸವಾಲು ಹಾಕಿದ್ದಾರೆ.



ಪುತ್ತೂರು ನಗರದಲ್ಲಿ ಆ.22ರಂದು ನಡೆದ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶುಕ್ರವಾರ ಪುತ್ತೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಬಿಜೆಪಿ ಪ್ರ.ಕಾರ್ಯದರ್ಶಿ ಶಾಸಕ ಅಶೋಕ್ ರೈ ಅವರು ತಾಕತ್ತಿದ್ದರೆ ಮೂರು ವರ್ಷದ ಅಭಿವೃದ್ದಿ ಕೆಲಸವನ್ನು ಬಹಿರಂಗಮಾಡಲಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಕೆ ಪಿ ಆಳ್ವರವರು ಶಾಸಕ ಅಶೋಕ್ ರೈ ಅವರು ಏನು ಕೆಲಸ ಮಾಡಿದ್ದಾರೆ ಎಂದು ಬಿಜೆಪಿಯವರೇ ನೇಮಕ ಮಾಡಿದ ಆಂದ್ರದ ರಾಜ್ಯಪಾಲರು ಪುತ್ತೂರಿನಲ್ಲಿ ಶಾಸಕರನ್ನು ಡೈನಾಮಿಕ್ ಶಾಸಕರು ಹೇಳಿದ್ದು ಮಾತ್ರವಲ್ಲದೆ ಅಶೋಕ್ ರೈ ಅವಧಿಯಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಪುತ್ತೂರು ಶಾಸಕರು 28೦೦ ಕೋಟಿ ಅನುದಾನ ತಂದಿದ್ದಾರೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದಾರೆ, ದೇವಸ್ಥಾನ, ಮಸೀದಿ , ಚರ್ಚು, ಬಸದಿಗಳ ಅಭಿವೃದ್ದಿ ಮಾಡಿದ್ದಾರೆ, ಗಲ್ಲಿ ಗಲ್ಲಿಗಳ ರಸ್ತೆಯನ್ನು ಅಭಿವೃದ್ದಿ ಮಾಡಿದ್ದಾರೆ, ಸರಕಾರಿ ಜಾಗದಲ್ಲಿದ್ದ ಹಿಂದೂ ದೇವಸ್ಥಾನಗಳನ್ನು ಸಕ್ರಮ ಮಾಡಿದ್ದಾರೆ, 4 ಸಾವಿರಕ್ಕೂ ಮಿಕ್ಕಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಿದ್ದಾರೆ ಇದೆಲ್ಲವೂ ಅಭಿವೃದ್ದಿ ಕೆಲಸಗಳಾಗಿವೆ. ಅಶೋಕ್ ರೈ ಏನು ಮಾಡಿದ್ದಾರೆಂದು ಪುತ್ತೂರಿನ ಜನರನ್ನು ಕೇಳಿ ಅವರೇ ನಿಮಗೆ ಉತ್ತರ ಕೊಡುತ್ತಾರೆ. ಸುಳ್ಳು ಹೇಳಿ ಜನರನ್ನು ಮಂಗ ಮಾಡುವ ಕಾಲ ಮುಗಿದೋಗಿದೆ, ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸಿ ಬಿಜೆಪಿ ಗೆಲ್ಲುತ್ತದೆ ಹೊರತು ಕಾಂಗ್ರೆಸ್ ರೀತಿ ಅಭಿವೃದ್ದಿ ಮಾಡಿ ಗೆದ್ದ ಇತಿಹಾಸವಿಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು. ಮುಂದಿನ ಮೂರು ಅವಧಿಗೆ ಪುತ್ತೂರಿನಲ್ಲಿ ಅಶೋಕ್ ರೈ ಅವರೇ ಶಾಕರಾಗಿರುತ್ತಾರೆಎ, ಬಡವರ ಅಶೀರ್ವಾದ ಅವರ ಮೇಲಿದೆ. ಧರ್ಮ ಆಧಾರಿತ ರಾಜಕಾರಣ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂಬುದನ್ನು ಅರಿತ ಬಿಜೆಪಿಯವರು ಹೋದಲ್ಲೆಲ್ಲಾ ಧರ್ಮದ ಹೆಸರಿನಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಆಳ್ವರು ಜನರಿಗೆ ಅಭಿವೃದ್ದಿ ಬೇಕಾಗಿದೆ ಅದನ್ನು ಶಾಸಕ ಅಶೋಕ್ ರೈ ಮಾಡುತ್ತಿದ್ದಾರೆ. ನಿಮ್ಮ ಪಕ್ಷದ ಆರು ಮಂದಿ ಶಾಸಕರಿಗೆ ಕ್ಷೇತ್ರದ ಅಭಿವೃದ್ದಿ ಮಾಡಲು ಹೇಳಿ ಆಮೇಲೆ ನಮಗೆ ಪಾಠ ಮಾಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ ಸಹಿತ ಪಕ್ಷದ ಮುಖಂಡರು ಉಪಸ್ಥಿತರಿದ್ದರು.













