









ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ದೊರೆತಿದ್ದು, ಅದರಂತೆ ಮುಂದಿನ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.



ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಆ.23ರಂದು ನಡೆದ ಜೀರ್ಣೋದ್ಧಾರ ಸಮಿತಿ ಸಭೆಯ ಬಳಿಕ ಅವರು ಮಾಧ್ಯಮಗಳಿಗೆ ಸಭೆಯ ಮಾಹಿತಿ ನೀಡಿದರು. ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ, ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಹಲವು ಕಾಮಗಾರಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ದೇವಸ್ಥಾನದ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಆರು ತಿಂಗಳ ಕಾಲ ದೇವಸ್ಥಾನದ ವಠಾರದಲ್ಲಿ ಪ್ಲೆಕ್ಸ್ ಅಳವಡಿಸಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಬಳಿಕ ದೇವರ ಅನುಮತಿ ಪಡೆದು ಜೀರ್ಣೋದ್ಧಾರ ಸಮಿತಿಯಲ್ಲಿ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡಿ ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಲಾಗಿತ್ತು. ಇದೀಗ ಇಲಾಖೆಯಿಂದ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ದೊರೆತಿದೆ ಎಂದು ಅವರು ವಿವರಿಸಿದರು. ಈಗಾಗಲೇ ದೇವಸ್ಥಾನದ ಕಟ್ಟೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆಯ ಅಭಿವೃದ್ಧಿಗೆ ರೂ.3 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸುಮಾರು ರೂ.15 ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು. 12 ತಿಂಗಳೊಳಗೆ ಸಭಾಭವನದ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ದೇವಸ್ಥಾನದ ಪಕ್ಕದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿರುವವರು ತಲಾ ರೂ.25 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಒಟ್ಟು 1.50 ಎಕರೆ ಜಾಗ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಜಾಗ ಪಡೆಯುವ ಕಾರ್ಯ ನಡೆಯಲಿದೆ. ಅನ್ನಸಂತರ್ಪಣೆಗೆ ಏಕಕಾಲದಲ್ಲಿ ಸುಮಾರು 10 ಸಾವಿರ ಮಂದಿಗೆ ಅನುಕೂಲವಾಗುವ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು 15 ದಿನಗಳೊಳಗೆ ಆರಂಭಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕಮರ್ಷಿಯಲ್ ಕಾಂಪ್ಲೆಕ್ಸ್ ಮೂಲಕ ದೇವಸ್ಥಾನದ ಆದಾಯ ಹೆಚ್ಚಿಸುವ ಗುರಿ:
ದೇವಸ್ಥಾನದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ ದೊಡ್ಡ ಸಭಾಭವನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್ ಮೂಲಕ ದೇವಸ್ಥಾನಕ್ಕೆ ಪ್ರತಿ ತಿಂಗಳು ಸುಮಾರು ರೂ.5 ಲಕ್ಷ ಆದಾಯ ಬರುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕರು ಹೇಳಿದರು.ಸುಮಾರು ರೂ.25 ಕೋಟಿ ವೆಚ್ಚದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸುವ ಉದ್ದೇಶವಿದ್ದು, ಇದಕ್ಕಾಗಿ ತಮ್ಮ ವೈಯಕ್ತಿಕ ನೆಲೆಯಿಂದ ದೇವಸ್ಥಾನಕ್ಕೆ ರೂ.1 ಕೋಟಿ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದೇನೆ. ಈ ಪೈಕಿ ರೂ.19 ಲಕ್ಷ ಈಗಾಗಲೇ ನೀಡಿದ್ದು, ಮುಂದಿನ ದಿನಗಳಲ್ಲಿ ರೂ.25 ಲಕ್ಷ ನೀಡಲಾಗುವುದು. ಅಲ್ಲದೆ, ಸರ್ಕಾರದಿಂದ ತಮಗೆ ದೊರೆಯುವ ಅನುದಾನದಲ್ಲಿ ರೂ.10 ಕೋಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ಒಂದು ತಿಂಗಳೊಳಗೆ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು. ಮಹಾಲಿಂಗೇಶ್ವರ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರಗಳಿಗೆ ಆಗಮಿಸುವ ಭಕ್ತರು ಪುತ್ತೂರು ಹಾಗೂ ಉಪ್ಪಿನಂಗಡಿಗೂ ಭೇಟಿ ನೀಡುವಂತಹ ಪ್ರಮುಖ ಧಾರ್ಮಿಕ ಕ್ಷೇತ್ರವನ್ನಾಗಿ ರೂಪಿಸುವುದು ತಮ್ಮ ಆಶಯವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಜೀರ್ಣೋದ್ಧಾರ ಸಮಿತಿಯ ಕಾವು ಹೇಮನಾಥ ಶೆಟ್ಟಿ, ಶಿವಪ್ರಸಾದ್ ರೈ, ಸಂತೋಷ್ ಕುಮಾರ್ ರೈ ನಳಿಲು, ರಾಜಾರಾಮ ಶೆಟ್ಟಿ ಕೋಲ್ಪೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ. ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ., ವಿನಯ ಸುವರ್ಣ ಹಾಗೂ ಸುಭಾಶ್ ರೈ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.
ಬ್ರಹ್ಮಕಲಶದ ದಿನ ನಿಗದಿ:
2028 ಜನವರಿಗೆ ದೇವಸ್ಥಾನದ ಬ್ರಹ್ಮಕಲಶಕ್ಕೆ ದಿನ ನಿಗದಿ ಮಾಡಿದ್ದೇವೆ. ತಂತ್ರಿಗಳಲ್ಲಿ ಕೇಳಿ ಮುಂದಿನ ಒಂದು ವಾರದಲ್ಲಿ ದಿನ ಪಿಕ್ಸ್ ಮಾಡುತ್ತೆವೆ.
ಅಶೋಕ್ ಕುಮಾರ್ ರೈ
ಶಾಸಕರು ಪುತ್ತೂರು
ದೇವಸ್ಥಾನದಿಂದ 35 ಸೆಂಟ್ಸ್ ಜಾಗ ಮಾತ್ರ ರಸ್ತೆಗೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ದೇವಸ್ಥಾನದ ಸುಮಾರು ಮೂರೂವರೆ ಎಕರೆ ಜಾಗ ತೆರವುಗೊಳ್ಳಲಿದೆ ಎಂಬ ಗೊಂದಲ ಕೆಲವು ಭಕ್ತಾದಿಗಳಲ್ಲಿ ಮೂಡಿದೆ. ಆದರೆ ವಾಸ್ತವವಾಗಿ ದೇವಸ್ಥಾನದ ಸುಮಾರು 35 ಸೆಂಟ್ಸ್ ಜಾಗ ಮಾತ್ರ ರಸ್ತೆಗೆ ಬಳಕೆಯಾಗಲಿದೆ ಎಂದು ಶಾಸಕ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನದ ಜಾಗವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇವಸ್ಥಾನದ ದಾಖಲೆಗಳನ್ನು ನಗರಸಭೆಗೆ ಹಸ್ತಾಂತರಿಸುವ ಉದ್ದೇಶವೂ ಇಲ್ಲ. ಈ ಬಗ್ಗೆ ಈಗಾಗಲೇ ಸರ್ವೆ ನಡೆಸಲಾಗಿದ್ದು, ಸುಮಾರು 35 ಸೆಂಟ್ಸ್ ಜಾಗ ಮಾತ್ರ ರಸ್ತೆಗೆ ಹೋಗಲಿದೆ. ಉಳಿದ ಜಾಗ ಪರಂಬೋಕು ಜಾಗವಾಗಿದ್ದು, ಅದೂ ದೇವಸ್ಥಾನದ ಪರಿಮಿತಿಯಲ್ಲೇ ಇರಲಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ದೇವಸ್ಥಾನದಿಂದಾಗಲಿ, ಭಕ್ತಾದಿಗಳಿಂದಾಗಲಿ ಯಾವುದೇ ಹಣ ಪಡೆಯುವುದಿಲ್ಲ. ಸರ್ಕಾರದಿಂದ ತಮಗೆ ಬಂದಿರುವ ಅನುದಾನದಲ್ಲಿ ರೂ.3 ಕೋಟಿ ಮೀಸಲಿಟ್ಟಿದ್ದು, ಅದೇ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.










