








ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದ ಜುಬೈರ್ ಎಂಬಾತನನ್ನು ದೋಷಮುಕ್ತಗೊಳಿಸಿ ಪುತ್ತೂರು ನ್ಯಾಯಾಲಯ ತೀರ್ಪು ನೀಡಿದೆ.



ಘಟನೆಯ ವಿವರ:
ಆರ್ಯಾಪು ಗ್ರಾಮದ ಸಂಪ್ಯ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿ ಕೋವಿಡ್ ಸಂದರ್ಭದಲ್ಲಿ ಕಾಸರಗೋಡಿನಲ್ಲಿರುವ ತನ್ನ ತಾಯಿ ಮನೆಗೆ ತಾಯಿಯೊಂದಿಗೆ ಹೋಗಿದ್ದ ವೇಳೆ ಕಾಸರಗೋಡಿನ ಮುಟ್ಟತ್ತೋಡಿ ಸಮೀಪದ ಚೆಂಗಳ ವಿದ್ಯಾನಗರದ ಹಸೈನಾರ್ ಎಂಬವರ ಪುತ್ರ ಜುಬೈರ್ ಎಂಬಾತನ ಪರಿಚಯವಾಗಿತ್ತು.
ಬಳಿಕ ಬಾಲಕಿಯ ತಾಯಿಯಲ್ಲಿ ತನಗೆ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಜುಬೈರ್ ಕೇಳಿಕೊಂಡಿದ್ದ. ಅವಳಿಗೆ ಈಗ 18 ವರ್ಷ ಪೂರ್ತಿಯಾಗಿಲ್ಲ. 18 ವರ್ಷ ಆದ ಬಳಿಕ ಮದುವೆ ಮಾಡಿಕೊಡುವುದಾಗಿ ತಾಯಿ ಒಪ್ಪಿಕೊಂಡಿದ್ದರು. ಆ ನಂತರ ಅಪ್ರಾಪ್ತೆ ಜುಬೈರ್ ಜೊತೆ ಸಂಪರ್ಕದಲ್ಲಿದ್ದಳು. 2021ರ ಮಾರ್ಚ್ 10ರಂದು ಜುಬೈರ್ ವಿಟ್ಲಕ್ಕೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಅಲ್ಲಿ ಬಾಲಕಿಯನ್ನು ನೋಡಿದ್ದ. ಬಳಿಕ ರಾತ್ರಿ 12 ಗಂಟೆಗೆ ಸಂಪ್ಯದಲ್ಲಿರುವ ಬಾಲಕಿಯ ಮನೆಗೆ ಬಂದು ಬಾಗಿಲು ತೆಗೆಯುವಂತೆ ಬಾಲಕಿಯನ್ನು ಒತ್ತಾಯಿಸಿದ್ದ. ಆಕೆ ಬಾಗಿಲು ತೆಗೆದಾಗ ಜುಬೈರ್ ಮನೆಯಲ್ಲಿ ಇತರರಿಗೆ ಗೊತ್ತಾಗದಂತೆ ಒಳಗೆ ಬಂದು ಬಾಲಕಿಯನ್ನು ಬೊಬ್ಬೆ ಹೊಡೆಯದಂತೆ ಬಾಯಿಯನ್ನು ಕೈಯಿಂದ ಅದುಮಿ ಹಿಡಿದು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ಅಪ್ಪಿಕೊಂಡು ಆಕೆ ಧರಿಸಿದ್ದ ಚೂಡಿದಾರ ಪ್ಯಾಂಟನ್ನು ತೆಗೆದಿದ್ದ. ನಿನ್ನನ್ನು ಮದುವೆಯಾಗುವವನು ನಾನು ಎಂದು ಹೇಳಿ ಆಕೆ ಅಪ್ರಾಪ್ತೆ ಎಂದು ತಿಳಿದಿದ್ದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದ.
ಬಳಿಕ ಈ ವಿಚಾರವನ್ನು ಯಾರ ಹತ್ತಿರ ಹೇಳಬೇಡ. ಹೇಳಿದರೆ ನಿನ್ನ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದ ಎಂದು ಜುಬೈರ್ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಕಲಂ 376 ಐಪಿಸಿ ಮತ್ತು ಕಲಂ 4 ಪೋಕ್ಸೋ ಕಾಯ್ದೆ 2012ರಂತೆ ಪ್ರಕರಣ ದಾಖಲಾಗಿತ್ತು. ನಂತರ ಆರೋಪಿ ಜುಬೈರ್ ವಿರುದ್ಧ ತನಿಖಾಧಿಕಾರಿ ಪುತ್ತೂರಿನ 7ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಅರೋಪಿ ಜುಬೈರ್ ನಿರಪರಾಧಿ ಎಂದು ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದ್ದರು.










