ಹಿರೇಬಂಡಾಡಿ: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿ ಮಾದಕ ವಸ್ತು ಬಳಕೆ ತಡೆ ಕಾರ್ಯಕ್ರಮ

0

ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ, ಆರಕ್ಷಕ ಠಾಣೆ ಉಪ್ಪಿನಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪುತ್ತೂರು-ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಮಾದಕ ವಸ್ತು ಬಳಕೆ ತಡೆ ವಿಚಾರವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆ.24ರಂದು ಹಿರೇಬಂಡಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಸುತೇಶ್ ಕೆ.ಪಿ. ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದು ಕಾನೂನಾತ್ಮಕವಾಗಿ ಅಪರಾಧವಾಗಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಕರೆ ನೀಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಸಿದರು.



ಸಂಪನ್ಮೂಲ ವ್ಯಕ್ತಿ ಲೋಕೇಶ್ ಬೆತ್ತೋಡಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಕರ್ತವ್ಯ ನಿರ್ವಹಿಸಬೇಕು. ಮಾನವ ಜೀವನ ಅಮೂಲ್ಯವಾದ ಸಂಪತ್ತು. ಇದು ಪ್ರಕೃತಿಯ ಕೊಡುಗೆ. ಸಮಾಜದ ಒಳಿತಿಗಾಗಿ ತನ್ನನ್ನು ತೊಡಗಿಸಿಕೊಳ್ಳಲು ಸಿಕ್ಕಿರುವ ವಿಶೇಷ ಅವಕಾಶವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಗುರು ಗಣಪತಿ ಭಟ್ ಮಾತನಾಡಿ, ಶಾಲೆಯಲ್ಲಿ ಇಂಥಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ವಾಸ್ಥ್ಯದ ಮನ ಪರಿವರ್ತನೆಯನ್ನು ಮಾಡಬಹುದೆಂದು ಹೇಳಿದರು.

ವೇದಿಕೆಯಲ್ಲಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವೀಂದ್ರ ಪಟಾರ್ತಿ, ತಾಲೂಕು ಜನಜಾಗೃತಿ ವೇದಿಕೆ ಉಪ್ಪಿನಂಗಡಿ ವಲಯದ ಅಧ್ಯಕ್ಷ ಪ್ರಶಾಂತ್ ಪೆರಿಯಡ್ಕ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ವಲಯದ ಅಧ್ಯಕ್ಷ ನಾರಾಯಣ ಕೆಳಗಿನಮನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಿರೇಬಂಡಾಡಿ ಘಟಕದ ಅಧ್ಯಕ್ಷ ತಿಮ್ಮಪ್ಪ ಗೌಡ ಕಜೆಕೊಡಿ, ಉಪ್ಪಿನಂಗಡಿ ಆರಕ್ಷಕ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ರಾಧಾಕೃಷ್ಣ ಉಪಸ್ಥಿತರಿದ್ದರು.

ಸೇವಾಪ್ರತಿನಿಧಿಗಳಾದ ಶಶಿ, ದಮಯಂತಿ, ಬೇಬಿ ಮತ್ತು ಸಂಜೀವ ನಾಯ್ಕ ಕಾರ್ಯಕ್ರಮ ಸಂಯೋಜನೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ವಲಯದ ಮೇಲ್ವಿಚಾರಕ ಶಿವಪ್ಪ ಎಂ.ಕೆ.ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಲಲಿತ ಕೆ. ವಂದಿಸಿದರು. ಶಿಕ್ಷಕ ಮನೋಹರ ಎಂ.ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿನಿ ಯಶಸ್ವಿ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕರಾದ ಚಕ್ರಪಾಣಿ ಎ.ವಿ., ಉಷಾಕಿರಣ ರೈ, ಮಲ್ಲಿಕಾ, ವಸಂತಕುಮಾರ್ ಪಿ., ಆರತಿ ವೈ, ಸುಧಾ ಸಹಕರಿಸಿದರು.

LEAVE A REPLY

Please enter your comment!
Please enter your name here