






ಪುತ್ತೂರಿನ ಓರ್ವನ ಸಹಿತ 7 ಮಂದಿಯ ಬಂಧನ : ರೂ.10ಲಕ್ಷ ನಗದು, 16 ಮೊಬೈಲ್‌ಗಳು, 23 ಸಿಮ್ ಕಾರ್ಡ್‌ಗಳು, 22 ಚೆಕ್ ಬುಕ್‌ಗಳು ವಶ


ಪುತ್ತೂರು: ಸೈಬರ್ ವಂಚನೆಗೆ ಬಳಸಲಾಗುತ್ತಿದ್ದ `ಮ್ಯೂಲ್ ಬ್ಯಾಂಕ್ ಖಾತೆ’ಗಳ ಜಾಲದ ವಿರುದ್ಧ ಮುಂಬೈ ಸೈಬರ್ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪುತ್ತೂರಿನ ಉರ್ಲಾಂಡಿ ಮೂಲದ ಓರ್ವನ ಸಹಿತ ಏಳು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ರೂ.10 ಲಕ್ಷ ನಗದು, 16 ಮೊಬೈಲ್ ಫೋನ್‌ಗಳು, 23 ಸಿಮ್ ಕಾರ್ಡ್‌ಗಳು, 22 ಚೆಕ್‌ಬುಕ್‌ಗಳು ಹಾಗೂ 31 ಕಂಪನಿಗಳ ಸೀಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



ಮುಂಬೈ ಸೈಬರ್ ಕ್ರೈಂ ವಿಭಾಗದ ಡಿಸಿಪಿ ಬಜರಂಗ್ ಬನ್ಸೋಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ. ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಬೋರಿವಲಿ ಪ್ರದೇಶದ ಸಲ್ಮಾನ್ ಹಬೀಬ್ ಪಠಾಣ್ (34ವ), ಸಾಜಿತ್ ನಿಸಾರ್ ಅಹ್ಮದ್ ಕೋಥವಾಲ(45ವ), ಚಿರಾಗ್ ಕೇತನ್ ಟ್ರೋಪಾಣಿ(31ವ), ಸಯ್ಯದ್ ವಜಾಹತ್ ವಹಿಯುದ್ದೀನ್ (41ವ), ರಾಕೇಶ್ ರಾಮಶಂಕರ್ ಮಿಶ್ರಾ(42ವ), ಪುತ್ತೂರು ಮೂಲದ ಉರ್ಲಾಂಡಿ ನಿವಾಸಿ ರಕ್ಷಿತ್ ಕೆ (35ವ). ಆರ್ಯನ್ ರಿತೇಶ್ ಠಕ್ಕರ್ (18ವ) ಬಂಧಿತ ಆರೋಪಿಗಳು. ರಕ್ಷಿತ್ ಹೆಗ್ಡೆ ಅನ್ನು ಮೀರಾ ರೋಡ್ ಭಾಯಂದರ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.
ತನಿಖೆಯ ವೇಳೆ ಆರೋಪಿಗಳಿಂದ ರೂ.10 ಲಕ್ಷ ನಗದು, 16 ಮೊಬೈಲ್ ಫೋನ್‌ಗಳು, 23 ಸಿಮ್ ಕಾರ್ಡ್‌ಗಳು, 22 ಚೆಕ್‌ಬುಕ್‌ಗಳು ಹಾಗೂ 31 ಕಂಪನಿಗಳ ಸೀಲುಗಳು ಪತ್ತೆಯಾಗಿವೆ. ಬ್ಯಾಂಕ್ ಖಾತೆಗಳನ್ನು ತೆರೆಯಲು ಹಾಗೂ ಅವುಗಳನ್ನು ನಿರ್ವಹಿಸಲು ಸಂಬಂಧಿಸಿದ ದಾಖಲೆಗಳು ಮತ್ತು ಇತರ ವಸ್ತುಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈಬರ್ ವಂಚನೆಯ ಹಣವನ್ನು ವರ್ಗಾಯಿಸಲು ಮತ್ತು ನಗದೀಕರಿಸಲು ಬಳಸಲಾಗುತ್ತಿದ್ದ ಬ್ಯಾಂಕ್ ಖಾತೆಗಳ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು, ಅನುಮಾನಾಸ್ಪದ ಹಣದ ವಹಿವಾಟಿನ ಸುಳಿವಿನ ಆಧಾರದ ಮೇಲೆ ಆರೋಪಿಗಳ ಚಟುವಟಿಕೆಗಳನ್ನು ಪತ್ತೆಹಚ್ಚಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ವಿವಿಧ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಅಗತ್ಯವಿರುವ ದಾಖಲೆಗಳು, ಸೀಲುಗಳು, ಚೆಕ್‌ಬುಕ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದರು. ಈ ಖಾತೆಗಳಿಗೆ ಸೈಬರ್ ವಂಚನೆಯಿಂದ ಬಂದ ಹಣವನ್ನು ಜಮೆ ಮಾಡಿಸಿ, ನಂತರ ಚೆಕ್‌ಗಳ ಮೂಲಕ ಹಣವನ್ನು ಹಿಂಪಡೆದು ವಂಚನೆ ಜಾಲಕ್ಕೆ ತಲುಪಿಸುತ್ತಿದ್ದರೆಂಬ ಆರೋಪವಿದೆ.
84 ಸೈಬರ್ ಅಪರಾಧಗಳೊಂದಿಗೆ ಸಂಪರ್ಕ
ತನಿಖೆಯಲ್ಲಿ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದ್ದು, ಆರೋಪಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು ದೇಶದ ವಿವಿಧೆಡೆ ದಾಖಲಾಗಿರುವ 84 ಸೈಬರ್ ಅಪರಾಧ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಹಣದ ವಹಿವಾಟಿನ ಸ್ವರೂಪ, ಖಾತೆಗಳ ಬಳಕೆ ಮತ್ತು ಆರೋಪಿಗಳ ಪಾತ್ರದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಜಾಲದ ಹಿಂದಿರುವವರ ಪತ್ತೆಗೆ ತನಿಖೆ ಬಂಧಿತರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚೆಕ್‌ಬುಕ್‌ಗಳು ಹಾಗೂ ಕಂಪನಿಗಳ ಸೀಲುಗಳನ್ನು ಪರಿಶೀಲಿಸಲಾಗುತ್ತಿದೆ. ಇವುಗಳ ಮೂಲಕ ಇನ್ನಷ್ಟು ಬ್ಯಾಂಕ್ ಖಾತೆಗಳು, ಮಧ್ಯವರ್ತಿಗಳು ಹಾಗೂ ಸೈಬರ್ ವಂಚನೆ ಜಾಲದ ಪ್ರಮುಖ ವ್ಯಕ್ತಿಗಳ ಸುಳಿವು ದೊರೆಯುವ ನಿರೀಕ್ಷೆಯಿದೆ.
`ಮ್ಯೂಲ್ ಬ್ಯಾಂಕ್ ಖಾತೆ’ ಎಂದರೆ ಸೈಬರ್ ವಂಚನೆಯ ಹಣವನ್ನು ಸ್ವೀಕರಿಸಲು ಅಥವಾ ಮತ್ತೊಂದು ಖಾತೆಗೆ ವರ್ಗಾಯಿಸಲು ಬಳಸುವ ಬ್ಯಾಂಕ್ ಖಾತೆ. ಕೆಲ ಸಂದರ್ಭಗಳಲ್ಲಿ ಖಾತೆದಾರರಿಗೆ ಕಮಿಷನ್ ನೀಡುವ ಮೂಲಕ ಅವರ ಖಾತೆಗಳನ್ನು ವಂಚಕರು ಬಳಸಿಕೊಳ್ಳುತ್ತಾರೆ. ಇಂತಹ ಖಾತೆಗಳು ಸೈಬರ್ ವಂಚನೆಯ ಹಣದ ಮೂಲವನ್ನು ಮರೆಮಾಚಲು ಪ್ರಮುಖ ಸಾಧನವಾಗುತ್ತಿವೆ. ಸೈಬರ್ ಪೊಲೀಸರು ಇತ್ತೀಚಿನ ದಿನಗಳಲ್ಲಿ ಇಂತಹ ಖಾತೆದಾರರ ವಿರುದ್ಧವೂ ಪ್ರಕರಣ ದಾಖಲಿಸುವ ಕ್ರಮ ಕೈಗೊಂಡಿದ್ದಾರೆ.










