






ಕಡಬ: ಕಡಬ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿ ಮನೆಯೊಂದರ ಕೊಠಡಿಯಲ್ಲಿದ್ದ ಮರದ ಬಾಕ್ಸ್ ಒಡೆದು ಅದರಲ್ಲಿದ್ದ ₹84,800 ನಗದು ಹಣ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ಅಡ್ಡಗದ್ದೆ ನಿವಾಸಿಯಾಗಿರುವ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ (43) ಅವರು ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅಡ್ಡಗದ್ದೆಯಲ್ಲಿರುವ ತಮ್ಮ ಗಂಡನ ಮನೆಯಲ್ಲಿ ವಾಸವಾಗಿದ್ದು, ಮಲಗುವ ಕೋಣೆಯಲ್ಲಿ ಇರಿಸಲಾಗಿದ್ದ ಮರದ ಬಾಕ್ಸ್ನಲ್ಲಿ ಹಣವನ್ನು ಸಂಗ್ರಹಿಸಿ ಇಡುತ್ತಿದ್ದರು ಎನ್ನಲಾಗಿದೆ. ಆಗಸ್ಟ್ 18ರಂದು ಕಾರ್ಯಕ್ರಮವೊಂದರ ನಿಮಿತ್ತ ತಮನ್ನಾ ಜಬಿನ್ ಅವರು ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದು, ಅದೇ ದಿನ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗಿದ್ದರು. ಬಳಿಕ ಆಗಸ್ಟ್ 24ರಂದು ಮರದ ಬಾಕ್ಸ್ನಲ್ಲಿದ್ದ ಹಣವನ್ನು ತೆಗೆಯಲು ಹೋದಾಗ ಬಾಕ್ಸ್ ಒಡೆದು ಅದರಲ್ಲಿದ್ದ ₹84,800 ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.



ಈ ಕುರಿತು ತಮನ್ನಾ ಜಬಿನ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಾಧ ಸಂಖ್ಯೆ 101/2026ರಂತೆ ಬಿಎನ್ಎಸ್–2023ರ ಕಲಂ 305ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










