






ಅಕಾಡೆಮಿಯ ನೃತ್ಯ ಸರಣಿ ಶ್ಲಾಘನೀಯ: ಮಮತಾ ಕೆ.ಆರ್.



ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ನೃತ್ಯ ತರಂಗಿಣಿ-7’ ಭರತನಾಟ್ಯ ಕಾರ್ಯಕ್ರಮ ಇಲ್ಲಿನ
ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ಶನಿವಾರ ನಡೆಯಿತು.




ಬಿ.ಸಿ.ರೋಡ್ ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಮಮತಾ ಕೆ.ಆರ್. ಕಾರ್ಯಕ್ರಮ ಉದ್ಘಾಟಿಸಿ, ಇಂತಹ ಶಾಸ್ತ್ರೀಯ ಕಲೆಯನ್ನು ವಿದ್ಯಾರ್ಥಿಗಳು
ಎಳವೆಯಲ್ಲೇ ಕಲಿತು ಸಂಸ್ಕೃತಿವಂತರಾಗಬೇಕು. ಕಲೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು, ಉನ್ನತಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅಕಾಡೆಮಿ
ಹಮ್ಮಿಕೊಂಡಿರುವ ಸರಣಿ ನೃತ್ಯ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.


ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ನೃತ್ಯಗುರು ಶಾಲಿನಿ ಆತ್ಮಭೂಷಣ್ ಪ್ರಾಸ್ತಾವಿಕ ಮಾತನಾಡಿದರು.
ಅಭಿಜ್ಞಾ ಪ್ರಾರ್ಥಿಸಿದರು. ಪೃಥ್ವಿಶ್ರೀ ಮತ್ತು ಶಮಾ ಪರಕ್ಕಜೆ ನಿರೂಪಿಸಿದರು. ಪುತ್ತೂರಿನ ನೃತ್ಯ ತಂಡದ ಕಲಾವಿದರಿಂದ ಏಕವ್ಯಕ್ತಿ, ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು.











