ಪುಣಚ ಶ್ರೀದೇವಿ‌ ಭವನದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

0

ಪುಣಚ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣೆ ಸಮಿತಿ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಬೆಳ್ಳಿಹಬ್ಬ ಆಚರಣೆ ಸಂಭ್ರಮದ ನೆನಪಿಗಾಗಿ ಕ್ಯಾಂಪ್ಕೋ ಮಂಗಳೂರು, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಪುಣಚ ಪ್ರಾ.ವ್ಯ.ಸೇವಾ ಸಹಕಾರ ಸಂಘ, ಕರ್ನಾಟಕ ಬ್ಯಾಂಕ್ ಮಂಗಳೂರು ನೀರ್ಕಜೆ ಶಾಖೆ, ಕ್ಯಾಂಪ್ಕೋ ಇನ್ ಸೇವಾ ಮಂಗಳೂರು ಇವರ ಸಹಕಾರದಲ್ಲಿ, ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ರೋಟರಿ-ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರವು ಆ.30ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ಬಳಿ ಇರುವ ಶ್ರೀದೇವಿ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು‌ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ನ ವೈದ್ಯ ಡಾ.ಸುರೇಶ್ ಪುತ್ತೂರಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮನುಷ್ಯರಿಗೆ ಆರೋಗ್ಯ ಕಾಳಜಿಯ ದೃಷ್ಟಿಯಿಂದ ಇದೀಗ ಅಲ್ಲಲ್ಲಿ ಉಚಿತ ಆರೋಗ್ಯ ಶಿಬಿರಗಳು ನಡೆಯುತ್ತಾ ಬರುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಂಡರೆ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ ಜನರಿಗೆ ಇದರ ಸದುಪಯೋಗ ಲಭಿಸಿದಂತಾಗುತ್ತದೆ. ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ ಲಭಿಸಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ ಆರೋಗ್ಯ ಭಗವಂತನು ಕೊಟ್ಟ ಶ್ರೇಷ್ಠ ವರ. ನಮ್ಮೂರಿನಲ್ಲಿ ನಡೆಯುತ್ತಿರುವ ಇಂತಹ ಉಚಿತ ವೈದಕೀಯ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯುತ್ತಿರುವುದು ಶಾಘ್ಲನೀಯ. ಸಮಾಜದ ತೊಡಕುಗಳನ್ನು ನಿವಾರಿಸಿ ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯವನ್ನು ಪಡೆಯುವಂತಾಗಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯ ಉಳಿಯಬೇಕಾದರೆ ಮಣ್ಣು ಉಳಿಯಬೇಕು ಮಣ್ಣು ಉಳಿಯಬೇಕಾದರೆ ಸಂಸ್ಕೃತಿಯ ಆಧಾರದ ಮೇಲೆ ಜೀವನ ಪದ್ಧತಿ ಪರಿವರ್ತನೆಯಾಗಬೇಕು ಎಂದರು.


ಮುಖ್ಯ ಅತಿಥಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್’ನ ವೈದಕೀಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ ದಾನದಲ್ಲಿ ರಕ್ತದಾನ ಶ್ರೇಷ್ಠದಾನ. ಶಿಬಿರದಲ್ಲಿ ರಕ್ತದಾನ ಮಾಡಿದರೆ ರಕ್ತದ ನಿಧಿ ಸಂಗ್ರಹವಾಗುತ್ತದೆ. ಇದರಿಂದ ಸಮಾಜಕ್ಕೆ ಸೇವಾ ರೂಪದಲ್ಲಿ ದೊರೆತಂತಾಗುತ್ತದೆ. ರಕ್ತದಾನ ಮಾಡಿದರೆ ನಮ್ಮಲ್ಲಿ ರಕ್ತ ವೃದ್ಧಿಯಾಗುವುದರ ಜೊತೆಗೆ ದೈಹಿಕವಾಗಿ ಆರೋಗ್ಯದಲ್ಲಿ ತೃಪ್ತಿ ದೊರೆತಂತಾಗುತ್ತದೆ ಎಂದರು.


ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.‌ ದ್ರವ್ಯ ಹೆಗ್ಡೆ, ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಉದಯ ಕುಮಾರ್ ದಂಬೆ, ಪುಣಚ ಪ್ರಾ.ವ್ಯ.ಸೇ.ಸಹಕಾರ ಸಂಘದ ತೋರಣಕಟ್ಟೆ ಶಾಖಾ ವ್ಯವಸ್ಥಾಪಕ ವೀರಪ್ಪ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಹೂವು ನೀಡಿ ಶಾಲು ಹಾಕಿ ಸ್ವಾಗತಿಸಲಾಯಿತು.


ಶ್ರೀದೇವಿ ವಿದ್ಯಾಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬೆಳ್ಳಿಹಬ್ಬ ಆಚರಣೆ ಸಮಿತಿ ಕಾರ್ಯದರ್ಶಿ ರಾಜೇಶ್ ರೈ ಕೋಡಂದೂರು ಸ್ವಾಗತಿಸಿ, ಜಗನ್ನಾಥ ಸಂಕೇಶ ವಂದಿಸಿದರು. ಸಂಚಾಲಕ ನಾರಾಯಣ ಬನ್ನಿಂತಾಯ ಕಾರ್ಯಕ್ರಮ ನಿರೂಪಿಸಿದರು.


ನಂತರ ನಡೆದ ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಇ.ಸಿ.ಜಿ, ಬಿ.ಪಿ ಮತ್ತು ಮಧುಮೇಹ ರಕ್ತ ತಪಾಸಣೆ, ಇ.ಎನ್.ಟಿ ವೈದ್ಯಕೀಯ ತಪಾಸಣೆ, ಕಣ್ಣು ಪರೀಕ್ಷೆ ಮತ್ತು ಅವಶ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ, ಚರ್ಮ ಮತ್ತು ಸ್ತ್ರೀ ರೋಗ ತಪಾಸಣೆ, ರಿಯಾಯಿತಿ ದರದಲ್ಲಿ ಕನ್ನಡಕ ಹಾಗೂ ಸಾಮಾನ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಡಾ.ಕಾವ್ಯಶ್ರೀ, ಡಾ ಸಮೀಹ, ಡಾ.ಶ್ತುತಿ ಶೆಟ್ಟಿ ಡಾ.ಜೂಲಿಯಾ, ಡಾ.ದ್ರವ್ಯ ಹೆಗ್ಡೆ, ಡಾ.ಎಸ್ತರ್ ಶಿಬಿರವನ್ನು ನಡೆಸಿಕೊಟ್ಟರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಿಶೋರ್ ಕುಮಾರ್ ಜೊತೆಗೆ ಸಿಬ್ಬಂದಿಗಳು ಸಹಕರಿಸಿದರು.
ಸಾರ್ವಜನಿಕ ಶೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.

100ಕ್ಕೂ ಅಧಿಕ ಫಲಾನುಭವಿಗಳು..
ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವು ಏಕಕಾಲದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಸುಮಾರು 100ಕ್ಕಿಂತಲೂ ಅಧಿಕ ಶಿಬಿರಾರ್ಥಿಗಳು ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಜ್ಞ ವೈದ್ಯರಿಂದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here