







ಪುತ್ತೂರು: ದರ್ಬೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ, ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.31ರಂದು ವಿಶ್ವಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಜಂಟಿಯಾಗಿ ನಡೆಸಲಿರುವ ಪುತ್ತೂರು ಚಲೋಗೆ ಸಂಬಂಧಿಸಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮತ್ತು ಭದ್ರತಾ ಭಾವನೆ ಹೆಚ್ಚಿಸುವ ನಿಟ್ಟಿನಲ್ಲಿ ಆ.30ರಂದು ಪೊಲೀಸರಿಂದ ಪುತ್ತೂರು ನಗರದಲ್ಲಿ ಪಥ ಸಂಚಲನ ನಡೆಯಿತು.



ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು, ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಉದ್ದೇಶದಿಂದ ಪುತ್ತೂರು ಪೇಟೆಯಲ್ಲಿ ಪಥಸಂಚಲನ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅವರ ಮಾರ್ಗದರ್ಶನದಂತೆ ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ ಅವರ ನೇತೃತ್ವದಲ್ಲಿ ಐದು ಕೆಎಸ್ಆರ್ಪಿ ತುಕಡಿ, ಎರಡು ಎಸ್ಎಎಫ್ ತುಕಡಿ, ವಿಶೇಷ ಕಾರ್ಯಪಡೆಯ 25 ಮಂದಿಯ ಎರಡು ಪೆಟಾಲಿಯನ್ ತಂಡ ಜೊತೆಗೆ ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸ್ನ್ ಡಿ’ಸೋಜ, ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಸುಳ್ಯ ಠಾಣಾ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಸಂಚಾರ ಪೊಲೀಸ್ ಠಾಣೆ ಎಸ್.ಐ ಸುಹಾಸ್, ಪುತ್ತೂರು ಉಪ ವಿಭಾಗದ 14 ಮಂದಿ ಎಸ್ಐಗಳು, ಎ.ಎಸ್.ಐಗಳು, ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರ ಠಾಣಾ ಮುಂಭಾಗದಿಂದ ಹೊರಟ ಪಥ ಸಂಚಲನ ಏಳ್ಮುಡಿ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಠಾಣೆಯ ತನಕ ನಡೆಯಿತು.













