






ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿರುವ ಬೆನ್ನಲ್ಲೇ ನೆಲ್ಯಾಡಿ ಗಾಂಧಿ ಮೈದಾನದ ಬಳಿಯಿಂದ ಬೆಥನಿ ವಿದ್ಯಾಸಂಸ್ಥೆಯ ಮಧ್ಯದಲ್ಲಿ ಯು-ಟರ್ನ್ ಕಲ್ಪಿಸಬೇಕೆಂಬ ಬೇಡಿಕೆ ಮತ್ತೆ ತೀವ್ರಗೊಂಡಿದೆ. ಈ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ.9ರಂದು ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳ ಮುಖಂಡರು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಸಾರ್ವಜನಿಕರು ತೀರ್ಮಾನಿಸಿದ್ದಾರೆ.


ಈ ಕುರಿತು ಆ.೩೦ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಸಭೆ ನಡೆಯಿತು. ಸಭೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿ ಯು-ಟರ್ನ್ ಅಗತ್ಯತೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ನೆಲ್ಯಾಡಿ ಗಾಂಧಿ ಮೈದಾನದ ಸುತ್ತಮುತ್ತ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದು, ಪ್ರಮುಖ ರಾಜ್ಯ ಹೆದ್ದಾರಿಗೆ ಸಂಪರ್ಕ ಸಾಧಿಸುವ ಮಾರ್ಗವೂ ಇದೇ ಭಾಗದಲ್ಲಿದೆ. ಅಲ್ಲದೆ ಈ ಪ್ರದೇಶದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಯು-ಟರ್ನ್ ವ್ಯವಸ್ಥೆ ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ತಮ್ಮ ಗಮ್ಯಸ್ಥಾನಕ್ಕೆ ತೆರಳಲು ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರ ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.



ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಮಾರ್ಗವನ್ನು ಅವಲಂಬಿಸಿರುವುದರಿಂದ ಯು-ಟರ್ನ್ ಇಲ್ಲದಿರುವುದು ಮುಂದಿನ ದಿನಗಳಲ್ಲಿ ಸಂಚಾರ ಸಮಸ್ಯೆಗೂ ಕಾರಣವಾಗುವ ಸಾಧ್ಯತೆ ಇದೆ. ಸ್ಥಳೀಯ ಜನರ ಅನುಕೂಲತೆ, ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕದ ದೃಷ್ಟಿಯಿಂದ ಗಾಂಧಿ ಮೈದಾನದ ಬಳಿ ಯು-ಟರ್ನ್ ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಯು-ಟರ್ನ್ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೆ.9ರಂದು ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಹಾಗೂ ಪ್ರಾಚಾರ್ಯ ಡಾ.ವರ್ಗೀಸ್ ಕೈಪನಡ್ಕ, ಫಾ. ಹನಿ ಜೇಕಬ್, ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಸಂತೋಷ್, ನಿವೃತ್ತ ಮುಖ್ಯಶಿಕ್ಷಕ ವೆಂಕಟರಮಣ ಆರ್., ಫಾ. ಗ್ರೇಸಸ್, ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಏಲಿಯಸ್ ಎಂ.ಕೆ., ನೆಲ್ಯಾಡಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಅಬ್ದುಲ್ ಜಬ್ಬಾರ್, ಮೊಹಮ್ಮದ್ ಇಕ್ಬಾಲ್, ಉಷಾ ಜೋಯಿ, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ನೆಲ್ಯಾಡಿ ಅಲ್ಫೋನ್ಸ ಚರ್ಚ್ನ ಧರ್ಮಗುರು ಫಾ.ಶಾಜಿ ಮ್ಯಾಥ್ಯೂ, ಜೋಸ್ ಮಾತಾ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
ಹೋರಾಟ ಸಮಿತಿ ರಚನೆ;
ಸಭೆಯಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಹಾಗೂ ಪ್ರಾಚಾರ್ಯ ಡಾ. ವರ್ಗೀಸ್ ಕೈಪನಡ್ಕ, ಉಪಾಧ್ಯಕ್ಷರಾಗಿ ರವಿಚಂದ್ರ ಅತ್ರಿಜಾಲು, ಕಾರ್ಯದರ್ಶಿಯಾಗಿ ರಫೀಕ್, ಕೋಶಾಧಿಕಾರಿಯಾಗಿ ಸೈಜು ಹಾಗೂ ಸಂಚಾಲಕರಾಗಿ ನೆಲ್ಯಾಡಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರನ್ನು ನೇಮಕ ಮಾಡಲಾಯಿತು. ಸದಸ್ಯರಾಗಿ ಸಂತೋಷ್, ಸತೀಶ್ ಕೆ.ಎಸ್., ಸಂಪಾವತಿ, ಉಷಾ ಜೋಯಿ, ಜೆಸಿಂತಾ, ಮನೋಜ್, ಗಣೇಶ್ ಪೂಜಾರಿ ಹಾಗೂ ಪೌಲ್ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು. ಪ್ರತಿಭಟನೆಯ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.










