ಬ್ಯಾಂಕ್ ಖಾತೆಯಲ್ಲಿರುವ ನಮ್ಮ ಹಣ ಎಷ್ಟು ಸುರಕ್ಷಿತ..?

0

ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಗ್ರಾಹಕರೊಬ್ಬರ 24,758 ರೂ. ಮಾಯ!

ಪುತ್ತೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಏಕಾಏಕಿ ಕಡಿತಗೊಂಡ ಘಟನೆ ವರದಿಯಾಗಿದ್ದು ಈ ಬಗ್ಗೆ ಖಾತೆದಾರ ಬ್ಯಾಂಕ್‌ನ ಮೇಲಧಿಕಾರಿಗಳಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.


ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಖಾತೆ ಹೊಂದಿರುವ ಹನೀಫ್ ರೆಂಜಲಾಡಿ ಎಂಬವರ ಖಾತೆಯಲ್ಲಿದ್ದ ರೂ.24,758.82 KEPT as HOLD ಆಗಿದೆ ಎಂದು ಅವರ ಮೊಬೈಲ್‌ಗೆ ಆ.2ರಂದು ಸಂಜೆ ಮೆಸೇಜ್ ಬಂದಿದೆ. ಈ ವೇಳೆ ಅವರು ತನ್ನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿದ್ದ ರೂ.24,758.82 ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ. ಮರುದಿನ ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಈ ಬಗ್ಗೆ ಅವರು ವಿಚಾರಿಸಿದ್ದಾರೆ, ಈ ವೇಳೆ ತಿಂಗಳಾಡಿ ಬ್ಯಾಂಕ್‌ನ ಮ್ಯಾನೇಜರ್ ಅವರು ಮಾಹಿತಿ ಪಡೆದುಕೊಂಡಿದ್ದು ಈ ಬಗ್ಗೆ ದೂರು ನೀಡುವಂತೆ ತಿಳಿಸಿದ್ದಾರೆ. ಬಳಿಕ ಮ್ಯಾನೇಜರ್ ಅವರು ಪೋರ್ಟಲ್ ಮೂಲಕ ಆ.3ರಂದು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದಾರೆ.


ಸೈಬರ್ ಕ್ರೈಂ ವಂಚನೆಗೆ ಒಳಗಾಗಿ ಹಣ ಕಳೆದುಕೊಳ್ಳುವುದು, ಒಟಿಪಿ ನಂಬರ್ ನೀಡಿ ಮೋಸ ಹೋಗುವುದು, ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವುದು ಮೊದಲಾದ ಘಟನೆಗಳು ಅನೇಕ ವರದಿಯಾಗಿದೆ, ಆದರೆ ಅಂತಹ ಯಾವುದೇ ವಿಚಾರಗಳೂ ನಡೆಯದೇ ಖಾತೆಯಲ್ಲಿದ್ದ ಹಣ ಏಕಾಏಕಿ ಹಣ ಕಡಿತಗೊಂಡ ಈ ಪ್ರಕರಣ ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿದೆ. ಮಾತ್ರವಲ್ಲದೇ ಬ್ಯಾಂಕ್‌ನ್ನು ನಂಬಿ ಹಣ ಇಡುವುದಾದರೂ ಹೇಗೆ ಎಂದು ಹಲವರು ಹೇಳಿಕೊಂಡಿದ್ದಾರೆ. ಗ್ರಾಹಕರಿಗೆ ಕನಿಷ್ಠ ಮಾಹಿತಿಯನ್ನೂ ನೀಡದೇ ಈ ರೀತಿ ಹಣವನ್ನು ಹೋಲ್ಡ್ ಮಾಡಿ ಇಡುವುದು ಗ್ರಾಹಕರ ಹಕ್ಕಿನ ಮೇಲೆ ದಾಳಿ ಮಾಡಿದಂತೆ ಆಗುತ್ತದೆ ಎನ್ನುವ ಆರೋಪ ಕೂಡಾ ವ್ಯಕ್ತವಾಗಿದೆ.

ಬ್ಯಾಂಕ್ ಖಾತೆದಾರರಿಗೆ ಆತಂಕ:
ಗ್ರಾಹಕರು ಬ್ಯಾಂಕ್‌ನ್ನು ನಂಬಿ ಅಲ್ಲಿ ವ್ಯವಹಾರ ಮಾಡ್ತಾರೆ, ಅದೇ ಸಂದರ್ಭದಲ್ಲಿ ಏಕಾಏಕಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯವಾಗುತ್ತದೆ ಎಂದಾದರೆ ಬ್ಯಾಂಕ್ ಖಾತೆಯಲ್ಲಿರುವ ನಮ್ಮ ಹಣ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುತ್ತಿದ್ದು ಬ್ಯಾಂಕ್‌ನ್ನು ನಂಬಿ ವ್ಯವಹಾರ ಮಾಡುವುದಾದರೂ ಹೇಗೆ ಎನ್ನುವ ಆತಂಕ ಕೂಡಾ ಹಲವರಿಗೆ ಕಾಡಲಾರಂಭಿಸಿದೆ. ಯಾವುದೋ ಲಿಂಕ್ ಕ್ಲಿಕ್ ಮಾಡಿಯೋ, ಒಟಿಪಿ ಶೇರ್ ಮಾಡಿಯೋ ಹಣ ಕಳೆದುಕೊಂಡ ಘಟನೆ ಅನೇಕ ನಡೆದಿದೆ, ಅದರಲ್ಲಿ ಗ್ರಾಹಕರ ತಪ್ಪಿರುವ ಕಾರಣ ಆ ರೀತಿ ಆಗುತ್ತಿದೆ, ಆದರೆ ಅಂತಹ ಯಾವುದೇ ಘಟನೆ ನಡೆಯದೇ ಖಾತೆಯಲ್ಲಿದ್ದ ಹಣವನ್ನು ಏಕಾಏಕಿ ಹೋಲ್ಡ್ ಅಥವಾ ಫ್ರೀಜ್ ಮಾಡುವುದು ಮತ್ತು ಬ್ಯಾಂಕ್‌ನವರು ನಮಗೇನೂ ಮಾಡಲು ಆಗುವುದಿಲ್ಲ ಎಂಬ ರೀತಿಯಲ್ಲಿ ಕೈಚೆಲ್ಲಿ ಕುಳಿತುಕೊಳ್ಳುವುದು ಈ ವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸುತ್ತಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹೋಲ್ಡ್ ಮಾಡಿದ ಬಳಿಕವಾದರೂ ಗ್ರಾಹಕರಿಗೆ ತಿಳಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಬೇಕು. ಯಾರೋ, ಎಲ್ಲೋ, ಯಾವುದೋ ಫ್ರಾಡ್ ಮಾಡಿದ್ರೆ ಅದಕ್ಕೆ ಇನ್ಯಾರೋ ನಷ್ಟ ಅನುಭವಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ, ಗ್ರಾಹಕರು ಬ್ಯಾಂಕ್‌ನ್ನು ನಂಬಿ ವ್ಯವಹಾರ ಮಾಡುವ ಕಾರಣ ಬ್ಯಾಂಕ್‌ನವರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಕೆ.ಎಂ ಹನೀಫ್ ರೆಂಜಲಾಡಿ ಆಗ್ರಹಿಸಿದ್ದಾರೆ.

ಪರಿಹಾರ ಕಂಡುಕೊಳ್ಳಬೇಕಲ್ಲವೇ..?
ಕೆನರಾ ಬ್ಯಾಂಕ್ ಭಾರತ ಸರಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು ಸೈಬರ್ ಕ್ರೈ ಪೊಲೀಸ್ ಇಲಾಖೆ ಕೂಡಾ ಸರಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಹಾಗಿರುವಾಗ ಇಂತಹ ಸಮಸ್ಯೆಗಳು ಸಂಭವಿಸಿದಾಗ ಅದಕ್ಕೊಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಇಂತಹ ವಿಚಾರಗಳು ಬಂದಾಗ ಬ್ಯಾಂಕ್‌ನವನ್ನು ಕೈಚೆಲ್ಲಿ ಕುಳಿತುಕೊಳ್ಳದೇ ಅದನ್ನು ಗಂಭೀರವಾಗಿ ಪರಿಗಣಿಸಿ ತನ್ನ ಖಾತೆದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸೈಬರ್ ಕ್ರೈಂ ಇಲಾಖೆ ಅಥವಾ ಸರಕಾರ ಜೊತೆ ಮಾತುಕತೆ ನಡೆಸುವ ಮೂಲಕ ಗ್ರಾಹಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಬ್ಯಾಂಕ್‌ನ್ನು ನಂಬಿದ ನನಗೆ ಅನ್ಯಾಯವಾಗಿದೆ:
ನಾನು ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಖಾತೆ ಹೊಂದಿದ್ದು ನನ್ನ ಖಾತೆಯಲ್ಲಿದ್ದ ರೂ.24,758.82 ಮೊತ್ತ ಆ.2ರಂದು ಕಡಿತಗೊಂಡಿದೆ. ನನ್ನ ಮೊಬೈಲ್‌ಗೆ ‘ಕೆಪ್ಟ್ ಆನ್ ಹೋಲ್ಡ್’ ಎಂಬ ಮೆಸೇಜ್ ಬಂದಿದೆ. ಈ ಬಗ್ಗೆ ತಿಂಗಳಾಡಿ ಶಾಖೆಯ ಮ್ಯಾನೇಜರ್ ಅವರಲ್ಲಿ ವಿಚಾರಿಸಿದಾಗ ನಿಮ್ಮ ಖಾತೆಯಲ್ಲಿದ್ದ ಹಣವನ್ನು ಚಂಡೀಗಡ ಸೈಬರ್ ಕ್ರೈಂ ಪೊಲೀಸರು ಹೋಲ್ಡ್ ಮಾಡಿದ್ದಾರೆ ಎಂದು ತಿಳಿಸಿದ್ದು ಆ ಬಳಿಕ ಶಾಖಾ ಮ್ಯಾನೇಜರ್ ಅವರು ಪೋರ್ಟಲ್ ಮೂಲಕ ಸಂಬಂಧಪಟ್ಟ ಸೈಬರ್ ಕ್ರೈಂ ಪೊಲೀಸ್ ಆ.3ರಂದು ಪೋರ್ಟಲ್ ಮೂಲಕ ದೂರು ನೀಡಿದ್ದಾರೆ, ಆದರೆ ದೂರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಮಂಗಳೂರು ಸೈಬರ್ ಕ್ರೈಂ ಪೊಲಿಸರಿಗೆ, ಕೆನರಾ ಬ್ಯಾಂಕ್ ಪುತ್ತೂರು ರೀಜನಲ್ ಮ್ಯಾನೇಜರ್‌ಗೆ, ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಆಫೀಸ್‌ಗೂ ಈ ಬಗ್ಗೆ ದೂರು ನೀಡಿ ವಿಚಾರಿಸಿದ್ದೇನೆ, ಅದು ಚಂಡೀಗಢ ರಾಜ್ಯದ ಸೈಬರ್ ಕ್ರೈಂ ಪೊಲೀಸರು ಹಣವನ್ನು ಹೋಲ್ಡ್ ಮಾಡಿದ್ದಾರೆ ಎನ್ನುವ ವಿಚಾರ ತಿಳಿದದ್ದು ಬಿಟ್ಟರೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ನಾನು ಪುತ್ತೂರಿನ ಅಂಗಡಿಯೊಂದಕ್ಕೆ ತೆಂಗಿನಕಾಯಿ ಮಾರಾಟ ಮಾಡಿದ್ದು ಅದರ 25 ಸಾವಿರ ರೂ ನನ್ನ ಖಾತೆಗೆ ಜಮೆ ಆಗಿತ್ತು. ಆ ಹಣ ಕಡಿತಗೊಂಡು ನಾನು ಸಂಕಷ್ಟಕ್ಕೆ ಸಿಲುಕಿದ್ದೇನೆ. ನಾನು ಸಣ್ಣಪುಟ್ಟ ಟ್ರಾನ್ಸಾಕ್ಷನ್ ನಡೆಸುವುದು ಬಿಟ್ಟರೆ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವುದಾಗಲೀ, ಅಪರಿಚಿತರಿಗೆ ವರ್ಗಾವಣೆ ಮಾಡುವುದಾಗಲೀ ಮಾಡಿಲ್ಲ, ಆದರೂ ನನ್ನ ಹಣವನ್ನು ಈ ರೀತಿ ಅನ್ಯಾಯವಾಗಿ ಹಿಡಿದಿಟ್ಟಿರುವುದಕ್ಕೆ ಏನರ್ಥ? ನಾನು ಬ್ಯಾಂಕ್‌ನ್ನು ನಂಬಿ ಅಲ್ಲಿ ಖಾತೆ ಹೊಂದಿ ವ್ಯವಹಾರ ನಡೆಸುತ್ತಿದ್ದು ಖಾತೆಯಿಂದ ಹಣ ಕಡಿತಗೊಂಡಾಗ ಬ್ಯಾಂಕ್‌ನವರು ಕೂಡಾ ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳದೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದಾದರೆ ಬ್ಯಾಂಕ್‌ಲ್ಲಿರುವ ನಮ್ಮ ಖಾತೆ ಎಷ್ಟು ಸುರಕ್ಷಿತ? ಇಂತಹ ಅನ್ಯಾಯ ಯಾರಿಗೂ ಆಗಬಾರದು, ಹಾಗಾಗಿ ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇನೆ.

-ಕೆ.ಎಂ ಹನೀಫ್ ರೆಂಜಲಾಡಿ

ಮೊಹಮ್ಮದ್ ಹನೀಫ್ ಎಂಬವರ ತಿಂಗಳಾಡಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ರೂ.24,758.82 ರೂ ಹೋಲ್ಡ್ ಆಗಿರುವುದು ನಿಜ. ಈ ಬಗ್ಗೆ ಅವರು ಬ್ಯಾಂಕ್‌ಗೆ ಬಂದು ದೂರು ನೀಡಿದ್ದು ಅದರಂತೆ ನಾವು ಆ.3ರಂದು ಸಂಬಂಧಪಟ್ಟ ಚಂಡೀಗಢದ ಸೈಬರ್ ಕ್ರೈಂ ಇಲಾಖೆಗೆ ಜಿಆರ್‌ಎಂ ಪೋರ್ಟಲ್ ಮೂಲಕ ದೂರು ನೀಡಿದ್ದೇವೆ. ನಾವು ಕಳುಹಿಸಿದ ದೂರನ್ನು ಅಲ್ಲಿ ಸ್ವೀಕರಿಸಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
-ಮ್ಯಾನೇಜರ್, ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆ

LEAVE A REPLY

Please enter your comment!
Please enter your name here