






ಪುತ್ತೂರು: ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಖಾಯಂ ಅದಾಲತ್ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.


ಸಂಪನ್ಮೂಲ ವ್ಯಕ್ತಿ ಸ್ವಾತಿ ಜೆ. ರೈ ಮಾತನಾಡಿ, ಖಾಯಂ ಅದಾಲತ್ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ನ್ಯಾಯಾಲಯದ ಹೊರಗೆ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಬಗೆಹರಿಸಲು ಸ್ಥಾಪಿಸಲಾದ ಶಾಶ್ವತ ನ್ಯಾಯಾಂಗ ಸಂಸ್ಥೆಯಾಗಿದೆ. ಇದನ್ನು 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯ ಸೆಕ್ಷನ್ 22-ಬಿ ಅಡಿಯಲ್ಲಿ ರಚಿಸಲಾಗಿದೆ. ಸಾಮಾನ್ಯ ಲೋಕ ಅದಾಲತ್‌ಗಳನ್ನು ಅಗತ್ಯವಿದ್ದಾಗ ಆಯೋಜಿಸಿದರೆ, ಖಾಯಂ ಲೋಕ ಅದಾಲತ್‌ಗಳು ವರ್ಷದ ಎಲ್ಲಾ ದಿನಗಳಲ್ಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.ಕಾರ್ಯಕ್ರಮವನ್ನು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಗಳೂರು ಪೀಠದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಉದ್ಘಾಟಿಸಿ, ಕಾನೂನು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಎಂದರು.



ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಕಾನೂನಿನ ಮಹತ್ವವನ್ನು ಸಾರಿ ಶುಭ ಹಾರೈಸಿದರು.ಶಾಲಾ ಮುಖ್ಯಗುರು ಕೆ.ಕೆ. ಮಾಸ್ತರ್ ಪ್ರಾಸ್ತಾವಿಕ ಮಾತನಾಡಿ, ಹಾರಾಡಿ ಶಾಲೆ ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುವ ಅಗತ್ಯವಿದೆ ಎಂದು ಹೇಳಿ ವಕೀಲರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶ ವೈ. ಹರಿಹರನ್, ವಕೀಲರ ಸಂಘದ ಉಪಾಧ್ಯಕ್ಷ ಮಹಾಬಲ ಶೆಟ್ಟಿ ಕಮಾಂಡ್, ಕೋಶಾಧಿಕಾರಿ ಭಾರತಿ ಎ., ಜೊತೆ ಕಾರ್ಯದರ್ಶಿ ಉದಯಚಂದ್ರ ಕೆ. ಹಾಗೂ ಹಾರಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹರಿಪ್ರಸಾದ್ ಉಪಸ್ಥಿತರಿದ್ದರು.ಶಿಕ್ಷಕಿ ಚಿತ್ರಾ ರೈ ಸ್ವಾಗತಿಸಿದರು, ಜಿಪಿಟಿ ಶಿಕ್ಷಕ ಅಬ್ದುಲ್ ಲತೀಫ್ ವಂದಿಸಿದರು. ಜಿಪಿಟಿ ಶಿಕ್ಷಕ ಜನಾರ್ದನ ದುರ್ಗ ನಿರೂಪಿಸಿದರು.










