ಫಿಲೋಮಿನಾ ಗಣೇಶೋತ್ಸವದ 44ರ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

0

ಜಾತಿ-ಮತ-ಧರ್ಮ ಭೇದವಿಲ್ಲದೆ ಗಣೇಶೋತ್ಸವ ಆಚರಣೆ ವಿಶೇಷತೆ-ಕೃಷ್ಣಪ್ರಸಾದ್ ಆಳ್ವ

ಪುತ್ತೂರು: ಫಿಲೋಮಿನಾದ ಯುವಶಕ್ತಿಯಲ್ಲಿ ಸಂಘಟನೆ ಮಾಡುವ ಸಂಘಟನಾಶಕ್ತಿಯಿದೆ. ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೈಂಕರ್ಯದಲ್ಲಿ ನಾವು ತೊಡಗಿಕೊಳ್ಳಬೇಕು. ಯಾವುದೇ ಜಾತಿ-ಮತ-ಧರ್ಮ ಭೇದವಿಲ್ಲದೆ ಫಿಲೋಮಿನಾ ಗಣೇಶೋತ್ಸವ ಆಚರಣೆ ಮಾಡುವುದು ವಿಶೇಷತೆಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಹೇಳಿದರು.

ಸಂತ ಫಿಲೋಮಿನಾ ವಿದ್ಯಾಸಂಸ್ಥೆ ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಫಿಲೋಮಿನಾ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ನಡೆಯುವ 44ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಪುತ್ತೂರು ಬ್ಲಡ್ ಬ್ಯಾಂಕ್ ನಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಬ್ಲಡ್ ಬ್ಯಾಂಕ್ ಸಮಾಜ ಸೇವೆ ಜನತೆಗೆ ಉಪಯುಕ್ತವಾಗಿದೆ-ಪ್ರೊ|ದತ್ತಾತ್ರೇಯ ರಾವ್:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ರಕ್ತದಾನ ಶ್ರೇಷ್ಟ ದಾನ. ಒಂದು ಬಾಟಲ್ ರಕ್ತವು ನಾಲ್ಕು ಮಂದಿಯ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತದೆ. ಈ ಬ್ಲಡ್ ಬ್ಯಾಂಕ್ ಸಮಾಜಸೇವೆಯು ಪುತ್ತೂರು ಆಸುಪಾಸಿನವರಿಗೆ, ಮಂಗಳೂರಿನ ಜನತೆಗೂ ಉಪಯುಕ್ತವಾಗಿ ಪರಿಣಮಿಸಿದೆ. ತಲಸೇಮಿಯಾ ರೋಗಿಗಳಿಗೆ, ಬೇರೆ ಬೇರೆ ಕಾರಣಗಳಿಗಾಗಿ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಉಚಿತವಾಗಿ ರಕ್ತದ ಪೂರೈಕೆಯಾಗುತ್ತದೆ. ಇಲ್ಲಿನ ಬ್ಲಡ್ ಬ್ಯಾಂಕ್ ಇಲ್ಲದೇ ಇರುತ್ತಿದ್ದರೆ ಜನತೆ ಮಂಗಳೂರು ಅಥವಾ ಮಡಿಕೇರಿ ಬ್ಲಡ್ ಬ್ಯಾಂಕ್ ಅನ್ನು ಆಶ್ರಯಿಸಬೇಕಾಗುತ್ತಿತ್ತು ಎಂದರು.

ರಕ್ತದಾನ ಪ್ರೀತಿಯ ಸಂಕೇತವಾಗಿದ್ದು ಪ್ರೀತಿಯನ್ನು ಹಂಚುತ್ತದೆ-ಡಾ.ಸೀತಾರಾಮ ಭಟ್:
ಪುತ್ತೂರು ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ.ಕೆ ಸೀತಾರಾಮ ಭಟ್ ಮಾತನಾಡಿ, ಭಾರತದ ಜನಸಂಖ್ಯೆಯ ಶೇ.1 ರಷ್ಟು ಮಂದಿ ರಕ್ತದಾನ ಮಾಡಿದಾಗ ಸಾಕಷ್ಟು ರಕ್ತ ಸಂಗ್ರಹವಾಗಬಲ್ಲುದು. ರಕ್ತದಾನ ಮಾಡುವಲ್ಲಿ ಜೀವಕ್ಕೆ ಅಪಾಯವಿದೆ ಎಂದು ಜನರಲ್ಲಿ ತಪ್ಪು ಅಭಿಪ್ರಾಯವಿದೆ. ರಕ್ತದಾನ ಮಾಡಿದಾಗ ದೇಹವು ಮತ್ತಷ್ಟು ಸದೃಢಗೊಳ್ಳುತ್ತದೆ ಮಾತ್ರವಲ್ಲ ರಕ್ತವು ಪುನಃ ಉತ್ಪತ್ತಿಗೊಳ್ಳುತ್ತದೆ. ರಕ್ತದಲ್ಲಿ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ, ಪ್ಲೇಟ್ ಲೆಟ್ ಗ್ರೂಪ್ ಗಳಿದ್ದು ಯಾವ ವ್ಯಕ್ತಿಗೆ ಯಾವ ಗ್ರೂಪ್ ರಕ್ತದ ಅವಶ್ಯಕತೆಯಿದೆಯೋ ಪರಿಶೀಲಿಸಿ ಆ ಗ್ರೂಪಿನ ರಕ್ತ ನೀಡಲಾಗುತ್ತದೆ. ರಕ್ತದಾನ ಪ್ರೀತಿಯ ಸಂಕೇತವಾಗಿದ್ದು ಪ್ರೀತಿಯನ್ನು ಹಂಚುತ್ತದೆ ಎಂದರು.

ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಫಿಲೋಮಿನಾ ಶ್ರೀ ಗಣೇಶೋತ್ಸವ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಜಯಕೃಷ್ಣ ಇ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಬೃಜೇಶ್ ಡಿ.ಕೆ, ಜೊತೆ ಕಾರ್ಯದರ್ಶಿ ಶೀತಲ್ ರೈ, ಕೌಶಲ್ ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿಂಧ್ಯಾ ರೈ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಗಣೇಶೋತ್ಸವ ಟ್ರಸ್ಟ್  ಕೋಶಾಧಿಕಾರಿ ದುರ್ಗಾಪ್ರಸಾದ್, ವಿದ್ಯಾರ್ಥಿ ಸಮಿತಿ ಕಾರ್ಯದರ್ಶಿ ಬೃಜೇಶ್ ಡಿ.ಕೆ,, ಜೊತೆ ಕಾರ್ಯದರ್ಶಿ ಶೀತಲ್ ರೈ, ಹಿರಿಯ ವಿದ್ಯಾರ್ಥಿ ಸುಕುಮಾರ್ ಪರ್ಲಡ್ಕ ಸಹಿತ ಹಲವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಸಕರು ರೋಲ್ ಮಾಡೆಲ್..
ಇಂದಿನ ಆಧುನಿಕ ಜಗತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಶಾಸಕ ಅಶೋಕ್ ಕುಮಾರ್ ರೈರವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಮನೆಯಿಂದ ಬುತ್ತಿ ತಂದು ಮನೆಯೂಟ ಸವಿಯುತ್ತಾರೆ. ದಿನದ ಒಂದು ಗಂಟೆ ವ್ಯಾಯಾಮ, ಯೋಗ ಮಾಡುತ್ತಾರೆ‌. ಓರ್ವ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನ ಮಂಥನ ನಡೆಸುತ್ತಿರುತ್ತಾರೆ. ಕರ್ನಾಟಕದಲ್ಲಿನ ಪುತ್ತೂರು ತಾಲೂಕಿಗೆ ಮೆಡಿಕಲ್ ಕಾಲೇಜು ತರಿಸುವಲ್ಲಿ ಶಾಸಕರ ಶ್ರಮ ಮೆಚ್ಚುವಂತಹುದು‌. ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ರೈರವರು ನಿಜವಾದ ರೋಲ್ ಮಾಡೆಲ್ ಆಗಿದ್ದಾರೆ.
ಕೃಷ್ಣಪ್ರಸಾದ್ ಆಳ್ವ, ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್

44ನೇ ವರ್ಷ.. ನೂರಕ್ಕೂ ಮಿಕ್ಕಿ ನೋಂದಾವಣೆ- 50 ಮಂದಿ ರಕ್ತದಾನ
ಫಿಲೋಮಿನಾ ಶ್ರೀ ಗಣೇಶೋತ್ಸವವಕ್ಕೆ ಇದೀಗ 44ನೇ ವರ್ಷದ ಸಂಭ್ರಮವಾಗಿದ್ದು, ಫಿಲೋಮಿನಾ ಕಾಲೇಜಿನ 50 ಮಂದಿ ವಿದ್ಯಾರ್ಥಿಗಳು ರಕ್ತದಾನ ನೀಡಿರುತ್ತಾರೆ. ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ರಕ್ತದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಬ್ಲಡ್ ಬ್ಯಾಂಕ್ ಅಧಿಕಾರಿಗಳ ನಿರ್ಣಯದಂತೆ ಅಗತ್ಯ ಬಿದ್ದಾಗ ಉಳಿದ ರಕ್ತದಾನಿ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಸಂಪರ್ಕಿಸುತ್ತೇವೆ ಎಂದಿದ್ದಾರೆ.

ದರ್ಬೆಯಲ್ಲಿ ರಾರಾಜಿಸುತ್ತಿದೆ 60 ಫೀಟ್ ಎತ್ತರದ ಭಗವಾಧ್ವಜ..
ವಿನಾಯಕನಗರದಲ್ಲಿ ಎರಡು ದಿನಗಳ ಕಾಲ ವರ್ಷಂಪ್ರತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಹಾಗೂ ಪ್ರಸ್ತುತ ವರ್ಷ ದರ್ಬೆ ವಿನಾಯಕ ನಗರದಲ್ಲಿ 60 ಫೀಟ್ ಎತ್ತರದ ಬೃಹತ್ ಓಂ ಭಗವಾಧ್ವಜ ರಾರಾಜಿಸುತ್ತಿದ್ದು ಇದು ರಾಜ್ಯದಲ್ಲಿ ಪ್ರಥಮ ಎಂಬಂತೆ ಗೋಚರಿಸಿದೆ.

ದರ್ಬೆಯಲ್ಲಿ ರಾರಾಜಿಸುತ್ತಿದೆ 60 ಫೀಟ್ ಎತ್ತರದ ಭಗವಾಧ್ವಜ..

LEAVE A REPLY

Please enter your comment!
Please enter your name here