ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 25ನೇ ವಾರ್ಷಿಕ ಮಹಾಸಭೆ

0

ಪುತ್ತೂರು: ಪ್ರಧಾನ ಕಚೇರಿಯನ್ನು ಪುತ್ತೂರಿನಲ್ಲಿ ಹೊಂದಿ ರಾಜ್ಯದಾದ್ಯಂತ 23 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 25ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಸೆ.6ರಂದು ಪುತ್ತೂರು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷರು ಸಹಕಾರಿಯು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು  800ಕೋಟಿ ರೂಪಾಯಿ ದಾಖಲೆ ವ್ಯವಹಾರ ದಾಖಲಿಸಿದೆ. ಸಂಘದ ಈ ಪ್ರಗತಿಗೆ ಸದಸ್ಯರು ಹಾಗೂ ನಿರ್ದೇಶಕರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದರು. ಸಹಕಾರಿ ಕ್ಷೇತ್ರದಲ್ಲಿ ಸರಸ್ವತಿಯು ಬೆಳೆದಂತೆ ತಾನು ಬೆಳೆಯಲು ಶ್ರೀ ಸರಸ್ವತಿ ಸಹಕಾರಿ ಸಂಘವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದ ಸದಸ್ಯರೋರ್ವರ ಮಾತನ್ನು ಉಲ್ಲೇಖಿಸಿದ ಅವರು, ಸ್ಟ್ಯಾಂಪ್‌ ಪೇಪರಿಗಾಗಿ ಸಾರ್ವಜನಿಕರು ಧೀರ್ಘಕಾಲ ಕಾಯಬೇಕಾಗುತ್ತಿದ್ದ ಸಮಸ್ಯೆಯನ್ನು ಮನಗಂಡು, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಇ-ಸ್ಟ್ಯಾಂಪ್‌ ಸೌಲಭ್ಯವನ್ನು ಕಲ್ಪಸಿದ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಶ್ರೀ ಸರಸ್ವತಿಗೆ ಇದೆ ಎಂದರು. ಸಂಘದ ಆಡಳಿತ ಕಚೇರಿಗಾಗಿ ಸ್ವಂತ ನಿವೇಶನವನ್ನು ಖರೀದಿಸಿ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಮಾರ್ಚ್‌ ಅಂತ್ಯದ ವೇಳೆಗೆ 1001 ಕೋಟಿ ರೂಪಾಯಿ ವ್ಯವಹಾರದ ಗುರಿ ಹೊಂದಲಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರು ಮತ್ತಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಹಕಾರಿಯ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಮುಖಾಂತರ ಮಹಿಳಾ ಸಬಲೀಕರಣ, ಯುವ ಸಬಲೀಕರಣ, ವೈದ್ಯಕೀಯ ನೆರವು, ವಿದ್ಯಾರ್ಥಿ ವೇತನ, ವಿವಿಧ ಸಾಮಾಜಿಕ ಸೇವಾ ಕಾರ್ಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ  ತರಬೇತಿ ನೀಡಿ ಯುವ ಸಬಲೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಸುಮಾರು 2 ಕೋಟಿ ರೂಪಾಯಿ ಮೊತ್ತದ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಇವರು ಸಹಕಾರಿಯ ಅಂಕಿ-ಅಂಶಗಳನ್ನು ಉಲ್ಲೇಖಿಸುತ್ತಾ ರಾಜ್ಯದಾದ್ಯಂತ 23 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡುತ್ತಿರುವ ಸಹಕಾರಿಯು 2025-26ರ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯಲ್ಲಿ 52,431 ಸದಸ್ಯರು,  ರೂ 10.29ಕೋಟಿ ಪಾಲು ಬಂಡವಾಳದೊಂದಿಗೆ,  ಸಹಕಾರಿಯು  ರೂ 45.81 ಕೋಟಿ ಸ್ವಂತ ನಿಧಿಯನ್ನು ಹೊಂದಿ ಸದೃಢವಾಗಿದೆ. ಸಹಕಾರಿಯು ತನ್ನ ಸದಸ್ಯರಿಂದ ರೂ.413.65ಕೋಟಿ ಠೇವಣಾತಿಯನ್ನು ಸಂಗ್ರಹಿಸಿ, ರೂ. 387.46ಕೋಟಿ ಸಾಲವನ್ನು ವಿತರಿಸಲಾಗಿದೆ, ಒಟ್ಟು ವ್ಯವಹಾರ ರೂ 801.11 ಕೋಟಿಯಾಗಿದ್ದು, ರೂ. 7.27ಕೋಟಿ ನಿವ್ವಳ ಲಾಭ ದಾಖಲಿಸಿದೆ ಎಂದರು. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು 2025-26ನೇ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸದಸ್ಯರಿಗೆ ಶೇ.13 ಡಿವಿಡೆಂಡ್ ಅನ್ನು ಸಭೆಯಲ್ಲಿ ಘೋಷಿಸಲಾಯಿತು. ಸಭೆಯಲ್ಲಿ ಸಹಕಾರಿಯ ಸದಸ್ಯರುಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಉಮೇಶ್ ಪ್ರಭು ಕೆ, ನಿರ್ದೇಶಕ ರಾಜಗೋಪಾಲ ಬಿ, ಕೆ ಹರೀಶ್ ಬೋರ್ಕರ್, ಬಿ ವಸಂತ ಶಂಕರ್, ವೇದವ್ಯಾಸ ಕೆ, ರವೀಶ್‌ ಪಿ, ಚಂದ್ರಶೇಖರ ಭಟ್‌ ಎಂ, ದಯಾನಂದ ನಾಯಕ್‌ ಕೆ, ಸಂಜೀವ ನಾಯಕ್‌, ದೇವಕಿ ಕೆ, ರಂಜಿತಾ ಆರ್‌ ಪ್ರಭು, ವೃತ್ತಿಪರ ನಿರ್ದೇಶಕ ಪುಷ್ಪಲತಾ ಎನ್‌,ಅನಂತಕೃಷ್ಣ ಬಿ, ಸಹಕಾರಿಯ ಲೆಕ್ಕಪರಿಶೋಧಕರಾದ CA ಚಂದ್ರಶೇಖರ ಎ ಜಿ ಉಪಸ್ಥಿತರಿದ್ದರು.  

ಸಹಕಾರಿಯ ಹಿರಿಯ ಅಧಿಕಾರಿ ಶ್ರೀರಂಜಿತಾ ಎ ವಿ ಹಾಗೂ ವೈಷ್ಣವಿ ಪ್ರಾರ್ಥಿಸಿದರು, ಮುಖ್ಯ ಕಾರ್ಯನಿವರ್ಹಣಾಧಿಕಾರಿ ವಸಂತ ನಾಯಕ್ ಎ ಸ್ವಾಗತಿಸಿ, ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್‌ ನಿರೂಪಿಸಿದರು.

ಮಾಜಿ ನಿರ್ದೇಶಕರಿಗೆ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಗೌರವಾರ್ಪಣಾ ಕಾರ್ಯಕ್ರಮ
ಸಹಕಾರಿಯು 25 ವರ್ಷಗಳನ್ನು ಪೂರೈಸಿ ರಜತಮಹೋತ್ಸವವನ್ನು ಆಚರಿಸುತ್ತಿರುವ ಸುಸಂದರ್ಭದಲ್ಲಿ ಸಹಕಾರಿಯ ಪ್ರಗತಿಗೆ ಸೇವೆಸಲ್ಲಿಸಿದ ಮಾಜಿ ನಿರ್ದೇಶಕರು, ಉಪಾಧ್ಯಕ್ಷರು ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು.

ಸ್ವರ ಸಂಗಮ ಕಾರ್ಯಕ್ರಮ
ಕೆ ಸಾತ್ವಿಕ್‌ ಪ್ರಭು ಇವರ RESONANCE The Music Band  ತಂಡದವರಿಂದ ಭಕ್ತಿಗೀತೆಗಳ ಮತ್ತು ಹಳೆಯ ಸುಮಧುರ ಗೀತೆಗಳ ಬಾನ್ಸುರಿ ಫ್ಯೂಷನ್‌ ಸ್ವರಸಂಗಮ ಕಾರ್ಯಕ್ರಮ ಸಭೆಯ ಮೊದಲು ನಡೆಯಿತು. ಬಾನ್ಸುರಿಯಲ್ಲಿ ಕೆ ಸಾತ್ವಿಕ್‌ ಪ್ರಭುರವರೊಂದಿಗೆ ವಯಲಿನ್‌ನಲ್ಲಿ ನಾಗಶಯನ ಮೂಡಂಬೈಲು, ತಬಲಾದಲ್ಲಿ ಶರತ್‌ ಪೆರ್ಲ ಮತ್ತು ಕೀಬೋರ್ಡ್‌ನಲ್ಲಿ ಗುರುರಾಜ್‌ ಉಡುಪಿ ಸಹಕರಿಸಿದರು. ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ನ ಕಾರ್ಯಕ್ರಮ ಸಂಯೋಜಕರಾದ ಬಿಪಿನ್‌ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here