ಕೊಯಿಲ: ಮಹಾವಿದ್ಯಾಲಯದಲ್ಲಿ ಹಂದಿ ಸಾಕಾಣಿಕೆ ತರಬೇತಿ

0

ವೈಜ್ಞಾನಿಕ ಪದ್ಧತಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ-ಡಾ.ಎಂ.ಎಸ್.ಶಿವಕುಮಾರ್

ರಾಮಕುಂಜ: ಹಂದಿ ಸ್ವಚ್ಚವಲ್ಲದ ಪ್ರಾಣಿ ಎಂಬ ದೂಷನೆ ಇತ್ತು, ಆದರೆ ಅದೀಗ ಅತ್ಯಂತ ಸ್ವಚ್ಚಂದ ಪ್ರಾಣಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಸಾಕಾಣಿಕೆ ಮಾಡಿದರೆ, ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯೊಂದಿಗೆ ಅಧಿಕ ಆದಾಯ ಗಳಿಸಬಹುದಾಗಿದೆ ಎಂದು ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಂ.ಎಸ್. ಶಿವಕುಮಾರ್ ಹೇಳಿದರು.


ಅವರು ಸೆ.10ರಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇದರ ಅಧೀನದಲ್ಲಿರುವ ಕೊಯಿಲ ಪಶು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ನಡೆದ ಹಂದಿ ಸಾಕಾಣಿಕೆ ತರಬೇತಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 20ನೇ ಜಾನುವಾರು ಗಣತಿ ಪ್ರಕಾರ ಅತೀ ಹೆಚ್ಚು ಹಂದಿ ಸಾಕಾಣಿಕೆ ಕೇರಳ, ಗೋವಾ ರಾಜ್ಯದ ನಂತರದ ಸ್ಥಾನದಲ್ಲಿ ಕರ್ನಾಟಕ ಸೇರಿಕೊಂಡಿದೆ. ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುಮಾರು 10ಕ್ಕೂ ಅಧಿಕ ಜಿಲ್ಲೆಯಲ್ಲಿ ರೈತರು ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಹಂದಿ ಸಾಕಾಣಿಕೆ ಬಗೆಗಿನ ಸಮಗ್ರ ಮಾಹಿತಿ ಪಡೆದುಕೊಂಡು ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ. ಚಿದಾನಂದ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ಹಂದಿಗೆ 3 ಕೆ.ಜಿ. ಆಹಾರ ಉಣಿಸಿದರೆ ಅದು 1 ಕೆ.ಜಿ. ಮಾಂಸ ಉತ್ಪಾದನೆ ಮಾಡುತ್ತದೆ. ಇದರ ಮಾಂಸ ಅತೀ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರವಾಗಿದ್ದು, ಇದೀಗ ಅಲ್ಲಲ್ಲಿ ಇದರ ಫಾರಂಗಳು ಆರಂಭವಾಗಿದ್ದು, ಪಟ್ಟಣಗಳಲ್ಲಿರುವ ಸಣ್ಣಪುಟ್ಟ ಹೊಟೇಲ್‌ನಿಂದ ಆರಂಭಗೊಂಡು ಸ್ಟಾರ್ ಹೊಟೇಲ್‌ಗಳಲ್ಲಿಯೂ ಹಂದಿ ಮಾಂಸದ ಖಾದ್ಯಗಳು ಮಾರಾಟವಾಗುತ್ತಿದೆ. ಹೀಗಾಗಿ ಹಂದಿ ಬಹು ಬೇಡಿಕೆ ಪಡೆದುಕೊಂಡಿದ್ದು, ರೈತರು ತರಬೇತಿ ಪಡೆದುಕೊಂಡು ತಮ್ಮ ಸಂಪಾದನೆಯನ್ನು ವೃದ್ಧಿಸಬಹುದಾಗಿದೆ ಎಂದರು. ಕಾರ‍್ಯಕ್ರಮದಲ್ಲಿ ಹಂದಿ ಸಾಕಾಣಿಕೆ ಬಗೆಗಿನ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.


ಹಿರಿಯ ಪಶು ವೈದ್ಯಾಧಿಕಾರಿ ಡಾ. ಪುನೀತ್, ಪ್ರಾಧ್ಯಾಪಕರಾದ ಡಾ. ಸಾಗರ್ ಎಂ., ಡಾ. ಹರಿಣಿ ಕೆ.ಆರ್., ಡಾ. ರಶ್ಮಿ ಕೆ.ಎಂ., ಡಾ. ರಜತ್ ಸಾಗರ್, ಡಾ. ವಸುಧರ ಭಟ್ ವಿಷಯವಾರು ಮಾಹಿತಿ ನೀಡಿದರು. ಹಂದಿ ಸಾಕಾಣಿಕೆ ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಅನಿಲ್ ಪಿಂಟೋ ಉಪಸ್ಥಿತರಿದ್ದರು. ಡಾ. ಮಂಜುನಾಥ್ ಪಾಟೀಲ್ ಸ್ವಾಗತಿಸಿ, ಸಾಗರ್ ಆರ್.ಎಸ್. ವಂದಿಸಿದರು. ಡಾ. ತೇಜಸ್ವಿನಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here