







ನೆಲ್ಯಾಡಿ: ಸ್ಕೂಟರ್ಗೆ ಹಿಂದಿನಿಂದ ಬೈಕ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರೆ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಬಲ್ಯ ಗ್ರಾಮದ ಬಲ್ಯ ಕ್ರಾಸ್ನಲ್ಲಿ ಸೆ.9ರಂದು ಬೆಳಗ್ಗೆ ನಡೆದಿದೆ. ಡಿಕ್ಕಿಯಾದ ಬೈಕ್ ಸವಾರ ಪರಾರಿಯಾಗಿರುವುದಾಗಿ ವರದಿಯಾಗಿದೆ.


ಕೊಕ್ಕಡ ಗ್ರಾಮದ ಪುತ್ಯ ನಿವಾಸಿ, ಶಿಕ್ಷಕ ವಿಮಲ್ಕುಮಾರ್ ಕೆ.ಎ. ಅವರ ಪತ್ನಿ ಮಾನಸ ವಿ. (37ವ.) ಗಾಯಗೊಂಡವರು. ಇವರು ಕಡಬದ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಸೆ.9 ರಂದು ಬೆಳಗ್ಗೆ ಮನೆಯಿಂದ ಸ್ಕೂಟರ್ನಲ್ಲಿ ನೆಲ್ಯಾಡಿ-ಕಡಬ ಮಾರ್ಗದಲ್ಲಿ ಹೋದವರು ಬಲ್ಯ ಕ್ರಾಸ್ನಲ್ಲಿ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿ ಸಂಪರ್ಕಿಸುತ್ತಿದ್ದಂತೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್ ಸವಾರ ಕಾರನ್ನು ಓವರ್ಟೇಕ್ ಮಾಡಿಕೊಂಡು ಬಂದು ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಾನಸ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಸ್ಥಳೀಯರು ಅವರನ್ನು ಉಪಚರಿಸಿ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ಹಾಗೂ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.



ಬೈಕ್ ಸವಾರ ಪರಾರಿ;
ಅಪಘಾತದ ಬಳಿಕ ಬೈಕ್ ಸವಾರ ಬೈಕ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಬೈಕ್ ಸವಾರನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.










