







ಪುತ್ತೂರು: ಯಕ್ಷಗಾನ ಕಲಾರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಪುಂಡು ವೇಷದಿಂದ ಹಿಡಿದು ಕಿರೀಟ ವೇಷ, ತಟ್ಟೆ ಕಿರೀಟ, ಹಾಸ್ಯ ಹಾಗೂ ಸ್ತ್ರೀ ವೇಷ ಸೇರಿದಂತೆ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದ ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಕಲಾರಂಗದ ಸುವರ್ಣ ಪುರಸ್ಕೃತ ಎಂ.ಟಿ. ಸುಂದರ ಕುಲಾಲ್ (79) ಅವರು ಸೆ.15ರಂದು ಹೃದಯಾಘಾತದಿಂದ ನಿಧನರಾದರು.


ಬಂಟ್ವಾಳ ನೆಲ್ಲಿಗುಡ್ಡೆ, ಕರೋಪಾಡಿ ಗ್ರಾಮದ ದಿ. ಪಕ್ರು ಮೂಲ್ಯ ಮತ್ತು ಗೌರಿ ದಂಪತಿಯ ಪುತ್ರನಾಗಿ ಅ.1 1946ರಂದು ಜನಿಸಿದ ಇವರು, ಬೇತು ಕುಂಞ ಕುಲಾಲ್ ಅವರಲ್ಲಿ ಯಕ್ಷಗಾನದ ತರಬೇತಿ ಪಡೆದಿದ್ದರು.



ಬಾಲಗೋಪಾಲ ವೇಷದ ಮೂಲಕ ಯಕ್ಷಗಾನ ಜೀವನ ಆರಂಭಿಸಿ, ಧರ್ಮಸ್ಥಳ ಮೇಳ ಮೂಲಕ ವೃತ್ತಿಪರ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಿದರು. ಬಳಿಕ ಮೂಲ್ಕಿ ಮೇಳ , ಸುರತ್ಕಲ್ ಮೇಳ, ಬಪ್ಪನಾಡು ಹಾಗೂ ಕುಂಬ್ಳೆ ಮೇಳದಲ್ಲೂ ಸೇವೆ ಸಲ್ಲಿಸಿ , ಪುನಃ ಸುರತ್ಕಲ್ ಮೇಳದಲ್ಲಿ ಕಲಾಸೇವೆ ಮುಂದುವರಿಸಿ, ಕೊನೆಯ 14 ವರ್ಷಗಳನ್ನು ಕಟೀಲು ಮೇಳದಲ್ಲಿ ಕಳೆದರು.
ಪೆರುಮಲ ಬಲ್ಲಾಳ, ನಿಶುಂಭ, ಈಶ್ವರ, ಚ್ಯವನ ಮಹರ್ಷಿ, ವಿದ್ಯುನ್ಮಾಲಿ ಹಾಗೂ ಜಂಬುಕ ಮೊದಲಾದ ಪಾತ್ರಗಳು ಅವರಿಗೆ ವಿಶೇಷ ಖ್ಯಾತಿ ತಂದುಕೊಟ್ಟಿದ್ದವು. ಯಾವುದೇ ಒಂದು ಪಾತ್ರಕ್ಕೆ ಸೀಮಿತವಾಗದೆ ವಿವಿಧ ಬಗೆಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಸರ್ವತೋಮುಖ ಕಲಾವಿದರಾಗಿ ಅವರು ಗುರುತಿಸಿಕೊಂಡು , ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದ ಸುಂದರ ಕುಲಾಲ್ ಅವರು ‘ಕೋಟಿ ಚೆನ್ನಯ’, ‘ಸಾವಿರದೊರ್ತಿ ಸಾವಿತ್ರಿ’, ‘ಗಿರಿಕನ್ಯೆ’, ‘ಎನ್ನೆಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿ , ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಪತ್ನಿ ಸವಿತಾ ಕುಲಾಲ್, ಮಕ್ಕಳಾದ ಸುಜಾತಾ ದೇವಿ, ಪ್ರಸಾದ್ ಹಾಗೂ ಗುರು ಪ್ರಸನ್ನ, ಅಳಿಯ ನಾಗೇಶ, ಸೊಸೆ ಮಲ್ಲಿಕಾ, ಮೊಮ್ಮಕ್ಕಳಾದ ಕೃತಿಕ, ಕಾರ್ತಿಕ ಹಾಗೂ ದಿಶಾನಿ, ಸಹೋದರರಾದ ಕೃಷ್ಣ, ರಮೇಶ, ಸದಾಶಿವ, ನಾರಾಯಣ ಹಾಗೂ ಈಶ್ವರ, ಸಹೋದರಿಯರಾದ ಪುಷ್ಪ ಹಾಗೂ ಶಾರದಾರವರನ್ನು ಅಗಲಿದ್ದಾರೆ.










