







ಟೀ ಶರ್ಟ್ ಕೊಡುಗೆಯಿಂದ ವಿದ್ಯಾರ್ಥಿಗಳಲ್ಲಿ ಹುರುಪು: ದಯಾಕರ ಆಳ್ವ


ಕಾಣಿಯೂರು : ದಾನಿಗಳ ವತಿಯಿಂದ ನೀಡಲಾದ ಟೀ ಶರ್ಟ್‌ಗಳಿಂದ ವಿದ್ಯಾರ್ಥಿಗಳ ಮೊಗದಲ್ಲಿ ಹೊಸ ಹುರುಪು ಮೂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೂ ಎಲ್ಲರೂ ಕೈಜೋಡಿಸಬೇಕು. ಶಾಲೆಯ ಅಭಿವೃದ್ಧಿಗೆ ಅಗತ್ಯವಿರುವ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ ಎಂದು ಲಯನ್ಸ್ ಕ್ಲಬ್ ಜಲದುರ್ಗಾ ಬೆಳ್ಳಾರೆ ಅಧ್ಯಕ್ಷ ದಯಾಕರ ಆಳ್ವ ಹೇಳಿದರು.



ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 38 ವಿದ್ಯಾರ್ಥಿಗಳಿಗೆ ಟೀ ಶರ್ಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ ಶೆಟ್ಟಿ ಬರಮೇಲು ಮಾತನಾಡಿ, ದಾನಿಗಳ ಸಹಕಾರದಿಂದ ಸರಕಾರಿ ಶಾಲೆಯ ವಿದ್ಯಾರ್ಥಿಗಳೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ವಿಭಿನ್ನ ಶೈಲಿಯ ಸಮವಸ್ತ್ರ ಧರಿಸುವಂತಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರವನ್ನು ಅಚ್ಚುಕಟ್ಟಾಗಿ ಧರಿಸುವುದರ ಜತೆಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು ಎಂದರು.

ಗ್ರಾ.ಪಂ. ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮಾರು ಮಾತನಾಡಿ, ನಮ್ಮೂರಿನ ಶಾಲೆಗೆ ಏನಾದರೂ ಕಿರು ಕಾಣಿಕೆ ನೀಡಬೇಕೆಂಬುದು ಬಹುದಿನದ ಕನಸಾಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನಮ್ಮಿಂದಾದ ನೆರವು ನೀಡಬೇಕೆಂಬ ಆಶಯ ಇದೀಗ ಈಡೇರಿದೆ ಎಂದರು.
ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪ್ರಪುಲ್ ಪೂಜಾರಿ ಮಾತನಾಡಿ, ತಾವು ಕಲಿತ ಶಾಲೆಯೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ಹೇಳಿದರು. ಶಾಲೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ಅವರು, ತಾವು ಕಲಿತ ಶಾಲೆಯ ಮಕ್ಕಳಿಗೆ ನೆರವಾಗಲು ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.
ಗ್ರಾ.ಪಂ. ಮಾಜಿ ಸದಸ್ಯೆ ಗುಲಾಬಿ ಬೊಮ್ಮೆಮಾರು, ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪ್ರಪುಲ್ ಪೂಜಾರಿ ಹಾಗೂ ನಿರೀಕ್ಷ್ ರೈ ಪೆರಾಬೆಪಟ್ಟೆ ಅವರು 38 ವಿದ್ಯಾರ್ಥಿಗಳಿಗೆ ಟೀ ಶರ್ಟ್‌ಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯಗುರು ಲತಾ ಕುಮಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










