







ಬರಹ : ನಾರಾಯಣ ಭಟ್ ಟಿ ರಾಮಕುಂಜ


ದಶಕಗಳ ಕೂಗಿಗೆ ಸಿಕ್ಕ ಬಲ
ದಶಕಗಳಿಂದ ತುಳು ಭಾಷೆ ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕೆಂದು ಕೂಗು ಕೇಳುತ್ತಲೇ ಬಂದಿದೆ. ಕರಾವಳಿ ಭಾಗದ ಅನೇಕ ಗಣ್ಯಮಾನ್ಯರು ಇದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈಗ ಸಿಕ್ಕಿರುವ ಮಾನ್ಯತೆ ನಮ್ಮ ಕೂಗಿಗೆ ಬಲ ತುಂಬಿದೆ.



ಕರ್ನಾಟಕ ಸರಕಾರದ ಸಚಿವ ಸಂಪುಟ ಸಭೆ ಕಡಲ ತಡಿಯಲ್ಲಿ 18-09-2026ರಂದು ನಡೆಯುವ ಸುದ್ದಿ ಬರುತ್ತಲೇ ನಮ್ಮ ನಿರೀಕ್ಷೆಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿತು. ಸಾವಿರಾರು ಕನಸುಗಳು ಹರಿದಾಡಿದವು. ಅದರಲ್ಲೊಂದು ಬಹು ನಿರೀಕ್ಷೆಯ ಕನಸು – ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಮಾನ್ಯತೆ. ಅದು ಅಧಿಕೃತವಾಗಿ ಘೋಷಣೆಯಾಗಿಯೇ ಬಿಟ್ಟಿತು.
ಇನ್ನೇನು ತುಳು ಭಾಷೆಯಲ್ಲಿ ಆಡಳಿತ ನಡೆಸಲಾಗುವುದೇ?
ಇದು ಕರ್ನಾಟಕದ 2ನೇ ಹೆಚ್ಚುವರಿ ಆಡಳಿತ ಭಾಷೆ. ‘ಹೆಚ್ಚುವರಿ’ ಎಂಬುದು ನಮಗೆ ತಿಳಿದಿರಲೇಬೇಕು. ರಾಜ್ಯಭಾಷೆಯಲ್ಲೇ ಆಡಳಿತ ಎಂದಿನಂತೆ ನಡೆಯುವುದು. ಕನ್ನಡ ತಿಳಿಯದ ಒಬ್ಬ ವ್ಯಕ್ತಿಯೂ ಕಚೇರಿಗೆ ಹೋಗಿ ತುಳು ಭಾಷೆಯಲ್ಲೇ ವ್ಯವಹರಿಸಬಹುದು. ಯಾವುದೇ ಇಲಾಖೆ ವಿರೋಧಿಸುವಂತಿಲ್ಲ. ಹಾಗೆಂದು ಕನ್ನಡ ಬೇಡ ಎಂಬ ಹೋರಾಟ, ಕೂಗಾಟ ನಡೆಸುವುದು ಅಪಾಯಕಾರಿ ನಡೆಯಾದೀತು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳಲ್ಲಿ ತುಳುವಿನಲ್ಲೂ ಅರ್ಜಿ ಕೊಟ್ಟರೆ ತಿರಸ್ಕರಿಸುವಂತಿಲ್ಲ. ಹಾಗೆಂದು ಹಠ ಸಾಧನೆ ಮಾಡುವುದು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಹೆಚ್ಚುವರಿ ಭಾಷೆಯಾಗಿ ಬಳಸಬಹುದು. ಅಧಿಕೃತ ಸ್ಥಾನಮಾನ ಸಿಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳಲ್ಲಿ ತುಳುವಿನಲ್ಲಿ ಫಲಕಗಳು ಬಂದರೂ ಅಚ್ಚರಿಯಿಲ್ಲ. ತುಳು ಪ್ರಿಯರು ಅಂಗಡಿಗಳ ಬೋರ್ಡುಗಳಲ್ಲಿ ತುಳು ಭಾಷೆಯನ್ನು ಅಂದರೆ ಕನ್ನಡ ಲಿಪಿಯಲ್ಲಿ ಬರೆಸಲೂಬಹುದು. ಪುತ್ತೂರು ನಗರದಲ್ಲಿ ಈಗಾಗಲೇ ಒಂದು ಅಂಗಡಿಯ ಹೆಸರು ‘ಕಮ್ಮಿದ ಅಂಗಡಿ’ ಎಂದು ತುಳು ಭಾಷೆಯಲ್ಲಿ ರಾರಾಜಿಸುತ್ತಿದೆ. ಕನ್ನಡ, ಇಂಗ್ಲಿಷ್ ಜೊತೆಗೆ ತುಳುವಿನಲ್ಲೂ ವ್ಯವಹರಿಸುವ ಹಕ್ಕು ಜನರಿಗೆ ಬಂದಿದೆ.
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಾಧ್ಯತೆಗಳು
ಈಗಾಗಲೇ ತೃತೀಯ ಭಾಷೆಯಾಗಿ ತುಳು ಭಾಷೆಯನ್ನು ಬೋಧಿಸಿದ ಕೆಲವು ಶಾಲೆಗಳಿವೆ. ತೃತೀಯ ಭಾಷೆ ಉಳಿದುಕೊಂಡರೆ ತುಳುವಿಗೂ ಅವಕಾಶ ಹೆಚ್ಚಬಹುದು. ಸ್ಥಳೀಯ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ತುಳು ಭಾಷೆ ಬಲ್ಲವರಿಗೆ ಆದ್ಯತೆ ಸಿಕ್ಕಿದರೂ ಅಚ್ಚರಿಯಿಲ್ಲ.
ತುಳು ಸಾಹಿತ್ಯ ಅಕಾಡೆಮಿಗೆ ಹೆಚ್ಚಿನ ಅನುದಾನಕ್ಕೆ ಹಕ್ಕೊತ್ತಾಯ ಮಂಡಿಸಬಹುದು. ತುಳು ಭಾಷೆಯ ಸಾಹಿತ್ಯ ಸಮ್ಮೇಳನ, ಕಮ್ಮಟ, ಸಾಹಿತ್ಯ ಕೃತಿಗಳ ಪ್ರಕಟಣೆ, ಪ್ರಶಸ್ತಿ ಪುರಸ್ಕಾರಗಳಿಗೆ ಒಂದಷ್ಟು ಹೆಚ್ಚು ಅನುದಾನ ಪಡೆದುಕೊಳ್ಳಲು ಅವಕಾಶದ ಬಾಗಿಲು ತೆರೆಯಿತು. ಈಗಾಗಲೇ ಆಂಧ್ರಪ್ರದೇಶದಲ್ಲಿ 2ನೇ ಭಾಷೆಯಾಗಿ ಉರ್ದು ಅಂಗೀಕಾರಗೊಂಡಿರುವುದನ್ನು ನೆನಪಿಸಿಕೊಳ್ಳಬಹುದು .
ತುಳುವರ ಸಂಸ್ಕೃತಿ ಮತ್ತು ಅಸ್ಮಿತೆ
ತುಳು ಎಂದರೆ ಕೇವಲ ಒಂದು ಭಾಷೆಯಲ್ಲ, ಅದು ಸ್ವಂತ ಲಿಪಿಯುಳ್ಳ ಭಾಷೆ. ಅದು ಒಂದು ನಾಗರಿಕತೆ, 2000 ವರ್ಷಗಳ ಇತಿಹಾಸವಿದೆ. ಕೋಟಿಗೆ ಕಡಿಮೆ ಇಲ್ಲದಷ್ಟು ಜನರ ಮಾತೃಭಾಷೆ, ಹೃದಯದ ಭಾಷೆ, ಅನ್ನದ ಭಾಷೆ, ವ್ಯಾವಹಾರಿಕ ಭಾಷೆ.
ತುಳುನಾಡಿನ ಸಂಸ್ಕೃತಿ ತುಳು ಭಾಷೆಯಲ್ಲಿಯೇ ಅಡಕವಾಗಿದೆ. ಅದನ್ನು ಕನ್ನಡದಲ್ಲಿ ಹೇಳಿದರೆ ಹೃದಯ ಮುಟ್ಟಲಾರದು. ಅದು ಶ್ರೀಮಂತ ಭಾಷೆ. ತುಳುನಾಡಿನ ಪರಿಸರದ ಯಾವುದೇ ಸಸ್ಯವರ್ಗಗಳಿರಲಿ, ಬಳಕೆಯ ಪಾತ್ರೆ-ಪಗಡಿಗಳಿರಲಿ ಅವುಗಳನ್ನು ಗುರುತಿಸಲು , ಕನ್ನಡ ಭಾಷೆಯಲ್ಲಿ ಸಿಗದಷ್ಟು ಪದಗಳು ತುಳುವಿನಲ್ಲಿವೆ. ಕೆಲವು ತುಳು ಭಾಷೆಯ ಗಾದೆಗಳು ನೀಡುವ ಅರ್ಥಕ್ಕೆ ಸಮಾನಾಂತರ ಪದ ಕನ್ನಡದಲ್ಲಿ ಇಲ್ಲ. ತುಳು ಈ ಭಾಗದ ಮಣ್ಣಿನ ಭಾಷೆ.
ತುಳು ಸಂಶೋಧನೆ, ಬರಹ, ಪತ್ರಿಕೆಗಳು ಹೆಚ್ಚುವ ಅವಕಾಶ ಪಡೆದವು . ತುಳುವನ್ನೇ ಉಸಿರಾಡುವ ಭೂತಾರಾಧನೆ, ನಾಗಾರಾಧನೆ, ಕಂಬಳ ಇವೆಲ್ಲವೂ ಗರಿಗೆದರಲು ಸಾಧ್ಯವಾಯಿತು. ತುಳು ಯಕ್ಷಗಾನಕ್ಕೂ ಜೀವ ತುಂಬಿ ಬರಬಹುದು.
ಭಾಷೆಗಳು ಒಂದನ್ನೊಂದು ನುಂಗಿ ಹಾಕದಿರಲಿ
ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಮಲಯಾಳ, ಹವ್ಯಕ, ಶಿವಳ್ಳಿ ತುಳು ಹೀಗೆ ಕರಾವಳಿಯ ಯಾವುದೇ ಭಾಷೆಗಳಿರಲಿ, ಒಂದು ಭಾಷೆ ಇನ್ನೊಂದನ್ನು ನುಂಗಿ ಹಾಕದಿರಲಿ. ಬಲು ದುರಂತವೆಂದರೆ ಅಚ್ಚ ತುಳು, ಅಚ್ಚ ಕನ್ನಡ, ಅಚ್ಚ ಇಂಗ್ಲಿಷ್ ಕಾಣುವುದೇ ದುರ್ಲಭ. ಎಲ್ಲವೂ ಮಿಶ್ರತಳಿಯಂತಾಗಿದೆ. ಹೆಚ್ಚು ಭಾಷೆ ಕಲಿಯೋಣ. ಮಕ್ಕಳಿಗೆ ಕಲಿಸೋಣ. ಭಾಷೆ ಕಲಿತಷ್ಟು ಜ್ಞಾನ ಹೆಚ್ಚುವುದು, ಸಂಸ್ಕೃತಿ ತಿಳಿಯುವುದು, ಜೀವನದಲ್ಲಿ ಯಶಸ್ಸು ಕಾಣುವುದು.











