






334.58 ಕೋಟಿ ರೂ.ವ್ಯವಹಾರ, 1,43,38,390 ರೂ. ನಿವ್ವಳ ಲಾಭ, ಶೇ.10 ಡಿವಿಡೆಂಡ್


ಪಾಣಾಜೆ: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ಮಹಾಸಭೆಯು ಸೆ.19ರಂದು ಸಂಘದ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಬಿ. ಪದ್ಮನಾಭ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, 1935ರಲ್ಲಿ ಸ್ಥಾಪನೆಯಾದ ಸಂಘವು ಪ್ರಸ್ತುತ 91ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. 9 ವರ್ಷ ಕಳೆದ ಬಳಿಕ ಶತಮಾನೋತ್ಸವ ಆಚರಿಸಲಿದೆ. ಪಾಣಾಜೆ ಮತ್ತು ನಿಡಳ್ಳಿ ಗ್ರಾಮಗಳನ್ನು ಹೊಂದಿರುವ ಸಂಘವು 3250 ಎ ತರಗತಿ ಸದಸ್ಯರನ್ನು ಹೊಂದಿದ್ದು, ವರ್ಷಾಂತ್ಯಕ್ಕೆ 3,91,84,836 ರೂ. ಪಾಲು ಬಂಡವಾಳ ಮತ್ತು 45,21,05,569.21 ರೂ. ಠೇವಣಿ ಇದ್ದು, ಸದಸ್ಯರ ಸಾಲ 54,10,55,553/- ಇದೆ. ವರ್ಷಾಂತ್ಯಕ್ಕೆ 3,55,66,917.68 ರೂ. ನಿಧಿಗಳಿದ್ದು, ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ 17,33,17,101.78 ರೂ. ಹೂಡಿಕೆ ಮಾಡಲಾಗಿದೆ. ವರದಿ ಸಾಲಿನಲ್ಲಿ 1,43,38,390 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು. ಪತ್ತು ಮತ್ತು ಪತ್ತೇತರ ವ್ಯವಹಾರವನ್ನು ನಡೆಸಿ ಸದಸ್ಯರಿಗೆ ಗರಿಷ್ಠ ಸೇವೆ ನೀಡುತ್ತಿದೆ ಎಂದರು.
ಸದಸ್ಯರ ಪ್ರಶ್ನೆಗಳು
ಸದಸ್ಯರು ಡಿವಿಡೆಂಡ್ ಹೆಚ್ಚು ಮಾಡಬೇಕು ಶೇ.11 ಮಾಡಬೇಕು ಎಂದು ಕೇಳಿದಾಗ ʻಮೀಸಲು ನಿಧಿ ಹೆಚ್ಚು ಕ್ರೋಡೀಕರಿಸುವುದು ನಮ್ಮ ಸಂಘದ ಭವಿಷ್ಯದ ಭದ್ರತೆಗೆ ಅತ್ಯಂತ ಅಗತ್ಯವಾಗಿದೆ ಎಂದು ಅಧ್ಯಕ್ಷರು ಹೇಳಿದಾಗ ಅಧ್ಯಕ್ಷರ ಅನುಮತಿ ಮೇರೆಗೆ ದನಿಗೂಡಿಸಿದ ನಿರ್ದೇಶಕ ನಾರಾಯಣ ಪ್ರಕಾಶ್ ಅವರು ಇಂದು ನಮಗೆ ಡಿವಿಡೆಂಡ್ ಸ್ವಲ್ಪ ಕಡಿಮೆ ಸಿಗಬಹುದು ಆದರೆ ನಾವು ಇಂದು ಉಳಿಸುವ ಪ್ರತಿಯೊಂದು ರೂಪಾಯಿ ಮುಂದೆ ನಮ್ಮದೇ ಸಂಸ್ಥೆಯ ಬಲವನ್ನು ಹೆಚ್ಚಿಸುತ್ತದೆ ಮೀಸಲು ನಿಧಿ ಹೆಚ್ಚಾದಂತೆ ಸಂಘದ ಸ್ವಂತ ಸಂಪನ್ಮೂಲ ಹೆಚ್ಚಾಗುತ್ತದೆ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.ನಾವು ಇಂದು ಪಡೆಯುವ ಸ್ವಲ್ಪ ಹೆಚ್ಚಿನ ಡಿವಿಡೆಂಡ್ಗಿಂತ ಭವಿಷ್ಯದಲ್ಲಿ ನಮ್ಮ ಸಂಘ ಹೆಚ್ಚು ಧೃಢವಾಗಿರುವುದು ಬಹಳ ಮುಖ್ಯ ಇದು ನಮ್ಮೆಲ್ಲರ ಸಂಸ್ಥೆ. ನಮ್ಮ ಸಂಘದ ಮೀಸಲು ನಿಧಿ ಹೆಚ್ಚಾದರೆ ಯಾವುದೇ ಅನಿರೀಕ್ಷಿತ ಆರ್ಥಿಕ ಸವಾಲು ಬಂದರೂ ಅದನ್ನು ಎದುರಿಸುವ ಸಾಮರ್ಥ್ಯ ಸಂಸ್ಥೆಗೆ ಬರುತ್ತದೆ ಮುಂದಿನ ಪೀಳಿಗೆಯ ಸದಸ್ಯರಿಗೂ ಇದೇ ಸಂಸ್ಥೆ ಇನ್ನಷ್ಟು ಉತ್ತಮವಾದ ಸೇವೆ ನೀಡಲು ಸಾಧ್ಯವಾಗುತ್ತದೆ. ಸದಸ್ಯರ ಹಿತ ಮತ್ತು ಸಂಸ್ಥೆಯ ಹಿತ ಎರಡೂ ಒಂದೇ ಎಂಬ ನಂಬಿಕೆಯಿಂದ ಲಾಭದ ಒಂದು ಉತ್ತಮ ಭಾಗವನ್ನು ಮೀಸಲು ನಿಧಿಗೆ ಕ್ರೋಡೀಕರಿಸುವ ಮೂಲಕ ಸಂಸ್ಥೆಯ ಭವಿಷ್ಯವನ್ನು ಬಲಪಡಿಸುವ ದೂರದೃಷ್ಟಿಯ ನಿರ್ಧಾರಕ್ಕೆ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ ಎಂದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.




ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯರು ಕೇಳಿದ ಪ್ರಶ್ನೆಗೆ ʻಸುಸ್ತಿದಾರ ಸದಸ್ಯರಿಗೆ ಸಾಲ ಮರುಪಾವತಿಸುವಂತೆ ಮನವೊಲಿಸುವ ಕಾರ್ಯ ನಿರಂತರ ಮಾಡುತ್ತಾ ಇದ್ದೇವೆ ನಿರ್ಲಕ್ಷಿಸುವವರ ಮೇಲೆ ಸಂಘದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದಿರುವುದರಿಂದ ಕಾನೂನು ಕ್ರಮವನ್ನು ಜಾರಿ ಮಾಡಿದ್ದೇವೆ ಎಂದು ಅಧ್ಯಕ್ಷರು ಹೇಳಿದರು. ಸಂಸ್ಥೆಯ ಅಭಿವೃದ್ಧಿ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಅಡಿಕೆ ಮಾರುಕಟ್ಟೆ ದರ ವ್ಯತ್ಯಯ, ಕೃಷಿಗೆ ಕಾಡು ಪ್ರಾಣಿಗಳ, ಹುಳದ ಭಾದೆ, ಬೆಳೆವಿಮೆ ಹೀಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗಿ ಸದಸ್ಯರಿಂದ ಬಂದ ಸಲಹೆ ಸೂಚನೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ನಿ.) ಬೆಂಗಳೂರು ಇದರ ನೂತನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಅಭಿನಂದನಾ ಕಾರ್ಯಕ್ರಮ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಸಂಘದ ವತಿಯಿಂದ ಹಾರ, ಪೇಟ, ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು, ನಿರ್ದೇಶಕರಾದ ನಾರಾಯಣ ಪ್ರಕಾಶ್ ಕೆ. ನೆಲ್ಲಿತ್ತಿಮಾರು ಮತ್ತು ನಾಗೇಶ್ ಗೌಡ ಪುಳಿತ್ತಡಿ ಅಭಿನಂದನಾ ಮಾತುಗಳನ್ನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು, 1993ರಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕನಾಗಿ ಸಹಕಾರಿ ರಂಗಕ್ಕೆ ಬಂದೆ. ಇರ್ದೆ ಬೆಟ್ಟಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷನಾಗಿ ಈ ಎಲ್ಲಾ ಅವಕಾಶಗಳು ಒದಗಿ ಬಂತು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಸಂಘ ಲಾಭದ ಕಡೆಗೆ ಬಂದಿದ್ದು, ರಾಜ್ಯಮಟ್ಟದಲ್ಲೇ ಪ್ರಥಮವಾಗಿ ಲಾಭ ಬಂದ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಚುನಾವಣೆಯಲ್ಲಿ ನನಗೆ 18 ಮತಗಳು ಬಂದು ನಾನು ಜಯಗಳಿಸಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ಸಹಕಾರಿ ರಂಗಕ್ಕೆ ಸಮಸ್ಯೆಯಾದಾಗ ನಿಮ್ಮೊಂದಿಗೆ ಸದಾ ನಾನು ಇರುತ್ತೇನೆʼ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಸಿಬ್ಬಂದಿ ಸುಧಾಕರ್ ಭಟ್ ಬಂಟಾಜೆಯವರಿಗೆ ಸನ್ಮಾನ
26 ವರ್ಷಗಳ ಕಾಲ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಧಾಕರ್ ಭಟ್ ಬಂಟಾಜೆರವರನ್ನು ಸಂಘದ ವತಿಯಿಂದ ಚಿನ್ನದ ಉಂಗುರ, ಹಾರ, ಶಾಲು, ಪೇಟ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ನಿರ್ದೇಶಕರಾದ ನಾರಾಯಣ ಪ್ರಕಾಶ್ ಕೆ. ನೆಲ್ಲಿತ್ತಿಮಾರು ಮಾಜಿ ನಿರ್ದೇಶಕರುಗಳಾದ ವೆಂಕಟ್ರಮಣ ಬೋರ್ಕರ್ ಬ್ರಹ್ಮರಗುಂಡ, ರಾಧಾಕೃಷ್ಣ ರೈ ಸೇರ್ತಾಜೆ, ಸದಸ್ಯರಾದ ಸತ್ಯನಾರಾಯಣ ರೈ ನುಳಿಯಾಲುರವರು ಸನ್ಮಾನಿತರ ಬಗ್ಗೆ ತಮ್ಮ ಮಾತುಗಳನ್ನು ಆಡಿದರು. ಸನ್ಮಾನದ ಬಳಿಕ ಮಾತನಾಡಿದ ಸುಧಾಕರ್ ಭಟ್ ಬಂಟಾಜೆರವರು ನಿವೃತ್ತಿಗೊಂಡರೂ ಮುಂದೆ ಅಳಿಲು ಸೇವೆ ಮಾಡಲು ಸಿದ್ಧನಿದ್ದೇನೆ. ನಾನು ಕಲಿಯಲು ಇನ್ನೂ ತುಂಬಾ ಇದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಸಹಾಯಧನ ಹಸ್ತಾಂತರ
ಅನಾರೋಗ್ಯದಲ್ಲಿರುವ ಸಂಘದ ಸದಸ್ಯರ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಂಘದ ವತಿಯಿಂದ ಸಹಾಯಧನ ಹಸ್ತಾಂತರಿಸಲಾಯಿತು.ಸದಸ್ಯರಾದ ರಾಮ ನಾಯ್ಕ ಮುಂಡೊವುಮೂಲೆ ಪಾಣಾಜೆ, ವೇದಾವತಿ ದೇವಸ್ಯ ಪಾಣಾಜೆ,ಲಾರೆನ್ಸ್ ಡಿಸೋಜ ನಿಡ್ಪಳ್ಳಿ, ಪ್ರಮೋದ್ ನಿಡಳ್ಳಿ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು.
ನಿರ್ದೇಶಕರಾದ ಸದಾಶಿವ ರೈ ಎಸ್. ಸೂರಂಬೈಲು, ರಾಧಾಕೃಷ್ಣ ರೈ ಪಟ್ಟೆ, ಕುಮಾರ ನರಸಿಂಹ ಯು. ಬುಳೆನಡ್ಕ, ಹರೀಶ್ ಪೂಜಾರಿ ನೆಲ್ಲಿತ್ತಿಮಾರು, ಪುಷ್ಪಾವತಿ ಅಪಿನಿಮೂಲೆ, ಚಂದ್ರಕಲಾ ಕೊಪ್ಪಳ, ದಯಾನಂದ ಟಿ. ತೂಂಬಡ್ಕ, ಎಸ್ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ವಸಂತ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ತೃಪ್ತಿ ಬಿ. ಮತ್ತು ಅನುರಾಧ ಕೆ. ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕೆ. ಸ್ವಾಗತಿಸಿದರು. ಲೆಕ್ಕಿಗ ಸಂದೇಶ್ ಬಿ. ಸನ್ಮಾನ ಪತ್ರ ಹಾಗೂ ಅಭಿನಂದನಾ ಪತ್ರ ವಾಚಿಸಿದರು. ಸಿಬ್ಬಂದಿ ತೃಪ್ತಿ ಬಿ ವಂದಿಸಿದರು. ಲೆಕ್ಕಿಗ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ಎಂ. ಕೃಷ್ಣಕುಮಾರ್, ಚಿತ್ರಕುಮಾರ್, ಜಯಶ್ರೀ, ಎ. ರಮೇಶ್ ನಾಯ್ಕ, ಅವಿನಾಶ್ ಸಿ.ಎಚ್., ಹರೀಶ ಜಿ., ಸುಭಾಷಿನಿ ಡಿ.,ಪವಿತ್ರ ಕೆ. ಸುಜಿತ್ ಎ ಆರ್, ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಸುಮಿತ್ರ ವಿ. ಎಮ್. ಸಹಕರಿಸಿದರು. ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ
ಅಪರಾಹ್ನ ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಪಾಣಾಜೆ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ʻಸುಧನ್ವ ಮೋಕ್ಷʼ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಲಾ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸದಸ್ಯರಿಂದ ಹಾಗೂ ಕಲಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಉಪಹಾರ ಮತ್ತು ಭೋಜನದ ವ್ಯವಸ್ಥೆ
ಸಂಸ್ಥೆಯ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರಿಗೆ ಸಭೆಯ ಆರಂಭಕ್ಕೂ ಮುನ್ನ ಉಪಹಾರವನ್ನು ಹಾಗೂ ಸಭೆಯ ನಂತರ ಭೋಜನ ವ್ಯವಸ್ಥೆ, ಸಂಜೆ ಚಹಾ ತಿಂಡಿ ಒದಗಿಸಲಾಯಿತು.










