







ನಿಡ್ಪಳ್ಳಿ: ಗ್ರಾಮ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸುತ್ತಾಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.


ಕಳೆದ ಕೆಲವು ತಿಂಗಳುಗಳಿಂದ ಕಾಡುಕೋಣ ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದ ಗಡಿಭಾಗದಲ್ಲಿ ಸುತ್ತಾಡುತ್ತಿದೆ. ಹಗಲಿನಲ್ಲಿ ಹೆಚ್ಚಾಗಿ ಕಾಣಸಿಗದ ಕೋಣ ರಾತ್ರಿ ವೇಳೆ ತಿರುಗಾಡುತ್ತಿದೆ. ತೋಟಗಳಿಗೆ ನುಗ್ಗಿ ನೀರಾವರಿಗೆ ಅಳವಡಿಸಿದ ಪೈಪ್‌ಗಳಿಗೆ ಹಾನಿ ಮಾಡಿದ್ದು, ತೋಡಿನ ಬದಿಯ ದಾರಿಗಳು ಕುಸಿದಿವೆ.



ರಾತ್ರಿ ವೇಳೆ ರಸ್ತೆಯಲ್ಲಿ ಅಡ್ಡಾಡುವ ಕೋಣ ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ವಾಹನಗಳಿಗೂ ಹಾನಿಯಾಗಿದೆ. ಇಂತಹ ಘಟನೆಗಳು ನಿಡ್ಪಳ್ಳಿ-ಬಡಗನ್ನೂರು ರಸ್ತೆಯಲ್ಲಿ ಹಲವು ಬಾರಿ ನಡೆದಿದೆ. ಸಂಜೆಯ ನಂತರ ರಸ್ತೆಯಲ್ಲಿ ಸಂಚರಿಸಲು ಜನರು ಹಿಂಜರಿಯುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆಯಾಗುತ್ತಿದ್ದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ʼ”ನಾನು ಸೆ.18 ರಂದು ರಾತ್ರಿ ಅಂಗಡಿ ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದೆ. ನಿಡ್ಪಳ್ಳಿ ಪಳಂಬೆಗೆ ತಲುಪುವ ವೇಳೆ ಗುಡ್ಡದ ಪ್ರದೇಶದಿಂದ ಆಯತಪ್ಪಿ ಕಾಡುಕೋಣ ನನ್ನ ಮೇಲೆ ಬಿತ್ತು. ವಾಹನ ಸಮೇತ ರಸ್ತೆಗೆ ಬಿದ್ದು ಕೈ, ಕಾಲು ಮತ್ತು ಹಣೆಗೆ ಗಾಯವಾಯಿತು. ತಲೆ ರಸ್ತೆಗೆ ಬಡಿದು ಹೆಲ್ಮೆಟ್ ಒಡೆದಿದೆ. ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರಿಂದ ನನಗೆ ತುಂಬಾ ನಷ್ಟವಾಗಿದೆ”
ರಾಧಾಕೃಷ್ಣ ಪಾಟಾಳಿ ಬಡಕಾಯೂರು










