







ಕಡಬ: ಕರ್ನಾಟಕ ಸಾವಯವ ಕೃಷಿ ಯೋಜನೆ ಬಿ.ಸಿ.ರೋಡು ಹಾಗೂ ಮಂಗಳ ಕಿಸಾನ್ ಸಮೃದ್ಧಿ ವಿಭಾಗದ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಸಾವಯವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ನಡೆಯಿತು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ಸಾವಯವ ಕೃಷಿ ಯೋಜನೆಯ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಡಬ ವಿಭಾಗದಿಂದ ಆಯ್ಕೆಯಾದ ಆರು ಮಂದಿ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಡಬ ವಿಭಾಗದಿಂದ ಶಶಾಂಕ್ ಗೋಖಲೆ ಮಾರ್ಗದಮನೆ, ತೀರ್ಥಶ್ ಗೌಡ ಅಮೈ, ಶಂಕರ ಭಟ್ ಮಾರ್ಗದಮನೆ, ಕೃಷ್ಣಪ್ಪ ಗೌಡ ಎಲ್ಯ, ವಿಮಾಲಾಕ್ಷಿ ಮಜ್ಜಲಡ್ಡ ಹಾಗೂ ನಾಗಪ್ಪ ಗೌಡ ಪಾಲೇಚಾರು ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಸಾವಯವ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಸೆ.21ರಂದು ಬಿ.ಸಿ.ರೋಡಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ದುರ್ಗಾಂಭಾ ಕ್ಷೇತ್ರದ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ, ಶಾಸಕರಾದ ರಾಜೇಶ್ ನಾಯ್ಕ್, ಅಶೋಕ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಆಯ್ಕೆಯಾದ ಒಟ್ಟು 160 ಅರ್ಹ ರೈತರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಹಾಗೂ ಸಾವಯವ ಕೃಷಿಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.












