ಕನ್ನಡ ಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಅಂತಾರಾಷ್ಟ್ರೀಯ ಫಾರ್ ಈಸ್ಟ್ ಏಷ್ಯಾ ಲೀಡರ್‌ಷಿಪ್ ಅವಾರ್ಡ್’ಗೆ ಪುತ್ತೂರಿನ ವಿದ್ಯಾ ಆರ್. ಗೌರಿ ಆಯ್ಕೆ

0

ಪುತ್ತೂರು: ಸಾರ್ವಜನಿಕ ಜೀವನ, ಆಡಳಿತ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಬಹುಮುಖ ಸೇವೆಯನ್ನು ಗುರುತಿಸಿ ಪುತ್ತೂರಿನ ಯುವ ಮಹಿಳಾ ನಾಯಕಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಅವರು ಕನ್ನಡ ಪ್ರಭ’ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್’ ಜಂಟಿಯಾಗಿ ಆಯೋಜಿಸುತ್ತಿರುವ ಪ್ರತಿಷ್ಠಿತ ಫಾರ್ ಈಸ್ಟ್ ಏಷ್ಯಾ ಲೀಡರ್‌ಷಿಪ್ ಸಮಿಟ್ ಹಾಗೂ ಲೀಡರ್‌ಷಿಪ್ ಅವಾರ್ಡ್-2026’ಗೆ ಆಯ್ಕೆಯಾಗಿದ್ದಾರೆ.

ಸೆ.30ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಉದ್ಯಮ ಹಾಗೂ ನಾಯಕತ್ವ ಸಮಾವೇಶದಲ್ಲಿ ವಿದ್ಯಾ ಗೌರಿ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುವುದು. ಉದ್ಯಮ, ಆಡಳಿತ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ನಾಯಕತ್ವ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳ ಉದ್ಯಮಿಗಳು, ನಾಯಕರು ಹಾಗೂ ಉನ್ನತಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆಡಳಿತ-ಸಾಮಾಜಿಕ ಸೇವೆಯಲ್ಲಿ ವಿಶಿಷ್ಟ ಛಾಪು ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ 19ನೇ ವಾರ್ಡ್ (ದರ್ಬೆ-ಪಾಂಗಲಾಯಿ) ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿರುವ ವಿದ್ಯಾ ಗೌರಿ ಅವರು ಆಡಳಿತಾತ್ಮಕ ದೂರದೃಷ್ಟಿ, ಯೋಜನಾ ಸಾಮರ್ಥ್ಯ ಹಾಗೂ ಜನಪರ ಬದ್ಧತೆಯಿಂದ ಗಮನ ಸೆಳೆದಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ರೂ.2 ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ, ಚರಂಡಿ, ತಡೆಗೋಡೆ, ಹೈಮಾಸ್ಟ್ ದೀಪ ಹಾಗೂ ಕುಡಿಯುವ ನೀರಿನ ಕಾಮಗಾರಿಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶೈಕ್ಷಣಿಕವಾಗಿ ಬಿ.ಕಾಂ., ಎಂ.ಬಿ.ಎ. (ಮಾನವ ಸಂಪನ್ಮೂಲ) ಸೇರಿದಂತೆ ನಾಯಕತ್ವ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ವಿದ್ಯಾಭ್ಯಾಸ ಪಡೆದಿರುವ ಅವರು, ಹಣಕಾಸು ಹಾಗೂ ನಿರ್ವಹಣಾ ಕ್ಷೇತ್ರದಲ್ಲಿಯೂ ಅನುಭವ ಹೊಂದಿದ್ದಾರೆ. ಮಂಗಳೂರು ಶೇರು ಮಾರುಕಟ್ಟೆಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿರುವ ಅವರು, ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕಿಯಾಗಿ ಹಾಗೂ ಶಾಲೆಗಳಲ್ಲಿ ಮೃದು ಕೌಶಲ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ -ಆರೋಗ್ಯ ಕ್ಷೇತ್ರಕ್ಕೂ ಕೊಡುಗೆ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿವಿಧ ಜವಾಬ್ದಾರಿಗಳನ್ನು ಎರಡು ದಶಕಗಳಿಂದ ನಿರ್ವಹಿಸುತ್ತಿರುವ ವಿದ್ಯಾ ಗೌರಿ ಅವರು ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ಆನ್‌ಲೈನ್ ಸ್ಕೌಟ್ ಚಟುವಟಿಕೆಗಳನ್ನು ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯೆಯಾಗಿದ್ದ ಅವಧಿಯಲ್ಲಿ ಡಯಾಲಿಸಿಸ್ ಘಟಕ, ಆಕ್ಸಿಜನ್ ಘಟಕ, ಸೌರಶಕ್ತಿ ವ್ಯವಸ್ಥೆ ಹಾಗೂ ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ರೂಪುರೇಷೆಯಲ್ಲಿ ತೊಡಗಿಸಿಕೊಂಡಿದ್ದರು. ಬಡ ರೋಗಿಗಳ ನೆರವಿಗಾಗಿ ವಸ್ತ್ರ ನಿಧಿ’, ಶಾಲಾ ಮಕ್ಕಳಿಗಾಗಿ ಡೀವರ್ಮಿಂಗ್ ಕಾರ್ಯಕ್ರಮ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಸ್ವತಃ ಹಲವು ಬಾರಿ ರಕ್ತದಾನ ಮಾಡುವ ಮೂಲಕವೂ ಮಾದರಿಯಾಗಿದ್ದಾರೆ.

ಶಾಲಾ ಅಭಿವೃದ್ಧಿಗೆ ಜನಸಹಭಾಗಿತ್ವ:
ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ಸಹಕಾರದಿಂದ ಪರ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ರೂ.13 ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಿ, ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಜೀವನ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಆಪ್ತ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಸಾಮರಸ್ಯಕ್ಕೆ ಒತ್ತು:
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮಗಳಿಗೆ ಒತ್ತು ನೀಡಿರುವ ಅವರು, ವಿವಿಧ ಹಿಂದುಳಿದ ಬಡಾವಣೆಗಳಿಗೆ ಭೇಟಿ ನೀಡಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಸ್ಥಳೀಯರೊಂದಿಗೆ ಆಯೋಜಿಸಿದ್ದಾರೆ. ಸಹಭೋಜನ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಶ್ರೀ ರಾಮಚಂದ್ರಾಪುರ ಮಠದ ವಿವಿಧ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಶ್ರೀಗುರುಗಳಿಂದ ಸಮಾಜ ಸೇವಾತಿಲಕ’ ಹಾಗೂ ಸರ್ವೋತ್ತಮ ಸೇವಕಿ’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ರಾಜಕೀಯದಲ್ಲೂ ಸಕ್ರಿಯ:
ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ವಿದ್ಯಾ ಗೌರಿ ಅವರು ಪ್ರಸ್ತುತ ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ವಿವಿಧ ಸಂಘಟನಾ ಹಾಗೂ ಜನಸಂಪರ್ಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಕೇಂದ್ರ ಸರಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯದಲ್ಲೂ ಭಾಗಿಯಾಗಿದ್ದಾರೆ. ಸೌಮ್ಯ ಸ್ವಭಾವ, ಸಂಘಟನಾ ಸಾಮರ್ಥ್ಯ, ಶೈಕ್ಷಣಿಕ ಪಕ್ವತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಮೇಳೈಸಿಕೊಂಡು ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ವಿದ್ಯಾ ಆರ್. ಗೌರಿ ಅವರು ಅಂತಾರಾಷ್ಟ್ರೀಯ ಮಟ್ಟದ `ಫಾರ್ ಈಸ್ಟ್ ಏಷ್ಯಾ ಲೀಡರ್‌ಷಿಪ್ ಅವಾರ್ಡ್’ಗೆ ಆಯ್ಕೆಯಾಗಿರುವುದು ಪುತ್ತೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here