







ಪುತ್ತೂರು : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಸುಮಾರು 29 ವರ್ಷಗಳ ಕಾಲ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿರುವ, ಸೋಮವಾರಪೇಟೆ ಅಗ್ನಿಶಾಮಕ ಠಾಣೆಯ ಪ್ರಮುಖ ಫೈರ್ ಫೈಟರ್ ಹಾಗೂ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಈಶ್ವರ ಪಿ. ಅವರು ಸೆ. 30 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ.


ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಲ್ಲದಗುರಿ ಕುಜುಂಬ ಮತ್ತು ಅಂಗಾರೆ ದಂಪತಿಯ ಪುತ್ರರಾಗಿ ದಿನಾಂಕ 28-09-1966 ರಂದು ಜನಿಸಿದ ಈಶ್ವರ ಪಿ. ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅರಿಯಡ್ಕ ಮತ್ತು ಕುಂಬ್ರದ ಸರ್ಕಾರಿ ಶಾಲೆಗಳಲ್ಲಿ ಪೂರೈಸಿದರು. ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಬಿ.ಎಡ್. ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೂರೈಸಿದ ಇವರು, ಇಲಾಖೆಗೆ ಸೇರ್ಪಡೆಗೊಳ್ಳುವ ಮುನ್ನ ಕುಂಬ್ರ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು ೬ ವರ್ಷಗಳ ಕಾಲ ಇಂಗ್ಲಿಷ್ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.



ಇಲಾಖೆಯಲ್ಲಿ 29 ವರ್ಷಗಳ ದಕ್ಷ ಸೇವೆ
ದಿನಾಂಕ 10-11-1997 ರಂದು ಅಗ್ನಿಶಾಮಕ ಇಲಾಖೆಗೆ ಫೈರ್ ಫೈಟರ್ ಆಗಿ ಸೇರ್ಪಡೆಗೊಂಡ ಇವರು, ಆರ್‌ಎ ಮುಂಡಕೂರು ಬೆಂಗಳೂರಿನಲ್ಲಿ ತರಬೇತಿ ಮುಗಿಸಿ ಕುಶಾಲನಗರ ಹಾಗೂ ಪುತ್ತೂರು ಅಗ್ನಿಶಾಮಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. ತದನಂತರ 18-06-2018 ರಂದು ಪ್ರಮುಖ ಫೈರ್ ಫೈಟರ್ ಹುದ್ದೆಗೆ ಬಡ್ತಿ ಹೊಂದಿ ಸೋಮವಾರಪೇಟೆ ಅಗ್ನಿಶಾಮಕ ಠಾಣೆಯಲ್ಲಿ ಪ್ರಭಾರ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕೃತಿ ವಿಕೋಪದ ವೇಳೆ ಜೀವ ರಕ್ಷಕ:
2018- 19ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಹಾಗೂ ಪ್ರವಾಹದ ಸಂದರ್ಭದಲ್ಲಿ ಇವರು ಜೀವದ ಹಂಗು ತೊರೆದು ಸಾಹಸಮಯ ಕಾರ್ಯಾಚರಣೆ ನಡೆಸಿದ್ದರು. ಸಾರ್ವಜನಿಕರ ಜೀವ ಹಾಗೂ ಆಸ್ತಿ-ಪಾಸ್ತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರ ಕಾರ್ಯವನ್ನು ಗುರುತಿಸಿ ಕೊಡಗು ಜಿಲ್ಲಾಡಳಿತದಿಂದ “ಪ್ರಶಂಸ ಪತ್ರ” ನೀಡಿ ಗೌರವಿಸಲಾಗಿತ್ತು.ತಮ್ಮ ಕಾರ್ಯಕ್ಷಮತೆ, ವಿನಮ್ರ ನಡವಳಿಕೆ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುವ ಈಶ್ವರ ಪಿ. ಅವರಿಗೆ, ಅವರ ಪತ್ನಿ ಶೋಭ ಕೆ., ಪುತ್ರ ಬೆಂಗಳೂರಿನಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ರಜನೀಶ್ ಪಿ. ಹಾಗೂ ಪುತ್ರಿ ರಶ್ಮಿ ಪಿ.(ಬಿ.ಎಡ್ ವಿದ್ಯಾರ್ಥಿನಿ)ರವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.










