







ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೆ. ಶಿವರಾಮ ಕಾರಂತ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ನೀಡಲಾಗುವ ಶಿವರಾಮ ಕಾರಂತ ಬಾಲವನ ರಾಜ್ಯಪ್ರಶಸ್ತಿಯನ್ನು ಈ ಬಾರಿ ಪರಿಸರ ಕ್ಷೇತ್ರದ ಸಾಧಕರಿಗೆ ನೀಡಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.


ಅ.10ರಂದು ಪರ್ಲಡ್ಕ ಬಾಲವನದಲ್ಲಿ ನಡೆಯಲಿರುವ ಡಾ|ಶಿವರಾಮ ಕಾರಂತ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಗ್ಗೆ ಸೆ.28ರಂದು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.



ಈ ಸಾಲಿನ ಡಾ| ಕೆ. ಶಿವರಾಮ ಕಾರಂತ ಪ್ರಶಸ್ತಿಗಾಗಿ ಬಂದಿರುವ ಹೆಸರುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಉಮೇಶ್ ನಾಯಕ್ ಅವರು ವನ್ಯಜೀವಿ ವಿಜ್ಞಾನಿ, ಹುಲಿ ಸಂರಕ್ಷಣಾ ತಜ್ಞ ಹಾಗೂ ಪರಿಸರ ವಿಜ್ಞಾನಿಯಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಲ್ಲಾಸ್ ಕಾರಂತ, ಬೆಂಗಳೂರು, ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ, ಈ ಬಾರಿಯ ಡಾ| ಕೆ. ಶಿವರಾಮ ಕಾರಂತ ಪ್ರಶಸ್ತಿಯನ್ನು ಪರಿಸರ ಕ್ಷೇತ್ರಕ್ಕೆ ನೀಡುವುದು ಹಾಗೂ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯನ್ನು ಸಮಿತಿಯ ಮೂಲಕ ನಡೆಸುವುದು ಎಂದು ತೀರ್ಮಾನಿಸಲಾಯಿತು.
ಶಿವರಾಮ ಕಾರಂತರ ಕುರಿತು ಉಪನ್ಯಾಸ ನೀಡಲು ಪುರುಷೋತ್ತಮ ಬಿಳಿಮಲೆ, ಲಕ್ಷ್ಮೀಶ ತೋಳ್ಪಾಡಿ ಹಾಗೂ ಡಾ|ರಾಜೇಶ್ ಬೆಜ್ಜಂಗಳ ಅವರ ಹೆಸರುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಡಾ| ಶಿವರಾಮ ಕಾರಂತ ವೃತ್ತ ಎಂದು ನಾಮಕರಣ ಮಾಡಬೇಕು:
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕಾರಂತರ 125ನೇ ಜನ್ಮದಿನಾಚರಣೆಯ ಅಂಗವಾಗಿ ಪುತ್ತೂರಿನಲ್ಲಿ ಡಾ| ಶಿವರಾಮ ಕಾರಂತರ ಪ್ರತಿಮೆ ಸ್ಥಾಪಿಸಬೇಕು ಹಾಗೂ ವೃತ್ತವೊಂದಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಶಿವರಾಮ ಕಾರಂತ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಬಾಲವನವನ್ನು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು, ಬಾಲವನ ಅಭಿವೃದ್ಧಿ ಸಮಿತಿಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವುದು, ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವುದು ಮತ್ತು ಪುತ್ತೂರಿನಲ್ಲಿ ಡಾ| ಶಿವರಾಮ ಕಾರಂತ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ವಿನಂತಿಸಿದರು.

ಸಭೆಗೆ ಹಾಜರಾಗದವರು ಸಮಿತಿಯಲ್ಲಿ ಯಾಕೆ?:
ಸಭೆಯಲ್ಲಿ ಸಮಿತಿ ಸದಸ್ಯರ ಹೆಸರುಗಳನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಬಾಲವನ ಸಮಿತಿ ಸದಸ್ಯರಾಗಿರುವ ಪ್ರೊ. ದತ್ತಾತ್ರೇಯ ರಾವ್ ಅವರು ಸಭೆಗೆ ಗೈರಾಗಿದ್ದಕ್ಕೆ ನಿವೃತ್ತ ಪ್ರಾಧ್ಯಾಪಕ ವಿ.ಬಿ. ಅರ್ತಿಕಜೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಭೆಗೆ ಬಾರದವರು ಸಮಿತಿಯಲ್ಲಿ ಯಾಕೆ? ಸಭೆಗೆ ಬಾರದವರನ್ನು ಆಯ್ಕೆ ಮಾಡಿರುವುದು ಯಾಕೆ? ಈ ಸಭೆಗೆ ಬಾರದವರು ಮುಂದೆ ಬರುತ್ತಾರಾ? ನಾವು ಇಷ್ಟು ದೂರ ಬಂದು ಇಷ್ಟು ಹೊತ್ತು ಇಲ್ಲಿ ಕುಳಿತು ಕಾಯುವುದು ಯಾಕೆ? ಎಂದು ಪ್ರಶ್ನಿಸಿದ ಅವರು, ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ತೆರಳಲು ಮುಂದಾದರು. ಈ ಸಂದರ್ಭದಲ್ಲಿ ಅವರನ್ನು ಸಮಾಧಾನಪಡಿಸಿ, ಬಾಲವನ ಸಮಿತಿಯು ಸರ್ಕಾರದಿಂದ ಅನುಮೋದನೆಯಾಗಿದ್ದು, ದತ್ತಾತ್ರೇಯ ರಾವ್ ಅವರು ಬಾಲವನ ಅಭಿವೃದ್ಧಿ ಸಮಿತಿಯಲ್ಲಿರುವ ಕಾರಣ ಅವರ ಹೆಸರು ಬಂದಿರುವುದು ಎಂದು ತಿಳಿಸಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿಯು ಪ್ರತ್ಯೇಕವಾಗಿದ್ದು, ಅದನ್ನು ಈ ಸಭೆಯಲ್ಲಿಯೇ ಆಯ್ಕೆ ಮಾಡಲಾಗಿದೆ ಎಂದು ಮನವರಿಕೆ ಮಾಡಲಾಯಿತು.
ಸರ್ಕಾರಕ್ಕೆ ಅಭಿನಂದನೆ:
ಬೆಂಗಳೂರಿನಲ್ಲಿ ರೂ.16,೦೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 18,399 ನಿವೇಶನಗಳ ಬಡಾವಣೆಗೆ ಡಾ| ಶಿವರಾಮ ಕಾರಂತ ಬಡಾವಣೆ ಎಂದು ನಾಮಕರಣ ಮಾಡಿರುವ ರಾಜ್ಯ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅಭಿನಂದನೆ ಸಲ್ಲಿಸಿದರು.
ಡಾ| ಶಿವರಾಮ ಕಾರಂತ ಅಧ್ಯಯನ ಪೀಠ ಸ್ಥಾಪಿಸಬೇಕು:
ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ. ವಿಜಯ ಹಾರ್ವಿನ್ ಮಾತನಾಡಿ, ಪುತ್ತೂರಿನಲ್ಲಿ ಡಾ| ಶಿವರಾಮ ಕಾರಂತ ಅಧ್ಯಯನ ಪೀಠ ಸ್ಥಾಪಿಸುವಂತೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಇದೆ. ಅದನ್ನು ಶೀಘ್ರವಾಗಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎಸ್.ಬಿ. ಕೂಡಲಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಬಾಲವನ ಸಮಿತಿ ಸದಸ್ಯರಾದ ಪಾರ್ಥ ವಾರಾಣಾಸಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಸ್ವಾತಿ ಜೆ. ರೈ, ಪ್ರತಿಮಾ ಹೆಗ್ಡೆ, ನಯನಾ ರೈ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ರೈ, ನಗರಸಭಾ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ, ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಸಭೆಯಲ್ಲಿ ಭಾಗವಹಿಸಿದ್ದರು. ರಮೇಶ್ ಉಳಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಅರಿಯಡ್ಕ ವಂದಿಸಿದರು.
ಸಭೆಯಲ್ಲಿ ಈ ಸಾಲಿನ ಡಾ| ಕೆ. ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಸದಸ್ಯ ಕಾರ್ಯದರ್ಶಿಯಾಗಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಗೌರವ ಸದಸ್ಯರಾಗಿ ನಿವೃತ್ತ ಪ್ರಾಧ್ಯಾಪಕ ವಿ.ಬಿ. ಅರ್ತಿಕಜೆ, ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ಒಂದು ವರ್ಷದೊಳಗೆ ಅಭಿವೃದ್ಧಿ ಕಾಮಗಾರಿ ಪೂರ್ಣ
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಬಾಲವನದಲ್ಲಿ ಈ ಹಿಂದೆ ಇಷ್ಟೊಂದು ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಶಾಸಕರ ಮಾರ್ಗದರ್ಶನದಂತೆ ಈಗ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದಿರುವ ಅನುದಾನಕ್ಕೆ ಸಂಬಂಧಿಸಿ ಮಾಸ್ಟರ್ ಪ್ಲಾನ್ ರೂಪಿಸಿಕೊಂಡು ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಒಂದು ವರ್ಷದೊಳಗೆ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಅವರು ಶಿವರಾಮ ಕಾರಂತರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡುವಂತೆ ಪ್ರಸ್ತಾಪ ಬಂದಿದ್ದು, ಬಾಲವನಕ್ಕೆ ಬರುವ ರಸ್ತೆಯಲ್ಲಿರುವ ಪರ್ಲಡ್ಕ ವೃತ್ತಕ್ಕೆ ಶಿವರಾಮ ಕಾರಂತರ ಹೆಸರನ್ನು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.










