







ಪತ್ರಿಕಾ ವರದಿ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರದ ಪಿ.ಡಿ. ಭೇಟಿ : ಸಮಸ್ಯೆ ಪರಿಹಾರದ ಭರವಸೆ


ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿಯ ಎಡವಟ್ಟಿನಿಂದಾಗಿ ವೃದ್ದ ದಂಪತಿಗಳಿಬ್ಬರು ಕಳೆದ ಒಂದು ವರ್ಷದಿಂದ ಅಘೋಷಿತ ದಿಗ್ಭಂಧನಕ್ಕೀಡಾದ ಘಟನೆಯ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಿಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಹಾಗೂ ಎಂಜಿನಿಯರ್ಗಳ ತಂಡ ಸೋಮವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿತು.



ಉಪ್ಪಿನಂಗಡಿಯ ಹೃದಯಭಾಗ ಎಂಬಂತಿರುವ ಗಾಂಧಿಪಾರ್ಕ್ ನಿವಾಸಿ 78 ರ ಹರೆಯದ ಗಿಲ್ಬರ್ಟ್ ಆಂಟನಿ ಮೆನೇಜಸ್ ಅವರ ಪತ್ನಿ 73 ರ ಹರೆಯದ ವೃದ್ಧೆಯಾಗಿದ್ದು, ಅನಾರೋಗ್ಯ ಪೀಡಿತರಾಗಿದ್ದಾರೆ. ಅವರನ್ನು ಪದೇ ಪದೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆಯನ್ನು ಹೊಂದಿದ್ದರೂ , ಮನೆಯ ಸಂಪರ್ಕ ರಸ್ತೆಯು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾರಣಕ್ಕೆ ನಾಶವಾಗಿ ಮನೆಯಿಂದ ಹೊರಗೆ ವಾಹನದಲ್ಲಿ ಕರೆದೊಯ್ಯದ ದುಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸುಧೀರ್ಘ ಒಂದು ವರ್ಷದಿಂದ ಸಂಕಷ್ಠಕ್ಕೀಡಾಗಿದ್ದರೂ, ಸಹಾಯಕ್ಕಾಗಿ ಮಾಡಿದ ಮನವಿಗಳೆಲ್ಲವೂ ವ್ಯರ್ಥವಾಗಿ ಯಾವುದೇ ಪ್ರಯೋಜನವಾಗದೆ ಇದ್ದ ಸನ್ನಿವೇಶವನ್ನು ` ಸುದ್ದಿ ಬಿಡುಗಡೆ’ ಪತ್ರಿಕೆಯು ಸೋಮವಾರದಂದು ಪ್ರಕಟಿಸಿ ಕಾಮಗಾರಿಯ ಲೋಪವನ್ನು ಅನಾವರಣಗೊಳಿಸಿತ್ತು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು:
ಪತ್ರಿಕಾ ವರದಿಯಲ್ಲಿ ಪ್ರಕಟವಾದ ವೃದ್ದ ದಂಪತಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿಯವರನ್ನು ಕಚೇರಿಗೆ ಕರೆಯಿಸಿ , ಕಾಮಗಾರಿಯಿಂದ ಸಮಸ್ಯೆಗೆ ತುತ್ತಾದ ಈ ವೃದ್ಧ ದಂಪತಿಗೆ ತ್ವರಿತ ನ್ಯಾಯ ದೊರಕಿಸಬೇಕೆಂದು ನಿರ್ದೇಶಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ ಸಾಯಂಕಾಲವೇ ಉಪ್ಪಿನಂಗಡಿಗೆ ಭೇಟಿ ನೀಡಿದ ಜಾವೇದ್ ರವರು ಮಿನೇಜಸ್ ದಂಪತಿಯ ಸಮಸ್ಯೆ ನಿವಾರಣೆಗೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳನ್ನು ಪರಿಶೀಲಿಸಿದರು ಹಾಗೂ ಸ್ಥಳೀಯಾಡಳಿತದ ನೆರವನ್ನು ಪಡೆದು ನೆರೆಹೊರೆಯವರಿಂದ ಸೃಷ್ಟಿಸಲ್ಪಟ್ಟ ಅಡೆತಡೆಗಳನ್ನು ನಿವಾರಿಸಿ, ತಡೆಯಾಗಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಿ ವೃದ್ದ ದಂಪತಿಗಳ ಮನೆಗೆ ರಸ್ತೆ ನಿರ್ಮಿಸುವ ಭರವಸೆ ನೀಡಿದರು. ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್ ರಘುನಾಥ ರೆಡ್ಡಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಷಿಫ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಿಕೆಗೆ ಧನ್ಯವಾದ ತಿಳಿಸಿದ ಮೆನೇಜಸ್
ಪತ್ರಿಕಾ ವರದಿ ಪ್ರಕಟವಾದ ಬೆನ್ನಿಗೆಯೇ ತಮ್ಮ ಸಮಸ್ಯೆಯ ಬಗ್ಗೆ ಪರಿಶೀಲಿಸಲು ಸ್ಥಳಕ್ಕಾಗಮಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಮತ್ತಿತರ ಅಧಿಕಾರಗಳ ಭೇಟಿಗೆ ಕಾರಣವಾದ ಪತ್ರಿಕೆಗೆ ಗಿಲ್ಬರ್ಟ್ ಆಂಟನಿ ಮೆನೇಜಸ್ ಕೃತಜ್ಞತಾ ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.










