







ಪುತ್ತೂರು: ಹಿರ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೀತಾರಾಮ ಆಚಾರ್ಯ ಅವರು ಸೆ.30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.


ಸೀತಾರಾಮ ಆಚಾರ್ಯ ಅವರು 1997ರಲ್ಲಿ ಸ.ಹಿ.ಪ್ರಾ.ಶಾಲೆ ಕೊಯಿಲ ವಳಕಡಮ ಇಲ್ಲಿ ಸರ್ಕಾರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಸುಮಾರು 7 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ತದನಂತರ ಸ.ಹಿ.ಪ್ರಾ.ಶಾಲೆ ವಳಾಲು ಬಜತ್ತೂರು, ಸ.ಹಿ.ಪ್ರಾ.ಶಾಲೆ ಗೋಳಿತೊಟ್ಟು ಇಲ್ಲಿ ಕರ್ತವ್ಯ ನಿರ್ವಹಿಸಿ 2013ರಲ್ಲಿ ಸ.ಹಿ.ಪ್ರಾ.ಶಾಲೆ ಹಿರ್ತಡ್ಕ ಇಲ್ಲಿಗೆ ವರ್ಗಾವಣೆಗೊಂಡು 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ.



ಕುಂದಾಪುರ ತಾಲೂಕಿನ ಶಿರೂರಿನ ನಿವಾಸಿಯಾಗಿರುವ ಸೀತಾರಾಮ ಆಚಾರ್ಯ ತನ್ನ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು, ಹೊನ್ನಾವರದಲ್ಲಿ ಶಿಕ್ಷಕ ತರಬೇತಿ ಪೂರೈಸಿರುತ್ತಾರೆ. ಪತ್ನಿ ಮಂಜುಳಾ ಹಾಗೂ ಪುತ್ರರಾದ ಆದಿತ್ಯ ಆಚಾರ್ಯ ಮತ್ತು ವಿವೇಕ ಆಚಾರ್ಯ ಅವರೊಂದಿಗೆ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದಾರೆ.










